ನಿಯಮದ ಪ್ರಕಾರ ಘೋಷಿತ ಸ್ಲಂಗಳಿಗೆ ಸರ್ಕಾರದಿಂದ ವಿಶೇಷ ಅನುದಾನದಡಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಬೀದಿದೀಪದ ವ್ಯವಸ್ಥೆ ಮಾಡಬೇಕು. ಆದರೆ, ವಾಸ್ತವದಲ್ಲಿ ಈ ಪ್ರದೇಶಗಳು ಇಂದಿಗೂ ಕತ್ತಲಲ್ಲಿವೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ- ಬೆಟಗೇರಿ ಅವಳಿ ನಗರ ವ್ಯಾಪ್ತಿಯ ಹಲವಾರು ಕೊಳಗೇರಿಗಳಲ್ಲಿರುವ ಜನರಿಗೆ ಸೂರು ಎನ್ನುವುದು ಮರೀಚಿಕೆಯಾಗಿದೆ. ಅವಳಿ ನಗರದ ಬಹುತೇಕ ಶ್ರಮದ ಕೆಲಸಗಳಲ್ಲಿ ದುಡಿಯುವ ವರ್ಗವೇ ಹೆಚ್ಚಾಗಿ ವಾಸಿಸುವ ನಗರದ ಬೆನ್ನೆಲುಬಿನಂತಿರುವ ಕೊಳಗೇರಿ ನಿವಾಸಿಗಳ ಬದುಕು ಮಾತ್ರ ಇಂದಿಗೂ ನರಕಸದೃಶವಾಗಿದೆ. ಕಳೆದ ಹಲವು ದಶಕಗಳಿಂದ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಇದುವರೆಗೂ ನ್ಯಾಯ ಮಾತ್ರ ಸಿಕ್ಕಿಲ್ಲ.

ಅವಳಿ ನಗರ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 80ಕ್ಕೂ ಹೆಚ್ಚು ಕೊಳಗೇರಿ ಪ್ರದೇಶಗಳಿವೆ. ಇವುಗಳಲ್ಲಿ 1973ರ ಸ್ಲಂ ಕಾಯ್ದೆಯಡಿ 48 ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ನಿಯಮದ ಪ್ರಕಾರ ಘೋಷಿತ ಸ್ಲಂಗಳಿಗೆ ಸರ್ಕಾರದಿಂದ ವಿಶೇಷ ಅನುದಾನದಡಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಬೀದಿದೀಪದ ವ್ಯವಸ್ಥೆ ಮಾಡಬೇಕು. ಆದರೆ, ವಾಸ್ತವದಲ್ಲಿ ಈ ಪ್ರದೇಶಗಳು ಇಂದಿಗೂ ಕತ್ತಲಲ್ಲಿವೆ. ನಗರಸಭೆ ನಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆಯೇ ಹೊರತು, ಮನುಷ್ಯರಂತೆ ಕಾಣುತ್ತಿಲ್ಲ ಎಂಬುದು ನಿವಾಸಿಗಳ ಗೋಳಾಗಿದೆ.

​ಮನೆ ಮಂಜೂರಾತಿ ಪತ್ರ: 2014ರಿಂದ ಸ್ಲಂ ಜನಾಂದೋಲನ ಸಮಿತಿಯ ಪದಾಧಿಕಾರಿಗಳು, ಹೋರಾಟಗಾರರು ಸತತ ಹೋರಾಟ ಮಾಡಿದ ಫಲವಾಗಿ 2019ರಲ್ಲಿ ಶಾಸಕರು 348 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಿದ್ದಾರೆ. ಆದರೆ ಮಂಜೂರಾತಿ ಪತ್ರ ಕೈ ಸೇರಿ 5 ವರ್ಷ ಕಳೆದರೂ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ. ನಗರಸಭೆ ಸಿಬ್ಬಂದಿ ಬೇಜವಾಬ್ದಾರಿಯಿಂದಾಗಿ ನೈಜ ವಸತಿರಹಿತರು ಇಂದಿಗೂ ಬೀದಿಯಲ್ಲಿಯೇ ಬದುಕುತ್ತಿದ್ದಾರೆ.

