ಗದಗ ಪೊಲೀಸರ ಕಾರ್ಯಾಚರಣೆ, ಮಹಿಳೆ ಸೇರಿ 6 ಅಕ್ರಮ ಗಾಂಜಾ ಮಾರಾಟಗಾರರ ಬಂಧನ

| Published : Jul 15 2025, 01:01 AM IST

ಗದಗ ಪೊಲೀಸರ ಕಾರ್ಯಾಚರಣೆ, ಮಹಿಳೆ ಸೇರಿ 6 ಅಕ್ರಮ ಗಾಂಜಾ ಮಾರಾಟಗಾರರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿ 6.7 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿ 6.7 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸೋಮವಾರ ರಾತ್ರಿ ಗದಗ ನಗರದಲ್ಲಿರುವ ಗ್ರಾಮೀಣ ಠಾಣೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದರು. ಇದಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡವು ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿ, ತನಿಖೆ ಚುರುಕುಗೊಳಿಸಿ, ಹಲವು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿತ್ತು.

ಸಂಗ್ರಹವಾದ ಮಾಹಿತಿಯ ಆಧಾರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರಿಂದ ಅಂದಾಜು 6.70 ಲಕ್ಷ ಮೌಲ್ಯದ 6.7 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 148/2025 ಕಲಂ 20(ಎ) ಎನ್‌ಡಿಪಿಎಸ್ ಪ್ರಕರಣ ಕೂಡ ದಾಖಲಾಗಿತ್ತು.

ಬಂಧಿತ 6 ಜನ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಗಾಂಜಾ ಪೂರೈಕೆ ಆಗುತ್ತಿರುವದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದ್ದು, ಆರೋಪಿತರಿಂದ ಒಂದು ಬೈಕ್, 6 ಮೊಬೈಲ್ ಫೋನುಗಳು, 1 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಆಧುನಿಕ ಅಗತ್ಯ ತಂತ್ರಾಂಶ ಮತ್ತು ತಮ್ಮ ಕೌಶಲ್ಯದಿಂದ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಕ್ರಮ ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಸ್ಪಿ ಬಿ.ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದರು.

ತಂಡ ರಚನೆ:ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟಗಾರರಿಗೆ ಬಲೆ ಬೀಸಿದ್ದ ಪೊಲೀಸರು ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐ ಎ.ಆರ್. ರಾಮೇನಹಳ್ಳಿ, ಎಸ್.ಬಿ. ಕವಲೂರ ಮತ್ತು ಸಿಬ್ಬಂದಿಗಳಾದ ಪ್ರಕಾಶ ಗಾಣಗೇರ, ಅಶೋಕ ಬೂದಿಹಾಳ, ಅನಿಲ ಬನ್ನಿಕೊಪ್ಪ, ಗಂಗಾಧರ ಮಜ್ಜಗಿ, ರಾಜಮಹ್ಮದ ಅಲಮದಾರ. ಹೇಮಂತ ಪರಸಣ್ಣವರ. ಲಕ್ಷ್ಮಣ ಪೂಜಾರ, ಪ್ರವೀಣ ಶಾಂತಪ್ಪನವರ, ರವಿ ನಾಯ್ಕರ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಗುರು ಬೂದಿಹಾಳ, ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು ಎಂದು ಎಸ್ಪಿ ಎಸ್.ಪಿ ಬಿ. ಎಸ್ ನೇಮಗೌಡ್ರ ಮಾಹಿತಿ ನೀಡಿದರು.

ಬಂಧಿತ ಆರೋಪಿಗಳು:ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಬಾಪು ಪುಣಜಪ್ಪ ಹರಣಸಿಕಾರಿ, ಚಂದಪ್ಪ ಪುಣಜಪ್ಪ ಹರಣಸಿಕಾರಿ, ಗಾಯಿತ್ರಿ ಮಾರುತಿ ಕಾಳೆ, ಮಾರುತಿ ಶೇಖಪ್ಪ ಕಾಳೆ, ಗೋಪಾಲ ರಾಮಚಂದ್ರ ಬಸವಾ, ಕಲ್ಯಾಣಬಾಬು ಚಿನ್ನನಾಗು ಶಿಕಾರಿ ಎನ್ನುವವರನ್ನು ಬಂಧಿಸಲಾಗಿದ್ದು, ಇವರಿಗೆ ಗಾಂಜಾ ಎಲ್ಲಿಂದ ಪೂರೈಕೆಯಾಗುತ್ತಿತ್ತು, ಇವರು ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವ ಬಗ್ಗೆಯೂ ವಿಶೇಷ ತನಿಖೆಯಾಗಬೇಕಿದೆ.