ಸಾರಾಂಶ
ಹುಬ್ಬಳ್ಳಿ: ಕಲುಷಿತ ಆಹಾರ, ಕಲಬೆರಕೆಯಿಂದ ತುಂಬಿರುವ ಮಾರುಕಟ್ಟೆ ಉತ್ಪನ್ನಗಳ ನಡುವೆ ಗೆಡ್ಡೆ ಗೆಣಸು ಭಿನ್ನವಾಗಿ ನಿಲ್ಲುತ್ತದೆ. ನೈಸರ್ಗಿಕವಾಗಿ ಬೆಳೆಯುವ ಗೆಡ್ಡೆ ಗೆಣಸುಗಳನ್ನು ಗ್ರಾಹಕರು ಬಳಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಕರೆ ನೀಡಿದರು. ಇಲ್ಲಿನ ಮೂರುಸಾವಿರ ಮಠದ ಡಾ. ಮೂಜಗಂ ಸಭಾಭವನದಲ್ಲಿ ಸಹಜ ಸಮೃದ್ಧ, ಆರೋಗ್ಯಯುತ ಆಹಾರ ಸೇವನೆಗೆ ನಿರ್ಲಕ್ಷಿತ ಬೆಳೆ ಮತ್ತು ಉತ್ಪನ್ನಗಳು ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಗಡ್ಡೆ ಗೆಣಸು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಡ್ಡೆ ಗೆಣಸು ಬಳಕೆಯನ್ನು ದೈನಂದಿನ ಜೀವನದಲ್ಲಿ ಅಳವಡಿಸಲು ತಾಯಂದಿರ ಪಾತ್ರ ಬಹುದೊಡ್ಡದು. ಈ ಮೇಳದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಹಜ ಸಮೃದ್ಧದ ಕೆಲಸ ಶ್ಲಾಘನೀಯ. ಇಂತಹ ಮೇಳ ಮತ್ತು ರೈತರ ಮಾರುಕಟ್ಟೆ ನಡೆಸಲು ಅಗತ್ಯವಿರುವ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀ ಮಾತನಾಡಿ, ಗಡ್ಡೆ ಗೆಣಸು ಋಷಿ ಮುನಿಗಳು ಮತ್ತು ಆದಿವಾಸಿಗಳ ಆಹಾರವಾಗಿತ್ತು. ಪ್ರಕೃತಿಯ ಕೊಡುಗೆಯಾದ ಕಂದಮೂಲಗಳನ್ನು ಜನಪ್ರಿಯಗೊಳಿಸಲು ಸರ್ಕಾರ ಮುಂದಾಗಬೇಕು. ಸ್ಥಳೀಯ ಜನಪ್ರತಿನಿಧಿಗಳು ಒತ್ತಾಸೆಯಾಗಿ ನಿಲ್ಲಬೇಕು ಎಂದರು.
ಧಾರವಾಡದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಲಕ್ಷಣ ಕುಕನೂರ ಮಾತನಾಡಿ, ಪೋರ್ಚುಗೀಸರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟ ಆಫ್ರಿಕನ್ ಮೂಲ ಹೊಂದಿರುವ ಸಿಹಿ ಗೆಣಸಿನಲ್ಲಿ ಹಳದಿ, ಕೆಂಪು, ಬಿಳಿ ಮತ್ತು ನೇರಳೆ ಬಣ್ಣದ ತಳಿಗಳಿವೆ. ವಿಟಮಿನ್ ಸಿ, ಪೊಟ್ಯಾಶಿಯಮ್, ಬೀಟಾ ಕೆರಟಿನ್ನಂತಹ ಅಂಶಗಳಿವೆ. ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಕ್ಯಾನ್ಸರ್‌ನಂತಹ ಮಾರಕ ರೋಗ ದೂರವಿಡುವ ಶಕ್ತಿ ಹೊಂದಿದೆ. ಇದರ ಮೌಲ್ಯವರ್ಧನೆಯಿಂದ ರೈತರು ಲಾಭ ಪಡೆಯಬಹುದು ಎಂದರು.
ಗಡ್ಡೆ ಗೆಣಸಿನ ಕೃಷಿಯಲ್ಲಿ ಯಶಸ್ವಿಯಾಗಿರುವ ಶಿಗ್ಗಾಂವಿ ತಾಲೂಕಿನ ಮುಗಳಿಯ ಯುವ ಕೃಷಿಕ ನಾಗರಾಜ ಹುಲಗೂರ, ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ, ಕಾರ್ಯದರ್ಶಿ ಎ.ವಿ. ಸಂಕನೂರ, ಸಹಜ ಸಮೃದ್ದ ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೈತರಿಗಾಗಿ ಗಡ್ಡೆ ಗೆಣಸಿನ ಕೃಷಿ ಮತ್ತು ಮಾರುಕಟ್ಟೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು. ಅಖಿಲ ಭಾರತ ಗಡ್ಡೆ ಗೆಣಸು ಸಂಶೋಧನಾ ಯೋಜನೆಯ ಮುಖ್ಯಸ್ಥ ಡಾ. ಇಮಾಮ್ ಸಾಹೇಬ ಜತ್ತ ಗಡ್ಡೆ ಗೆಣಸಿನ ವೈವಿಧ್ಯ ಮತ್ತು ಸಾಗುವಳಿಯ ಮಾಹಿತಿ ನೀಡಿದರು. ಸಹಜ ಸೀಡ್ಸ್‌ನ ಮನು, ಗಡ್ಡೆ ಗೆಣಸುಗಳ ಮಾರುಕಟ್ಟೆಯ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ನಿಶಾಂತ್ ಬಂಕಾಪುರ ನಿರೂಪಿಸಿದರು.