ಬದುಕನ್ನು ಸುಂದರವಾಗಿ ಚಿತ್ರಿಸಿಕೊಳ್ಳುವ ಅವಕಾಶ ನಮ್ಮ ಕೈಯಲ್ಲಿಯೇ ಇರುತ್ತದೆ. ವಿದ್ಯಾರ್ಥಿಗಳು ಅತ್ಯಂತ ಶ್ರದ್ಧೆ, ಭಕ್ತಿ, ಪರಿಶ್ರಮದಿಂದ ಜ್ಞಾನ ಸಂಪಾದಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.
ಹಾವೇರಿ: ಬದುಕನ್ನು ಸುಂದರವಾಗಿ ಚಿತ್ರಿಸಿಕೊಳ್ಳುವ ಅವಕಾಶ ನಮ್ಮ ಕೈಯಲ್ಲಿಯೇ ಇರುತ್ತದೆ. ವಿದ್ಯಾರ್ಥಿಗಳು ಅತ್ಯಂತ ಶ್ರದ್ಧೆ, ಭಕ್ತಿ, ಪರಿಶ್ರಮದಿಂದ ಜ್ಞಾನ ಸಂಪಾದಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.ನಗರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯ-2ರಲ್ಲಿ ಹಾವೇರಿಯ ಸೃಜನಶೀಲ ಉಪನ್ಯಾಸಕರ ವೇದಿಕೆ ವತಿಯಿಂದ ನಡೆದ ವಸತಿ ನಿಲಯಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪೂರ್ವ ತರಬೇತಿ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ನಕರಾತ್ಮಕ ಚಿಂತನೆಗಳನ್ನು ಬದಿಗೊತ್ತಿ ಸಕಾರಾತ್ಮಕವಾಗಿ ಯೋಚಿಸಬೇಕು. ನಿಮ್ಮ ವ್ಯಕ್ತಿತ್ವದ ವಿಕಾಸ ಮನೆಯಿಂದಲೇ ಆರಂಭವಾಗಬೇಕು. ನಿಮ್ಮ ಗುರಿ ಸಾಧಿಸಿದ ಮೇಲೆ ಮತ್ತೆ ಸಮಾಜ ಸೇವೆಗೆ ಸಿದ್ದರಾಗಬೇಕು. ನಾವಿಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಆದರೆ ಬಹುತೇಕರು ತಂತ್ರಜ್ಞಾನದ ನಕಾರಾತ್ಮಕ ಉಪಯೋಗದ ಬಗ್ಗೆ ಮಾತನಾಡುತ್ತಾರೆ. ಸಕಾರಾತ್ಮಕ ಉಪಯೋಗದ ಬಗ್ಗೆ ಹೇಳುತ್ತಿಲ್ಲ. ಇಂದಿನ ಮತ್ತು ಭವಿಷ್ಯದ ಪೀಳಿಗೆ ತಂತ್ರಜ್ಞಾನದಲ್ಲೇ ಬದುಕಬೇಕಾಗಿದೆ. ವಿದ್ಯಾರ್ಥಿಗಳು ಮೌಲ್ಯಗಳನ್ನ ಹಿಡಿದುಕೊಂಡು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡರೆ ಅದ್ಭುತಗಳನ್ನು ಸೃಷ್ಟಿಸಬಹುದು. ದ್ವಿತೀಯ ಪಿಯುಸಿ ನಂತರ ನೀವು ಏನಾಗಬೇಕೆಂದು ನಿರ್ಧರಿಸುವ ಪ್ರಮುಖವಾದ ಹಂತವಿದು. ನಿಮ್ಮ ಫಲಿತಾಂಶವನ್ನು ಉತ್ತಮಪಡಿಸಲೆಂದು ಒಂದಷ್ಟು ಉತ್ಸಾಹಿ, ಸೃಜನಶೀಲ ಮನಸ್ಸುಳ್ಳ ಉಪನ್ಯಾಸಕರು ಸೃಜನಶೀಲ ಉಪನ್ಯಾಸಕರ ವೇದಿಕೆ ಅಡಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಇಂತಹ ಪರೀಕ್ಷಾ ಪೂರ್ವ ತರಬೇತಿ ಏರ್ಪಡಿಸಿರುವುದು ಅಭಿನಂದನೀಯ ಎಂದರು.