ಗಾದಿಗನೂರು ಸಿಲಿಂಡರ್‌ ಸ್ಫೋಟ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

| Published : Oct 05 2025, 01:01 AM IST

ಗಾದಿಗನೂರು ಸಿಲಿಂಡರ್‌ ಸ್ಫೋಟ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಮೊದಲು ವಕೀಲ ಕುರುಬರ ದಾಸಪ್ಪನವರ ಹಾಲಪ್ಪ ಗುರುವಾರ ಮೃತಪಟ್ಟರೆ, ಅವರ ತಾಯಿ ಗಂಗಮ್ಮ ಶುಕ್ರವಾರ ಅಸುನೀಗಿದ್ದರು.

ಹೊಸಪೇಟೆ: ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸೆ.27ರಂದು ಸಿಲಿಂಡರ್‌ ಸ್ಫೋಟವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಗಾಯಾಳುಗಳ ಪೈಕಿ ಶನಿವಾರ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಗಾದಿಗನೂರಿನ ಕವಿತಾ (33), ಮೈಲಾರಪ್ಪ (46) ಶನಿವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಪೋಸ್ಟ್‌ ಮಾರ್ಟಂ ಮಾಡಿ ಇಬ್ಬರ ಮೃತದೇಹಗಳನ್ನು ಗಾದಿಗನೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಮೊದಲು ವಕೀಲ ಕುರುಬರ ದಾಸಪ್ಪನವರ ಹಾಲಪ್ಪ ಗುರುವಾರ ಮೃತಪಟ್ಟರೆ, ಅವರ ತಾಯಿ ಗಂಗಮ್ಮ ಶುಕ್ರವಾರ ಅಸುನೀಗಿದ್ದರು. ಇದೇ ವೇಳೆ ಮಲಿಯಮ್ಮ, ಕಾವೇರಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಇನ್ನೊಂದೆಡೆ ಬಳ್ಳಾರಿಯ ಬಿಮ್ಸ್‌ನಲ್ಲಿ ಮಲ್ಲಿಕಾರ್ಜುನ ಎಂಬವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿದ್ದಾರೆ. ಜಿಂದಾಲ್‌ ಆಸ್ಪತ್ರೆಯಲ್ಲಿ ಕೃತಿಕಾ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಡೀ ಕುಟುಂಬ ನಾಲ್ವರ ಸಾವಿನಿಂದ ಕಂಗೆಟ್ಟಿದೆ. ಸಾಂತ್ವನ ಹೇಳಲು ಇಡೀ ಊರಿಗೆ ಊರೇ ಕಂಬನಿ ಮಿಡಿದಿದೆ. ಇಂತಹ ದುರ್ಘನೆ ಎಲ್ಲಿಯೂ ನಡೆಯಬಾರದು ಎಂದು ಯುವಕರು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಶೋಕ ಹಂಚಿಕೊಳ್ಳುತ್ತಿದ್ದಾರೆ.

ಕಂಬನಿ ಮಿಡಿದ ಗಣ್ಯರು:

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ತಲಾ ಐದು ಲಕ್ಷ ರು. ಪರಿಹಾರ ಘೋಷಿಸಿದರು. ಶಾಸಕರಾದ ಎಚ್.ಆರ್‌. ಗವಿಯಪ್ಪ, ಜನಾರ್ದನ ರೆಡ್ಡಿ, ಸಂಸದ ಈ.ತುಕಾರಾಂ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಆನಂದ ಸಿಂಗ್‌ ಸಾವಿನ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಂಘ-ಸಂಸ್ಥೆಗಳು ಕಂಬನಿ ಮಿಡಿದಿವೆ.