ಸಾರಾಂಶ
ಹೊನ್ನಾವರ: ಹಿರಿಯ ಕಲಾವಿದ ಎಂ.ಎಲ್. ಸಾಮಗ ಮಲ್ಪೆ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುಣವಂತೆಯ ಕೆರಮನೆಯ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ 14ನೇ ರಾಷ್ಟ್ರೀಯ ನಾಟ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಎಂ.ಎಲ್. ಸಾಮಗ ಮಾತನಾಡಿ, ಸಾಮಗ ಮನೆತನಕ್ಕೂ, ಕೆರೆಮನೆ ಮನೆತನಕ್ಕೂ ಅನಾದಿ ಕಾಲದ ನಂಟು ಇದೆ. ಕಾರಣ ಸಂತೋಷ ಮತ್ತು ಸಂಕೋಚ ಎರಡೂ ಭಾವದಿಂದ ಪ್ರಶಸ್ತಿಯನ್ನು ಧನ್ಯತಾ ಭಾವದಿಂದ ಸ್ವೀಕರಿಸಿದ್ದೇನೆ ಎಂದರು. ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಸಂಗಡ ವೇಷ ಮಾಡಿ ಸಾರ್ಥಕತೆ ಮತ್ತು ಸಾತ್ವಿಕ ಭಾವ ಪಡೆದಿದ್ದೇನೆ ಎಂದರು.ಈ ವೇಳೆ ಹಿರಿಯ ಉಪನ್ಯಾಸಕ ನಾರಾಯಣ ಹೆಗಡೆ ಮಾತನಾಡಿ, ಯಾವ ವೃತ್ತಿ ಕಲಾವಿದನಿಗೂ ಕಡಿಮೆ ಇಲ್ಲದ ಉಭಯ ತಿಟ್ಟುಗಳಲ್ಲಿ ಸೈ ಎನಿಸಿಕೊಂಡ ಕಲಾಪ್ರೌಢಿಮೆ ಮೆರೆದ ಕಲಾವಿದರು ಮಲ್ಪೆಯ ಎಂ.ಎಲ್. ಸಾಮಗರು ಎಂದರು.ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ಹಿರಿಯ ಪ್ರಸಂಗಕರ್ತರಾದ ಕಂದಾವರ ರಘುರಾಮ್ ಶೆಟ್ಟಿ. ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆ ಅವರಿಗೆ ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಐರೋಡಿ ಗೋವಿಂದಪ್ಪ ಅವರು, ನನ್ನ ಕಲಾ ಬದುಕಿನ ಪಥದಲ್ಲಿ ಪಡೆದ ಎಲ್ಲ ಸನ್ಮಾನಕ್ಕಿಂತ ಈ ವೇದಿಕೆಯಲ್ಲಿ ಪಡೆದ ಸನ್ಮಾನ ವಿಶೇಷ ಮತ್ತು ಅನನ್ಯವಾದದ್ದು ಎಂದರು. ಕಂದಾವರ ರಘುರಾಮ ಶೆಟ್ಟಿ, ಚಂದ್ರಶೇಖರ್ ದಾಂಬಳೆ, ಉದ್ಯಮಿ, ಕಲಾಪೋಷಕ ಕೃಷ್ಣಮೂರ್ತಿ ಮಂಜರು ಮಾತನಾಡಿದರು. ಕಲಾಪೋಷಕರಾದ ವೆಂಕಟರಮಣ ಹೆಗಡೆ, ಅಪೋಲೋ ಆಸ್ಪತ್ರೆಯ ಸರ್ಜನ್ ಡಾ. ನಾರಾಯಣ ಹೆಗಡೆ ಮತ್ತು ಊರಿನ ಮುಖಂಡ ಗಣಪಯ್ಯಗೌಡರು ಉತ್ಸವಕ್ಕೆ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿಮರ್ಶಕ ಎಂ. ಪ್ರಭಾಕರ್ ಜೋಶಿ ಮಾತನಾಡಿದರು. ಯಕ್ಷಗಾನ ಶೈಲಿಯಲ್ಲಿ ಅನಂತ ಹೆಗಡೆ ದಂತಳಿಕೆ ಗಣಪತಿ ಸ್ತುತಿಸಿದರು. ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ನರಸಿಂಹ ಹೆಗಡೆ ಮತ್ತು ಚಂಡೆಯಲ್ಲಿ ಶ್ರೀಧರ ಗಡೆ ಸಾಥ್ ನೀಡಿದರು.ಲಕ್ಷ್ಮಿನಾರಾಯಣ ಕಾಶಿ ಸ್ವಾಗತಿಸಿದರು. ಎಸ್.ಜಿ. ಭಟ್ ಕಬ್ಬಿನಗದ್ದೆ ಮತ್ತು ಮಹೇಶ್ ಹೆಗಡೆ ಮಾಳ್ಕೋಡ್ ಕಾರ್ಯಕ್ರಮ ನಿರ್ವಹಿಸಿದರು. ಶಿವಾನಂದ ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಧಾತು ಗೊಂಬೆಯಾಟ ತಂಡ ಬೆಂಗಳೂರು ಇವರಿಂದ ಅಷ್ಟಾವಕ್ರ ಗೊಂಬೆಯಾಟ ಪ್ರದರ್ಶಿಸಲ್ಪಟ್ಟಿತು. ಶ್ರೀವಿಜಯ ಹೆಗಡೆ ಬೆಂಗಳೂರು, ಮಯೂರ ಬೆಂಗಳೂರು, ಅಮರ್ ಕೌಶಿಕ್ ಮೈಸೂರು, ಅನುಪ್ ಕೃಷ್ಣ ಮೈಸೂರು, ಶ್ರೀಧರ್ ಹೆಗಡೆ, ಕೆರೆಮನೆ ