ಶಿವಕುಮಾರ ಕುಷ್ಟಗಿ
ಗದಗ: ಮನೆಯಿಂದ ಹೊರಟ ಮಗ, ಪತಿ, ತಾಯಿ, ಹೆಂಡತಿ, ಮಗಳು ಅಥವಾ ತಂದೆ ಸಂಜೆ ಕ್ಷೇಮವಾಗಿ ಮನೆಗೆ ಮರಳುತ್ತಾರೆ ಎಂದು ಕಾಯುವ ಕಣ್ಣುಗಳಿಗೆ ಇಂದು ರಸ್ತೆ ಅಪಘಾತಗಳು ಶಾಶ್ವತ ಕತ್ತಲೆಯನ್ನು ನೀಡುತ್ತಿವೆ. ಗದಗ ಜಿಲ್ಲೆಯ ಡೆಡ್ಲಿ ರಸ್ತೆಗಳು ಕೇವಲ ಡಾಂಬರ್ ದಾರಿಯಾಗಿ ಉಳಿದಿಲ್ಲ, ಅವು ಜಿಲ್ಲೆಯ 824 ಜನರ ಪಾಲಿಗೆ ಚಿತಾಗಾರವಾಗಿ ಮಾರ್ಪಟ್ಟಿವೆ.ಕಳೆದ 5 ವರ್ಷಗಳಲ್ಲಿ ಗದಗ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಸಂಭವಿಸಿದ 1592 ಅಪಘಾತಗಳಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರೆ ಇನ್ನೂ ಹಲವರು ಶಾಶ್ವತ ಅಂಗವೈಕಲ್ಯವನ್ನು ಅನುಭವಿಸುತ್ತ ನಿತ್ಯವೂ ನೂರಾರು ತಾಯಂದಿರ ಆಕ್ರಂದನ, ಪತ್ನಿಯರ ಮಾಂಗಲ್ಯ ಭಾಗ್ಯದ ಅಂತ್ಯ ಮತ್ತು ಮಕ್ಕಳ ಅನಾಥ ಸ್ಥಿತಿಯ ಕರುಣಾಜನಕ ಕಥೆಗಳಾಗಿ ಉಳಿದಿವೆ. ಅತಿ ವೇಗ, ಮೋಜು ಮತ್ತು ಕ್ಷಣಿಕ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತಗಳು ನೂರಾರು ಮನೆಗಳ ದೀಪವನ್ನು ಶಾಶ್ವತವಾಗಿ ಆರಿಸಿಬಿಟ್ಟಿವೆ.
ಜಿಲ್ಲಾ ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2021ರಿಂದ 2025ರ ಡಿಸೆಂಬರ್ ವರೆಗೆ ಜಿಲ್ಲೆಯಲ್ಲಿ ಒಟ್ಟು 1592 ರಸ್ತೆ ಅಪಘಾತಗಳು ಸಂಭವಿಸಿದ್ದು, 824 ಮಂದಿ ಕೊನೆಯುಸಿರೆಳೆದಿದ್ದಾರೆ. 5 ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ದ್ವಿಚಕ್ರ ವಾಹನಗಳ ಅಪಘಾತ ಹಾಗೂ ಸಾವುಗಳ ಸಂಖ್ಯೆಯೇ ಅಧಿಕವಾಗಿದೆ. ಈ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 819 ದ್ವಿಚಕ್ರ ವಾಹನ ಅಪಘಾತಗಳು ಸಂಭವಿಸಿ, 460 ಮಂದಿ ಸವಾರರು ಮೃತಪಟ್ಟಿದ್ದಾರೆ. 2021ರಲ್ಲಿ 144 ದ್ವಿಚಕ್ರ ಅಪಘಾತಗಳು ನಡೆದಿದ್ದರೆ, 2025ರಲ್ಲಿ ಈ ಸಂಖ್ಯೆ 189ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯೂ 69 ರಿಂದ 114ಕ್ಕೆ ಹೆಚ್ಚಾಗಿರುವುದು ಅಪಘಾತಗಳ ತೀವ್ರತೆಯನ್ನು ತೋರಿಸುತ್ತದೆ.ದ್ವಿಚಕ್ರ ವಾಹನಗಳಷ್ಟೇ ಅಲ್ಲದೆ 2021ರಿಂದ 2025ರ ಡಿಸೆಂಬರ್ ವರೆಗೆ ಕಾರ್, ಟ್ಯಾಕ್ಸಿ ಹಾಗೂ ವ್ಯಾನ್‌ಗಳಿಗೆ ಸಂಬಂಧಿಸಿದಂತೆ 239 ಅಪಘಾತಗಳು ಸಂಭವಿಸಿ 122 ಮಂದಿ ಮೃತಪಟ್ಟಿದ್ದಾರೆ. 5 ವರ್ಷದಲ್ಲಿ ಭಾರೀ ವಾಹನಗಳಾದ ಟ್ರಕ್, ಲಾರಿ, ಬಸ್‌ಗಳ ಒಟ್ಟು 157 ಅಪಘಾಗಳು ಸಂಭವಿಸಿ 53 ಮಂದಿ ಮೃತಪಟ್ಟಿದ್ದಾರೆ.ಹೆಲ್ಮೆಟ್ ನಿರ್ಲಕ್ಷ್ಯ
