ಸೆ.13, 14 ರಂದು ಗಗನಚುಕ್ಕಿ ಜಲಪಾತೋತ್ಸವ: ಪಿ.ಎಂ.ನರೇಂದ್ರಸ್ವಾಮಿ

| Published : Sep 06 2025, 01:00 AM IST

ಸೆ.13, 14 ರಂದು ಗಗನಚುಕ್ಕಿ ಜಲಪಾತೋತ್ಸವ: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷವಿಡೀ ನೀರಿನ ಹರಿವಿದ್ದರೂ ಜಲಪಾತದ ವೈಭವ ಮಾತ್ರ ಹೆಚ್ಚು ನೀರು ಬರುತ್ತಿದ್ದಾಗ ನೋಡಬಹುದು. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ತಲಕಾಡು, ಬಂಡಿಪುರ ಸೇರಿ ಇತರೆ ಪ್ರವಾಸಿ ತಾಣಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಲ್ನೋರೆಯಂತೆ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ನೀರಿನ ವೈಭವದ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.13 ಮತ್ತು 14 ರಂದು ಗಗನಚುಕ್ಕಿ ಜಲಪಾತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಲಪಾತೋತ್ಸವದ ಅಂಗವಾಗಿ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕನ್ನಂಬಾಡಿ ಅಣೆಕಟ್ಟೆ ಜೂನ್ ತಿಂಗಳಲ್ಲೇ ಭರ್ತಿಯಾಗಿತ್ತು. ಈ ಹಿಂದೆಯೇ ಜಲಪಾತೋತ್ಸವವನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿತ್ತು. ನಿರಂತರ ಮಳೆ ಬರುತ್ತಿದ್ದ ಕಾರಣ ಆಯೋಜಿಸಲು ಸಾಧ್ಯವಾಗಿರಲಿಲ್ಲ ಎಂದರು.

ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಬಹುತೇಕ ನಾಟಿ ಕಾರ್‍ಯಗಳೆಲ್ಲವೂ ಮುಗಿದಿವೆ. ರೈತರು, ಜನಸಾಮಾನ್ಯರಿಗೆ ಸ್ವಲ್ಪ ಬಿಡುವು ಇರುತ್ತದೆ. ಎಲ್ಲವನ್ನೂ ಮನಗಂಡು ಶನಿವಾರ ಮತ್ತು ಭಾನುವಾರ ಎರಡು ದಿನಗಳ ಅದ್ಧೂರಿಯಾಗಿ ಜಲಪಾತೋತ್ಸವ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಈ ಬಾರಿ ಜಲಪಾತೋತ್ಸವದಲ್ಲಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿ ಲೇಸರ್ ಲೈಟ್ ಶೋ, ಸೌಂಡ್ ಆ್ಯಂಡ್ ಲೈಟ್ಸ್ ಗಳನ್ನು ಆಳವಡಿಸಲಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.13 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ಸಾದ್ವಿನಿ ಕೊಪ್ಪ, ಸಾಕ್ಷಿ ಕೊಲ್ಲೂರು, ಹನುಮಂತ, ಕಂಬದ ರಂಗಯ್ಯ ಇವರಿಂದ ಜಾನಪದ ಸಂಗೀತ, 6 ಗಂಟೆಗೆ ಶಿವರಾಜ್ ಕೆ.ಆರ್.ಪೇಟೆ ಮತ್ತು ತಂಡದಿಂದ ಕಾಮಿಡಿ ಶೋ, 6.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಪಾತೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ರಾತ್ರಿ 7.30 ರಿಂದ 11 ಗಂಟೆವರೆಗೆ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ಕಾರ್‍ಯಕ್ರಮ. ಖ್ಯಾತ ಗಾಯಕಿ ಮಂಗಲಿ, ರಾಗಿಣಿ ದ್ವಿವೇದಿ, ಮಾನ್ವಿತಾ ಹರೀಶ್ ಅವರು ಭಾಗವಹಿಸುವರು ಎಂದು ತಿಳಿಸಿದರು.