ವೇದಿಕೆಯ ಗೌರವಾಧ್ಯಕ್ಷ ಶೇಖರ ಭಜಂತ್ರಿ ಮಾತನಾಡಿ, ವೃತ್ತಿ ಬದುಕಿನ ಸೀಮಿತ ಚೌಕಟ್ಟನ್ನ ಮೀರಿದಾಗ ಸಮಾಜ ಸೇವೆಯ ಹಲವು ಅವಕಾಶಗಳು ತೆರೆದುಕೊಳ್ಳುತ್ತವೆ. ಎಲ್ಲರ ಜೀವನ ಶೈಲಿ ವೇಗ ಪಡೆದು ಒತ್ತಡದ ಬದುಕಿನಲ್ಲಿದ್ದೇವೆ. ಯಾರಿಗೂ ಸ್ಪಂದಿಸುವ ಸಮಯವಿಲ್ಲ ಎಂದುಕೊಳ್ಳುತ್ತೇವೆ. ಆದರೆ ಒಂದಷ್ಟು ಸಮಯವನ್ನು ಹೊಂದಿಸಿಕೊಂಡರೆ ನಮ್ಮ ಸೇವೆಯನ್ನು ವಿಸ್ತರಿಸಿಕೊಳ್ಳಬಹುದು. ನಮ್ಮಲ್ಲಿ ಹಲವರು ಸೇವಾಮನೋಭಾವವುಳ್ಳ ಉತ್ತಮ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಅವರನ್ನು ಒಂದೇ ವೇದಿಕೆಗೆ ತಂದು ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕಾಗಿ ತರಬೇತಿ ನೀಡಿದ್ದೇವೆ. ಈ ಸಣ್ಣ ಪ್ರಯತ್ನದಿಂದ ಫಲಿತಾಂಶದಲ್ಲಿ ಹೆಚ್ಚಳವಾದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಈ ಪ್ರಯತ್ನಕ್ಕೆ ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.ಪ್ರಾಚಾರ್ಯ ಅರವಿಂದ ಐರಣಿ ಮಾತನಾಡಿ, ನಮ್ಮಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ದುಡಿಯುವ ಮನಸ್ಸುಗಳಿವೆ. ಅಂಥವರ ಜ್ಞಾನವನ್ನು ಮಕ್ಕಳಿಗೆ ದಾಟಿಸುವಲ್ಲಿ ಸೃಜನಶೀಲ ಉಪನ್ಯಾಸಕರ ವೇದಿಕೆ ಸಫಲವಾಗಿದೆ. ನಾವೂ ವೇದಿಕೆಯ ಭಾಗವಾಗಿರುವುದು ಖುಷಿ ತಂದಿದೆ. ನಮ್ಮನ್ನು ಗುರುತಿಸಿ ಅವಕಾಶ ನೀಡಿ ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ. ಮುಂದೆಯೂ ವೇದಿಕೆಯ ಇಂತಹ ರಚನಾತ್ಮಕ ಕಾರ್ಯಗಳಿಗೆ ನಾವೆಲ್ಲರೂ ಜೊತೆಯಾಗುತ್ತೇವೆ.ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕೆಂದರು. ಸೃಜನಶೀಲ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಮಂಜುನಾಥ ಹಟ್ಟಿಯವರ ಮಾತನಾಡಿದರು. ಇದೇ ಸಂದರ್ಭದಲ್ಲಿ ತರಬೇತಿ ನೀಡಿದ ಉಪನ್ಯಾಸಕರಾದ ರವಿರಾಜ ಕೊಪರ್ಡೆ, ಅರವಿಂದ ಐರಣಿ, ಶಿವಾನಂದ ಕೆ., ಮಂಜುನಾಥ ಸಂಗಣ್ಣನವರ, ವಿಶ್ವನಾಥ ಹಿರೇಮಠ, ವಿಶ್ವ, ಹೊಳಲಮ್ಮ, ಗುಡ್ಡಪ್ಪ ಮಡಿವಾಳರ, ಸ್ನೇಹ ಹಿರೇಮಠ, ನಂದಾ ಮಾಳಣ್ಣನವರ ಹಾಗೂ ವಸತಿ ನಿಲಯದ ಮೇಲ್ವಿಚಾರಕಿ ನಂದ ಹೂಗಾರ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಇತ್ತೀಚೆಗೆ ದಕ್ಷಿಣ ಭಾರತ ಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಟೇನಹಳ್ಳಿಯ ಶಿಕ್ಷಕಿ ಭಾಗ್ಯ ಎಂ.ಕೆ. ಅವರನ್ನು ವೇದಿಕೆ ಪರವಾಗಿ ಗೌರವಿಸಲಾಯಿತು. ಮೇಲ್ವಿಚಾರಕಿಯರಾದ ದೇಸಾಯಿ, ದೊಡ್ಡಗೌಡ್ರು, ಭಾಗ್ಯಲಕ್ಷಿ÷್ಮ, ಉಪನ್ಯಾಸಕ ವಿ. ಎಸ್.ಪಾಟೀಲ ವೇದಿಕೆಯಲ್ಲಿದ್ದರು.ವಿದ್ಯಾ ಲಮಾಣಿ ಸ್ವಾಗತಿಸಿದರು. ಭಾವನ ನಿರೂಪಿಸಿದರು. ಜ್ಯೋತಿ ಅರಸಲಿ ವಂದಿಸಿದರು.