ಧಾರವಾಡ:

ಪಂಪ, ಪೊನ್ನ, ರನ್ನ ಎಂಬ ರತ್ನತ್ರಯ ಕವಿಗಳು ಕನ್ನಡ ಕಾವ್ಯಕ್ಕೆ ಮೆರಗು ಕೊಟ್ಟವರು. ಅದರಲ್ಲೂ ಮುಖ್ಯವಾಗಿ ರನ್ನ ಒಬ್ಬ ದೇಶಿ ಕವಿ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಹೇಳಿದರು.

ಇಲ್ಲಿಯ ಕರ್ನಾಟಕ ವಿವಿ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆಎಸ್‌ಎಸ್ ಸಂಸ್ಥೆ ಸಹಯೋಗದಲ್ಲಿ ಸಾಹಿತ್ಯ-ಸಂಸ್ಕೃತಿ ವಿಷಯವಾಗಿ ಆಯೋಜಿಸಿದ್ದ ಸಂಕಿರಣದಲ್ಲಿ ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ ವಿಷಯವಾಗಿ ಮಾತನಾಡಿದರು.

10ನೇ ಶತಮಾನದ ಕನ್ನಡದ ‘ರತ್ನತ್ರಯ’ ಕವಿಗಳಲ್ಲಿ ಒಬ್ಬರಾದ ರನ್ನ ಕವಿಚಕ್ರವರ್ತಿ ಎಂದೇ ಪ್ರಸಿದ್ಧಿ ಹೊಂದಿದವರು. ಈತನು ಪ್ರಮುಖವಾಗಿ ಅಜಿತನಾಥ ಪುರಾಣ ಜೈನ ಕಾವ್ಯ, ಸಾಹಸಭೀಮ ವಿಜಯಂ ಅಥವಾ ಗದಾಯುದ್ಧ ಎಂಬ ಲೌಕಿಕ ಕಾವ್ಯವನ್ನು ರಚಿಸಿ ಇಡೀ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಆದರೆ. ನಿರೀಕ್ಷಿಸಿದಷ್ಟು ಬದಲಾವಣೆ ಆಗಿಲ್ಲ, ಹಳೆಗನ್ನಡ ನಶಿಸಿ ಹೋಗುತ್ತಿರುವಾಗ ಯುವಕರು ಆಸಕ್ತಿ ವಹಿಸಿ ಕನ್ನಡ ಸಾಹಿತ್ಯವನ್ನು ಉಳಿಸಿ-ಬೆಳೆಸುವ ಕಾರ್ಯಗಳು ನಡೆಯಬೇಕು. ಈ ಕೆಲಸವನ್ನು ಜೈನಶಾಸ್ತ್ರ ಅಧ್ಯಯನ ಪೀಠ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.


ಇತಿಹಾಸಕಾರ, ಶಾಸನ ತಜ್ಞರೂ ಆದ ಹನುಮಾಕ್ಷಿ ಗೋಗಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಜೈನ ಕವಿಗಳು. ಹಳಗನ್ನಡದ ಓದು ಇವತ್ತಿನ ಯುವಜನಾಂಗಕ್ಕೆ ಬೇಡವಾಗಿರುವುದು ದುರಂತದ ಸಂಗತಿ. ಹಳಗನ್ನಡದಲ್ಲಿ ಸಿಗುವಷ್ಟು ಸಮೃದ್ಧವಾದ ಸಂಸ್ಕೃತಿ, ಸಂಸ್ಕಾರದ ವಿಷಯ ವಿಚಾರಗಳು ಇಂದು ಸಿಗುವುದು ಕಷ್ಟದಾಯಕ ಎಂದರು.

ಊ ವೇಳೆ ಶಾಂತಿನಾಥ ಹೋತಪೇಟಿ, ಧನಪಾಲ ಮುನ್ನೋಳ್ಳಿ, ಡಾ. ಲಕ್ಷ್ಮಿ ಕೊಟಗುಣಸಿ, ಡಾ. ನವೀನಶಾಸ್ತ್ರಿ ಪುರಾಣಿಕ ಇದ್ದರು.