ರಂಗದಲ್ಲಿ ಸಾಮಾನ್ಯವಾಗಿ ಬೆಳಕಿನ ಜತೆ ಆಟವಾಡುವುದನ್ನು ಪಾತ್ರಧಾರಿಗಳು ಕಲಿಯಬೇಕು. ಸಮಯ, ಸಂದರ್ಭ, ಮಿತಿ, ವ್ಯಾಪ್ತಿ, ವಿನ್ಯಾಸದ ಅರಿವು ಅವರಿಗೆ ಇರಬೇಕು. ರಂಗಕ್ಕೆ ಬೆಳಕು ಅನಿವಾರ್ಯ ಹಾಗೂ ಪೂರಕ. ಅದೇ ರೀತಿ ಪಾತ್ರಧಾರಿಯ ಪ್ರಸಾಧನ ಸಹ ಅಷ್ಟೇ ಮುಖ್ಯ.

ಧಾರವಾಡ:

ಒಬ್ಬ ವ್ಯಕ್ತಿಯನ್ನು ಪ್ರಸಾಧನ ಮೂಲಕ ಬೇರೆಯ ವ್ಯಕ್ತಿಯನ್ನಾಗಿ ತೋರಿಸುವುದನ್ನು ಕರಗತ ಮಾಡಿಕೊಂಡವರು ಖ್ಯಾತ ಪ್ರಸಾಧನ ಕಲಾವಿದ ದಿ. ಗಜಾನನ ಮಹಾಲೆ ಎಂದು ಗುಳೇದಗುಡ್ಡದ ಹಿರಿಯ ರಂಗಭೂಮಿ ಕಲಾವಿದ ವಿನೋದ ಅಂಬೇಕರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಗಜಾನನ ಮಹಾಲೆ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ಏನನ್ನು ಮಾಡಲು ಸಾಧ್ಯವೋ ಅದನ್ನು ಬಣ್ಣಗಳಿಂದ ತೋರಿಸಿಕೊಟ್ಟವರು ಮಹಾಲೆ. ಬಣ್ಣಗಳ ಬಗ್ಗೆ ಅಗಾಧ ಜ್ಞಾನ ಹೊಂದಿದವರು. ಪಾತ್ರವನ್ನು ಸೂಕ್ಷ್ಮ ರೀತಿಯಿಂದ ಬಣ್ಣದ ಮೂಲಕ ತೋರಿಸುತ್ತಿದ್ದರು ಎಂದರು.

ರಂಗದಲ್ಲಿ ಸಾಮಾನ್ಯವಾಗಿ ಬೆಳಕಿನ ಜತೆ ಆಟವಾಡುವುದನ್ನು ಪಾತ್ರಧಾರಿಗಳು ಕಲಿಯಬೇಕು. ಸಮಯ, ಸಂದರ್ಭ, ಮಿತಿ, ವ್ಯಾಪ್ತಿ, ವಿನ್ಯಾಸದ ಅರಿವು ಅವರಿಗೆ ಇರಬೇಕು. ರಂಗಕ್ಕೆ ಬೆಳಕು ಅನಿವಾರ್ಯ ಹಾಗೂ ಪೂರಕ. ಅದೇ ರೀತಿ ಪಾತ್ರಧಾರಿಯ ಪ್ರಸಾಧನ ಸಹ ಅಷ್ಟೇ ಮುಖ್ಯ. ಗಜಾನನ ಮಹಾಲೆ ಸೃಜನಶೀಲವ್ಯಕ್ತಿ. ಪ್ರಸಾಧನದಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಸಂಗೀತ ಮತ್ತು ಚಿತ್ರಕಲೆಯಲ್ಲಿಯೂ ಪರಿಣಿತರಾಗಿದ್ದರು. ಉತ್ತರ ಕರ್ನಾಟಕಕ್ಕೆ ಇವರ ಕೊಡುಗೆ ಅಪಾರ ಎಂದು ಹೇಳಿದರು.

ದಾಂಡೇಲಿಯ ಭರತನಾಟ್ಯ ಕಲಾವಿದ ವಿದ್ವಾನ್ ಕೃಷ್ಣ ಭಾಗವತ್ ಮಾತನಾಡಿ, ಗಜಾನನ ಮಹಾಲೆ ಅವರು ನೂರಾರು ಮಕ್ಕಳಿಗೆ ಮಾಡುತ್ತಿದ್ದ ಪ್ರಸಾಧನ ಸುಲಭದ ಕೆಲಸವಲ್ಲ. ಅಂಥ ಕಾರ್ಯಗಳನ್ನು ಅತ್ಯಂತ ಸರಳವಾಗಿ ಮಾಡುವ ಪ್ರಖರತೆ ಹೊಂದಿ ಕಲಾವಿದರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾತ ಬೆಲ್ಲದ ಮಾತನಾಡಿದರು. ಡಾ. ದ.ರಾ. ಬೇಂದ್ರೆ ಗೀತೆಗಳಿಗೆ ಜಾನಪದ ನೃತ್ಯಗಳನ್ನು ವಿದುಷಿ ಪ್ರಮೋದಾ ಉಪಾಧ್ಯಾಯ ಶಿಷ್ಯ ಬಳಗದವರು ಪ್ರಸ್ತುತಪಡಿಸಿದರು. ಸಂತೋಷ ಮಹಾಲೆ, ನಟರಾಜ ಉಪಾಧ್ಯಾಯ, ಸುಧಾ ಕಬ್ಬೂರ, ಮಾಧುರಿ ಕುಲಕರ್ಣಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ ಮತ್ತಿತರರು ಇದ್ದರು.