ಗಂಭೀರ ಸಮಸ್ಯೆಗಳಿವೆ: ಸ್ಲಂಗಳಲ್ಲಿನ ಬಡವರು ಕೇವಲ ವಸತಿ ಸಮಸ್ಯೆಯನ್ನು ಮಾತ್ರವಲ್ಲ, ಅವರು ನಿತ್ಯವೂ ಸಮಸ್ಯೆಗಳ ಸರಮಾಲೆಯನ್ನೇ ಹಾಸಿ, ಹೊದ್ದುಕೊಂಡು ಬದುಕುತ್ತಾರೆ. ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಇರುವ ನೀರು ಅಸಮರ್ಪಕ ಪೂರೈಕೆ, ಅಸುರಕ್ಷಿತ, ಅನಾರೋಗ್ಯಕರ ವಸತಿ, ಪ್ಲಾಸ್ಟಿಕ್ ಮನೆಯ ಗುಡಿಸಲುಗಳು, ಮಳೆಯಲ್ಲಿ ತೀವ್ರ ತೊಂದರೆ, ಅಸ್ವಚ್ಛ ಪರಿಸರ, ನೈರ್ಮಲ್ಯದ ಕೊರತೆ, ಚರಂಡಿ ಇಲ್ಲದೇ ಇರುವುದು, ವ್ಯಾಪಕ ಕಸದ ರಾಶಿ, ಸಾಂಕ್ರಾಮಿಕ ರೋಗ ಹರಡುವಿಕೆ ಇಲ್ಲಿಯೇ ಹೆಚ್ಚು. ಶೌಚಾಲಯಗಳು ಇಲ್ಲದೇ ಇರುವುದರಿಂದ ಬಯಲು ಬಹಿರ್ದೆಸೆ, ಇದಕ್ಕಾಗಿ ರಾತ್ರಿಯವರೆಗೂ ಕಾಯಬೇಕಾದ ಅನಿವಾರ್ಯತೆ ಇದೆ.

ಆರೋಗ್ಯ ಸೇವೆಗಳ ಲಭ್ಯತೆ ಕಡಿಮೆ. ಸಮೀಪದಲ್ಲಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳ ಕೊರತೆ ಕಾಡುತ್ತಿದೆ. ಜಮೀನಿನ ಮಾಲೀಕತ್ವವಿಲ್ಲ. ಕಾನೂನುಬದ್ಧ ಮನೆ ದಾಖಲೆಗಳಿಲ್ಲ. ತೆರವು ಭೀತಿ, ವಿದ್ಯುತ್ ಸೌಕರ್ಯದ ಕೊರತೆ, ಕಳ್ಳತನ, ದೌರ್ಜನ್ಯ, ಬ್ಯಾಂಕ್‌ ಖಾತೆಗಳ ಲಭ್ಯತೆ ಕಡಿಮೆ, ಹಣಕಾಸಿನ ಶಿಕ್ಷಣದ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳಲ್ಲಿಯೇ ಇವರೆಲ್ಲ ಇಂದಿಗೂ ಬದುಕಬೇಕಿರುವುದು ದುರಂತವೇ ಸರಿ. ಕೂಡಲೇ ಕ್ರಮ ಜರುಗಿಸಿ

​ನಗರಸಭೆ ಮತ್ತು ಜಿಲ್ಲಾಡಳಿತವು ಕೂಡಲೇ ಎಚ್ಚೆತ್ತು ​ಸ್ಲಂ ನಿವಾಸಿಗಳ ನೈಜ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಬೇಕು. ​​ಘೋಷಿತ ಸ್ಲಂಗಳಿಗೆ ತಕ್ಷಣವೇ ಮೂಲ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಬೇಕು. ಇದರೊಟ್ಟಿಗೆ ಅವಳಿ ನಗರದಲ್ಲಿ ಶೌಚಾಲಯ ನಿರ್ಮಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎನ್ನುವುದು ಬಹುತೇಕ ನಿವಾಸಿಗಳ ಅಭಿಪ್ರಾಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನಗರಸಭೆಯ ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸ್ಲಂ ಬೋರ್ಡನ ಕಚೇರಿ ಇದ್ದೂ ಇಲ್ಲದಂತಿದೆ. ಅಧಿಕಾರಿಗಳು ಪ್ರತಿಕ್ರಿಯೆ ನೀಡುವುದಿಲ್ಲ. ಮೇಲಾಗಿ ಇದೆಲ್ಲ ಸಮಸ್ಯೆಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಸೌಕರ್ಯ ಕಲ್ಪಿಸದಿದ್ದರೆ ಹೋರಾಟ: ನೈಜ ಫಲಾನುಭವಿಗಳ ಯಾದಿ ತಯಾರಿಸುವಲ್ಲಿ ಅಧಿಕಾರಿಗಳು ಹಗರಣ ನಡೆಸಿದ್ದಾರೆ. ಕೂಡಲೇ 348 ಕುಟುಂಬಗಳಿಗೆ ನ್ಯಾಯ ಸಿಗದಿದ್ದರೆ ಮತ್ತು ಸ್ಲಂಗಳಲ್ಲಿ ಮೂಲ ಸೌಕರ್ಯ ಕಲ್ಪಿಸದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಮಾನ್ವಿ ತಿಳಿಸಿದರು.