ಸೆ.14ರಂದು ಬೆಳಗ್ಗೆ 11 ರಿಂದ 3ರವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್‍ಯಕ್ರಮ. 3 ರಿಂದ ಸಂಜೆ 4.30ರವರೆಗೆ ಸವಿತಕ್ಕ, ರವಿ ಮೂರುರು, ಶ್ರೀಹರ್ಷ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ಇವರಿಂದ ಜಾನಪದ ಸಂಗೀತ ಕಾರ್‍ಯಕ್ರಮ, ಸಂಜೆ 4.30 ರಿಂದ 7ರವರೆಗೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಕಾಮಿಡಿ ಶೋ, 7 ರಿಂದ 7.30 ರವರೆಗೆ ಸಮಾರೋಪ ಸಮಾರಂಭ, ರಾತ್ರಿ 7.30 ರಿಂದ 11ರವರೆಗೆ ಗುರುಕಿರಣ್ ಮತ್ತು ತಂಡದಿಂದ ಸಂಗೀತ ಕಾರ್‍ಯಕ್ರಮ ಹಾಗೂ ಹರ್ಷಿಕ ಪೂಣಚ್ಚ ಮತ್ತು ಭಾವನಾ ಅವರಿಂದ ನೃತ್ಯ ಕಾರ್‍ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಅಕ್ವೇರಿಯಂ ಉದ್ಯಾನಕ್ಕೆ ಚಿಂತನೆ:

ಗಗನಚುಕ್ಕಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪಿಪಿಪಿ ಮಾದರಿಯಲ್ಲಿ ಅಕ್ವೇರಿಯಂ ಉದ್ಯಾನಕ್ಕೆ ಚಿಂತನೆ ನಡೆಸಲಾಗಿದೆ. ಪ್ರವಾಸಿಗರಿಗೆ ರೆಸಾರ್ಟ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಶಾಶ್ವತ ಪ್ರವಾಸಿ ತಾಣದ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ವರ್ಷವಿಡೀ ನೀರಿನ ಹರಿವಿದ್ದರೂ ಜಲಪಾತದ ವೈಭವ ಮಾತ್ರ ಹೆಚ್ಚು ನೀರು ಬರುತ್ತಿದ್ದಾಗ ನೋಡಬಹುದು. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ತಲಕಾಡು, ಬಂಡಿಪುರ ಸೇರಿ ಇತರೆ ಪ್ರವಾಸಿ ತಾಣಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಉದ್ಯಾನಕ್ಕೆ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಅರಣ್ಯ ಜಮೀನನ್ನೂ ಬಳಕೆ ಮಾಡಿಕೊಳ್ಳಬೇಕು. ಹೀಗಾಗಿ ಸಂಬಂಧಿಸಿದ ಇಲಾಖೆಯೊಂದಿಗೆ ವ್ಯವಹರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮಲ್ಲಿಕ್ಯಾತನಹಳ್ಳಿ ಬಳಿ ಸಮಾರಂಭ:

ಬೆಂಗಳೂರಿಗೆ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ಕಾರಣ ಗಗನಚುಕ್ಕಿ ಬಳಿ ತೆರಳಲು ವಾಹನಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಕ್ಯಾತನಹಳ್ಳಿ ಬಳಿಯೇ ವೇದಿಕೆ ಸಮಾರಂಭ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಅಲ್ಲಿಂದ ಗಗನಚುಕ್ಕಿ ಜಲಪಾತದ ಬಳಿಗೆ ತೆರಳಲು ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಖಾಸಗಿ ವಾಹನಗಳಿಗೆ ಅವಕಾಶವಿಲ್ಲ. ಎಲ್ಲರೂ ಬಸ್‌ಗಳಲ್ಲೇ ತೆರಳಬೇಕು ಎಂದು ಹೇಳಿದರು.

ಉಚಿತ ಬಸ್ ವ್ಯವಸ್ಥೆ:

ಮಳವಳ್ಳಿ ಬಸ್ ನಿಲ್ದಾಣದಿಂದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮಳವಳ್ಳಿಗೆ ಬಂದಲ್ಲಿ ಅಲ್ಲಿಂದ ಜಲಪಾತೋತ್ಸವಕ್ಕೆ ತೆರಳಲು ಅನುಕೂಲ ಕಲ್ಪಿಸಲಾಗಿದೆ. ಜಲಪಾತವನ್ನು ಕುಳಿತು ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಮೆಟ್ಟಿಲುಗಳು, ಅಗತ್ಯ ಲೈಟಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಎರಡು ದಿನಗಳ ಜಲಪಾತೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಉಚಿತವಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸೆ.13 ರಂದು ಚಿತ್ರನಟ ಡಾಲಿ ಧನಂಜಯ್, ಸೆ.14ರ ಸಮಾರೋಪ ಸಮಾರಂಭದಂದು ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಇತರರು ಭಾಗವಹಿಸಲಿದ್ದಾರೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಉಪಸ್ಥಿತರಿದ್ದರು.