ನೂತನ ಕಟ್ಟಡ ನಿರ್ಮಾಣವಾಗಬೇಕಾದಲ್ಲಿ ಈಗಿರುವ ಕಚೇರಿಯನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಬೇಕಿದೆ. ಅದು ಕೂಡಾ ಇದುವರೆಗೂ ಸಾಧ್ಯವಾಗದೇ ಇರುವುದರಿಂದಾಗಿ ಸಂಪೂರ್ಣ ಕಾಮಗಾರಿಯೇ ನನೆಗುದಿಗೆ ಬಿದ್ದಿದೆ.
ವಿಶೇಷ ವರದಿ
ಗದಗ: ವಿನೂತನ ಕಲ್ಪನೆಯೊಂದಿಗೆ ಭೂಮಿಪೂಜೆ ಕಂಡಿರುವ ಗದಗ ತಹಸೀಲ್ದಾರ್ ಕಚೇರಿ (ಪ್ರಜಾಸೌಧ) ಕಾಮಗಾರಿ ಭೂಮಿಪೂಜೆ ಪೂರ್ಣಗೊಂಡು 7 ತಿಂಗಳಾದರೂ ಇದುವರೆಗೂ ಕಾಮಗಾರಿಯೇ ಪ್ರಾರಂಭವಾಗಿಲ್ಲ.ನೂತನ ಕಟ್ಟಡ ನಿರ್ಮಾಣವಾಗಬೇಕಾದಲ್ಲಿ ಈಗಿರುವ ಕಚೇರಿಯನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಬೇಕಿದೆ. ಅದು ಕೂಡಾ ಇದುವರೆಗೂ ಸಾಧ್ಯವಾಗದೇ ಇರುವುದರಿಂದಾಗಿ ಸಂಪೂರ್ಣ ಕಾಮಗಾರಿಯೇ ನನೆಗುದಿಗೆ ಬಿದ್ದಿದೆ.
ಎಚ್.ಕೆ. ಪಾಟೀಲ ಅವರ ಕನಸಿನ ಕೂಸಾಗಿರುವ ಈ ನೂತನ ಪ್ರಜಾಸೌಧ ನಿರ್ಮಾಣಕ್ಕೆ ₹16 ಕೋಟಿ ವೆಚ್ಚದ ನೀಲನಕ್ಷೆ ಸಿದ್ಧವಾಗಿದೆ. ಅದಕ್ಕಾಗಿ ಹಣಕಾಸಿನ ವ್ಯವಸ್ಥೆಯಾಗಿದ್ದು, ಕಾಮಗಾರಿ ನಿರ್ಮಾಣಕ್ಕೆ ಭೂಮಿಪೂಜೆಯೂ ನೆರವೇರಿದೆ. ಆದರೆ ಇದುವರೆಗೂ ಹಳೆಯ ಕಟ್ಟಡದಲ್ಲಿಯೇ ತಹಸೀಲ್ದಾರ್ ಕಚೇರಿ ನಡೆಯುತ್ತಿದೆ.ಸೂಕ್ತ ಬಾಡಿಗೆ ಕಟ್ಟಡ ಸಿಕ್ಕಿಲ್ಲವಂತೆ: ಹೊಸ ಪ್ರಜಾಸೌಧ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕಾದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶತಮಾನದಷ್ಟು ಹಳೆಯದಾಗಿರುವ ತಹಸೀಲ್ದಾರ್ ಕಚೇರಿ ಕಟ್ಟಡ ತೆರವುಗೊಳಿಸಬೇಕು. ಇದಕ್ಕಾಗಿ ನಗರದ ಹೃದಯ ಭಾಗದಲ್ಲಿಯೇ ಇರುವ ಬೇರೆ ಕಟ್ಟಡಗಳಿಗೆ ಪ್ರಸ್ತುತ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಎಲ್ಲ ಕಚೇರಿಗಳನ್ನು ಸ್ಥಳಾಂತರ ಮಾಡಬೇಕಿದೆ. ಆದರೆ ಇದುವರೆಗೂ ಸೂಕ್ತವಾದ ಬಾಡಿಗೆ ಕಟ್ಟಡಗಳೇ ಸಿಗದೇ ಇರುವುದಕ್ಕೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ ಎನ್ನುವುದು ಅಧಿಕಾರಿಗಳ ಮಾತಾಗಿದೆ.
