ಸಾರಾಂಶ
ಬಸವಕಲ್ಯಾಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲ್ಯಾಣಮ್ಮ ಶರಣಿಯರ ಶಾಲಾ ಶತಮಾನೋತ್ಸವ ಹಾಗೂ ಬಸವಕಲ್ಯಾಣ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಜಯಶಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಆಧ್ಯಾತ್ಮ ಎನ್ನುವುದು ವಿನಯ, ಸಹದೋರತ್ವ ಹಾಗೂ ಜ್ಞಾನ ಹೊಂದಲು ಇರುವ ಅವಕಾಶ ಹಾಗೂ ದಾರಿಯಾಗಿದೆ ಎಂದು ಹೀರನಗಾಂವ್ ಮಠದ ಪೀಠಾಧಿಪತಿಗಳಾದ ಜಯಶಾಂತಲಿಂಗ ಮಹಾಸ್ವಾಮಿಗಳು ನುಡಿದರು.ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಕಮಹಾದೇವಿ ಗವಿಯ ಬಸವಕಲ್ಯಾಣದ ಕಲ್ಯಾಣಮ್ಮ ಶರಣಿಯರ ಶಾಲಾ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಬಸವಕಲ್ಯಾಣ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಬಸವಣ್ಣನವರು ಸದ್ವಿನಯವೇ ಸದಾಶಿವನ ಒಲುಮೆಯಾಗಿದೆ ಎಂದಿದ್ದಾರೆ. ಜಾತಿ, ಧರ್ಮ ಭೇಧ ಭಾವ ಮಾಡದೆ ಮನುಷ್ಯರೆಲ್ಲರು ದೇವರ ಮಕ್ಕಳು. ದೇವನೊಬ್ಬ ನಾಮ ಹಲವು. ಆಚಾರವೇ ಸ್ವರ್ಗ ಅನಾಚಾರವೆ ನರಕ ಹೀಗೆಯೇ ಮುಂತಾದ ಮೌಲಿಕ ವಚನಗಳು ಬರೆಯುವ ಮುಖಾಂತರ ವಿಶ್ವ ಕುಟುಂಬಿಯಾಗಿ ಬಾಳಲು ಶರಣರು ಮಾರ್ಗದರ್ಶನ ಮಾಡಿದ್ದಾರೆ ಎಂದ ಅವರು, ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು ಸ್ವಾಗತಾರ್ಹ ಎಂದರು.ವಚನ ಚಾರಿಟೇಬಲ್ ಟ್ರಸ್ಟಿನ ವೀರಶೆಟ್ಟಿ ಮಲಶೆಟ್ಟಿ ಅವರು ಮಾತನಾಡಿ, ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಪಾಠವನ್ನು ಕಳೆದ ೨ ವರ್ಷಗಳಿಂದ ಕಲ್ಯಾಣಮ್ಮ ತಾಯಿಯವರು ಹೇಳುತ್ತ ಬಂದಿರುವುದು ಶ್ಲಾಘನೀಯ ಕೆಲಸವಾಗಿದೆ ಬಸವಣ್ಣನವರ ತತ್ವಗಳಲ್ಲಿ ಹಾಡು ಮತ್ತು ಪ್ರವಚನಗಳ ಮುಖಾಂತರ ನೂರು ಶಾಲೆಗಳಲ್ಲಿ ಸಂಚರಿಸಿ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಬಿತ್ತುತ್ತಿರುವುದು ಅಭಿನಂದನೆಯ ಕೆಲಸವಾಗಿದೆ. ಇವರ ಜೊತೆಯಲ್ಲಿ ಬ್ರಹ್ಮಕುಮಾರಿ ಈಶ್ವರಿ ಮಹಾವಿದ್ಯಾಲಯದ ಚಿತ್ರಲೇಖಾ ಪಾಟೀಲ್ ಅವರು ಕೈ ಜೋಡಿಸಿ ತಾಲೂಕಿನಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅತಿಥಿಗಳಾಗಿ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ತಾಜೋದ್ದಿನ್ ಅತ್ತರ ಅವರು ಮಾತನಾಡಿ, ಶರಣರ ತತ್ವಗಳು ಎಲ್ಲ ಜಾತಿ ಜನಾಂಗಕ್ಕೆ ಸೇರಿದ ತತ್ವಗಳಾಗಿವೆ. ಕಾಯಕ ದಾಸೋಹ ಸಿದ್ಧಾಂತದಿಂದ ನಾವು ಬದುಕಿ ಬಾಳಬೇಕು, ಮತ್ತೊಬ್ಬರ ಮನಸ್ಸನ್ನು ನೋಯಿಸಕೊಡದು. ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದ ಅವರು, ವಚನ ಅಧ್ಯಯನವನ್ನು ಸರ್ವರು ಮಾಡಬೇಕು ಎಂದರು. ಕಾರ್ಯಕ್ರಮ ಸಾನ್ನಿಧ್ಯವನ್ನು ಕಲ್ಯಾಣಮ್ಮ, ಚಿತ್ರಲೇಖಾ ಪಾಟೀಲ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುನಾಥ ಗಡ್ಡೆ, ಹಣಮಂತರಾವ್ ಧನಶೆಟ್ಟಿ ಮತ್ತಿತರರು ಮಾತನಾಡಿದರು.ಅಪ್ಪಣ್ಣ ಭಂಡಾರಿ ಸ್ವಾಗತಿಸಿ ವಿನೋದ ರಾಠೋಡ ನಿರೂಪಿಸಿದರೆ ರಜನಿಕಾಂತ ವಂದಿಸಿದರು.