ನಗರದ ನಾಲ್ವಾಡದವರ ಓಣಿಯ ಗದಗ ಕಾ ರಾಜಾ ಶ್ರೀ ಗಜಾನನೋತ್ಸವ ಸಮಿತಿಯಿಂದ ೫೦ನೇ ವರ್ಷದ ಶ್ರೀವಿಘ್ನೇಶ್ವರ ಪ್ರತಿಷ್ಠಾಪನಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಈ ಬಾರಿ ವಿಶೇಷವಾಗಿ ಶ್ರೀ ಮೈಲಾರಲಿಂಗೇಶ್ವರ ರೂಪಕ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಗದಗ
ನಗರದ ನಾಲ್ವಾಡದವರ ಓಣಿಯ ಗದಗ ಕಾ ರಾಜಾ ಶ್ರೀ ಗಜಾನನೋತ್ಸವ ಸಮಿತಿಯಿಂದ ೫೦ನೇ ವರ್ಷದ ಶ್ರೀವಿಘ್ನೇಶ್ವರ ಪ್ರತಿಷ್ಠಾಪನಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಈ ಬಾರಿ ವಿಶೇಷವಾಗಿ ಶ್ರೀ ಮೈಲಾರಲಿಂಗೇಶ್ವರ ರೂಪಕ ಪ್ರದರ್ಶನ ನಡೆಯಿತು.ಶ್ರೀಲೋಕಕ್ಕೆ ಕಂಟಕರಾಗಿದ್ದ ಮಣಿ-ಮಲ್ಲಾಸುರ ರಾಕ್ಷಸರ ಸಂಹಾರಕ್ಕಾಗಿ ಪರಶಿವನು ಮಾರ್ತಾಂಡ ಭೈರವನಾಗಿ, ಪಾರ್ವತಿ ದೇವಿಯು ಗಂಗೆ ಮಾಳವ್ವಳಾಗಿ ಭೂ ಲೋಕಕ್ಕೆ ಅವತರಿಸಿ, ದುಷ್ಟರ ಸಂಹಾರ ಮಾಡಿ ಮೈಲಾರದಲ್ಲಿ ನೆಲೆಸಿದ ಪೌರಾಣಿಕ ಕಥಾ ಹಂದರದ ಅದ್ಭುತ ದೃಶ್ಯಾವಳಿಯೇ ಈ ರೂಪಕದ ವಿಶೇಷ.
ಈ ದಿವ್ಯ ರೂಪಕದ ಪ್ರದರ್ಶನಕ್ಕೆ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದ ಎದುರಿನ ಮೈಲಾರಲಿಂಗೇಶ್ವರ ದೇವಸ್ಥಾನದ 35ಕ್ಕೂ ಹೆಚ್ಚು ಗೊರವರು ನಾಲ್ವಾಡ ಓಣಿಗೆ ಆಗಮಿಸಿದರು. ಕಪ್ಪು ಕಂಬಳಿ, ಕವಡೆ ಹಾರ, ಗೆಜ್ಜೆ, ಡಮರುಗ, ಸಾಂಪ್ರದಾಯಿಕ ಪೇಟ ಧರಿಸಿ, ಹಣೆಗೆ ಭಂಡಾರ ತಿಲಕವಿಟ್ಟು ಆಗಮಿಸಿದ ಗೊರವರ ತಂಡ, ಮಂಟಪದ ಎದುರು ನೆರೆದಿತ್ತು. ಗದಗ ಕಾ ರಾಜಾ ಮಂಡಳಿಯ ಗಜಾನನೋತ್ಸವದ ಮಂಟಪದ ಎದುರು ಗೊರವರು ಶ್ರದ್ಧಾಭಕ್ತಿ ಪರಾಕಾಷ್ಠೆಯಿಂದ ಏಳುಕೋಟಿ ಏಳುಕೋಟಿ ಜೈ ಮೈಲಾರ ಎಂಬ ಜಯಘೋಷ ಮೊಳಗಿಸಿದರು. ಡಮರುಗದ ನಾದ, ದಿವಟಿಗೆಯ ಬೆಳಕಿನಲ್ಲಿ ಸಾಂಪ್ರದಾಯಿಕ ಕುಣಿತ, ಆರಾಧನೆ, ವಿಶೇಷ ಪೂಜೆ ಮತ್ತು ನೈವೇದ್ಯ ಸಮರ್ಪಿಸಿ, ಶ್ರೀ ಮೈಲಾರಲಿಂಗೇಶ್ವರ ರೂಪಕ ದೃಶ್ಯಾವಳಿ ಪ್ರದರ್ಶನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.ಗೊರವರ ಕಣ್ಣಲ್ಲಿ ಭಕ್ತಿ, ಹೆಜ್ಜೆಯಲ್ಲಿ ಶಕ್ತಿ, ದನಿಯಲ್ಲಿ ಪರಮ ನಿಷ್ಠೆ ಅವರ ಜಯಘೋಷಕ್ಕೆ ನೆರೆದ ನೂರಾರು ಭಕ್ತರ ಹೃದಯದಲ್ಲಿ ಭಕ್ತಿ ಸ್ಪುರಿಸಿತು. ಆಗಮಿಸಿದ ಭಕ್ತ ಸಮೂಹಕ್ಕೆ ಭಂಡಾರದ ತಿಲಕವಿಟ್ಟು ಗೊರವರು ಶುಭ ಹಾರೈಸಿದರು. ಇಡೀ ನಾಲ್ವಾಡದ ಓಣಿ ಮೈಲಾರನ ಜಯಘೋಷದಿಂದ ಮಾರ್ದನಿಸಿತು. 50ನೇ ವರ್ಷದ ಸಂಭ್ರಮಕ್ಕೆ ಗೊರವರ ಆಗಮನದಿಂದ ದೈವಿಕ ಮೆರುಗು ಬಂದಂತಾಯಿತು.