ಸುರಕ್ಷಿತತೆ ಅವಶ್ಯ: ಪ್ರಸ್ತುತ ತಹಸೀಲ್ದಾರ್ ಕಚೇರಿಯ ಕಟ್ಟಡಕ್ಕೆ ಬಹುದೊಡ್ಡ ಇತಿಹಾಸವಿದೆ. ಇದು ಬ್ರಿಟಿಷರ ಕಾಲದಲ್ಲಿಯೇ ನಿರ್ಮಾಣವಾಗಿರುವ ಕಲ್ಲಿನ ಕಟ್ಟಡ. ಉತ್ತಮ ಹೆಂಚಿನ ಚಾವಣಿ ಹೊಂದಿದೆ. 1902ರಲ್ಲಿಯೇ ಇಲ್ಲಿ ಕಚೇರಿ ಪ್ರಾರಂಭವಾಗಿದ್ದು, ಅಲ್ಲಿಂದ ಇಲ್ಲಿಯ ವರೆಗೂ ತಾಲೂಕಿನ ಜನರ ಅಮೂಲ್ಯವಾದ ಕಂದಾಯ ದಾಖಲೆಗಳು ಇಲ್ಲಿ ಸಂರಕ್ಷಿತವಾಗಿವೆ. ಆದರೀಗ ಆ ದಾಖಲೆಗಳನ್ನೆಲ್ಲ ಸುರಕ್ಷಿತವಾಗಿ ಸಂಗ್ರಹಿಸಲು ಉತ್ತಮ ಗುಣಮಟ್ಟದ ಕಟ್ಟಡ ಸಿಗದೇ ಇರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.ಹುಸಿಯಾದ ಭರವಸೆ: ಗದಗ ಶಾಸಕ ಎಚ್.ಕೆ. ಪಾಟೀಲ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ 2026ರ ಜ. 12ರಂದು ಈ ನೂತನ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಗುತ್ತಿಗೆದಾರರಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಇದಕ್ಕೆ ನಿಮಗೆ ಸಮಯ ಎಷ್ಟು ಬೇಕು ಎಂದು ಹೇಳಿದ್ದರು. ಆಗ ಗುತ್ತಿಗೆದಾರರು ಈಗಿರುವ ಕಚೇರಿಯನ್ನು ಸಂಪೂರ್ಣ ಸ್ಥಳಾಂತರ ಮಾಡಿಕೊಟ್ಟರೆ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಹಳೆಯ ಕಟ್ಟಡವೇ ಸ್ಥಳಾಂತರವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಂದು ನೀಡಿದ ಭರವಸೆ ಹುಸಿಯಾಗಿದೆ.
2021ರಲ್ಲಿಯೇ ಪ್ರಸ್ತಾವನೆ: 1902ರಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ನೂರಾರು ಕೆಲಸ ಕಾರ್ಯಗಳಿಗಾಗಿ ನಿತ್ಯವೂ ಸಾವಿರಾರು ಜನರು ಆಗಮಿಸುತ್ತಾರೆ. ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಮುಖ್ಯರಸ್ತೆಗಿಂತ (ಹೆದ್ದಾರಿ) ತಗ್ಗು ಪ್ರದೇಶದಲ್ಲಿ ಈ ಕಚೇರಿ ಇರುವ ಹಿನ್ನೆಲೆ ಮಳೆಯಾದರೆ ಸಾಕು, ಗದಗ ತಹಸೀಲ್ದಾರ್ ಕಚೇರಿ ಸಂಪೂರ್ಣ ಜಲಾವೃತವಾಗುತ್ತದೆ.ಕಚೇರಿಯಲ್ಲಿನ ವಿದ್ಯುತ್ ಸಂಪರ್ಕದ ವ್ಯವಸ್ಥೆಯೂ ತೀರಾ ಹಳೆಯದಾಗಿದ್ದು, ಲೈಟ್ ಹಚ್ಚಲು, ಆರಿಸಲು ಹೆದರಿಕೆ ಬರುವಂತಹ ಸ್ಥಿತಿ ಇದೆ. ಇದಕ್ಕಾಗಿಯೇ ಈ ಕಟ್ಟಡವನ್ನು ಹೊಸದಾಗಿ ನಿರ್ಮಿಸುವಂತೆ 2021 ಹಾಗೂ 2022ರಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂದು ಹತ್ತಾರು ಕಾರಣಗಳಿಂದ ತಿರಸ್ಕೃತಗೊಂಡಿತ್ತು. ಈಗ ನಿರ್ಮಾಣಕ್ಕೆ ಅನುಮತಿ ಸಿಕ್ಕರೂ ಕಾಮಗಾರಿ ಪ್ರಾರಂಭಕ್ಕೆ ಬಾಡಿಗೆ ಕಟ್ಟಡ ಎನ್ನುವ ವಿಘ್ನ ಕಾಡುತ್ತಿದೆ.
ವಿಳಂಬವಾಗದಿರಲಿ...ನಗರದ ಗಾಂಧಿ ವೃತ್ತಕ್ಕೆ ಹೊಂದಿಕೊಂಡೇ ಇದ್ದ ತಾಪಂ ಕಟ್ಟಡ ಕೂಡಾ ಇದೇ ಮಾದರಿಯಲ್ಲಿ ಹೊಸದಾಗಿ ನಿರ್ಮಿಸುವ ಸಲುವಾಗಿ ತೆರವುಗೊಳಿಸಿ 10 ವರ್ಷವೇ ಗತಿಸಿದೆ. ಇದುವರೆಗೂ ಕಟ್ಟಡ ನೆಲದಿಂದ ಮೇಲೆಯೇ ಬಂದಿಲ್ಲ. ತಹಸೀಲ್ದಾರ್ ಕಚೇರಿ ನಿರ್ಮಾಣ ಕೂಡಾ ಹಾಗಾಗದಿರಲಿ ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಶೀಘ್ರ ಸ್ಥಳಾಂತರ: ತಹಸೀಲ್ದಾರ್ ಕಚೇರಿ ಸ್ಥಳಾಂತರಕ್ಕೆ ಸೂಕ್ತ ಜಾಗ ಸಿಗದ ಕಾರಣ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಶೀಘ್ರವೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ತಿಳಿಸಿದರು.