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯದಂತೆ ಸವಾರರ ಸಣ್ಣ ತಪ್ಪುಗಳು ದೊಡ್ಡ ದುರಂತಕ್ಕೆ ದಾರಿ ಮಾಡಿಕೊಡುತ್ತಿವೆ. ಸಾವನ್ನಪ್ಪಿದ ಬಹುತೇಕ ಬೈಕ್ ಸವಾರರ ಪೈಕಿ ಅತಿ ಹೆಚ್ಚು ಸಾವು ಸಂಭವಿಸಿರುವುದು ತಲೆಗೆ ಪೆಟ್ಟು ಬಿದ್ದಿರುವುದರಿಂದ. ಹೆಲ್ಮೆಟ್ ಧರಿಸಿದ್ದರೆ ಜಿಲ್ಲೆಯ 460 ಮನೆಗಳಲ್ಲಿ ಇಂದಿಗೂ ನಗು ಇರುತ್ತಿತ್ತು.ಜಾಗೃತಿ ಇರಲಿ
ಬದಲಾಗುತ್ತಿರುವ ಅಭಿರುಚಿಗಳಲ್ಲಿ ಅದರಲ್ಲಿಯೂ ಹದಿಹರೆಯದ ಯುವಕರಲ್ಲಿ ಅತೀಯಾದ ವೇಗ (ಸ್ಪೀಡ್) ನೀಡುವ ಕಿಕ್‌ನಲ್ಲಿ ತಮ್ಮ ಬದುಕನ್ನೇ ಮುಗಿಸಿಕೊಳ್ಳುತ್ತಿದ್ದಾರೆ. ಇದರೊಟ್ಟಿಗೆ ಮಕ್ಕಳ ಕೈಗೆ ಬೈಕ್ ನೀಡುವುದು, ಅತೀ ವೇಗವಾಗಿ ಸಂಚರಿಸುವ ಬೈಕ್ ಗಳನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡುವುದು, ಮದ್ಯಪಾನ ಮಾಡಿ ವಾಹನ ಓಡಿಸುವುದು ಮತ್ತು ಚಾಲನೆಯ ವೇಳೆ ಮೊಬೈಲ್ ಬಳಸುವುದು ಸಾವಿನ ದಾರಿಯನ್ನು ಸಮೀಪಗೊಳಿಸುತ್ತದೆ ಅದಕ್ಕಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು, ವೇಗಕ್ಕೆ ಮಿತಿ ಹಾಕಿಕೊಂಡು, ವೇಗಕ್ಕಿಂತ ಕ್ಷೇಮ ಮುಖ್ಯ ಎನ್ನುವುದನ್ನು ಅರಿತುಕೊಳ್ಳುವುದು, ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಮತ್ತು ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಅತಿಯಾದ ವೇಗದಿಂದ ಆಪತ್ತು
ವಾಹನ ಸವಾರರು ರಸ್ತೆ ಸಾರಿಗೆ ನಿಮಯಗಳನ್ನು ತಪ್ಪದೇ ಪಾಲಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದು. ಹೆಲ್ಮೆಟ್ ಇಲ್ಲದೇ ವಾಹನ ಓಡಿಸುವುದು, ಅತೀಯಾದ ವೇಗ ಜೀವಕ್ಕೆ ಆಪತ್ತು ತರುತ್ತದೆ. ಮನೆಯಲ್ಲಿ ನಿಮಗಾಗಿ ಯಾರೋ ಕಾಯುತ್ತಿದ್ದಾರೆ. ನಿಮ್ಮ ಸಾವಿನ ನಂತರದ ದುಃಖ ನಿಮ್ಮ ಕುಟುಂಬಕ್ಕೆ ಮಾತ್ರ ಸೀಮಿತ. ಆದರೆ, ಆ ಸಾವು ತಡೆಯುವ ಶಕ್ತಿ ನಿಮ್ಮ ಕೈಯಲ್ಲಿದೆ ಎನ್ನುವುದನ್ನು ಪ್ರತಿಯೊಬ್ಬ ವಾಹನ ಸವಾರರು ಯೋಚಿಸಬೇಕು ಎನ್ನುತ್ತಾರೆ ಎಸ್ಪಿ ರೋಹನ್ ಜಗದೀಶ.ಅಪಘಾತ ಅಂಕಿ-ಅಂಶವರ್ಷಅಪಘಾತಸಾವು
2021 2911502022 329 172
2023 344 1702024 312 163
2025 316 169ಒಟ್ಟು 1592 824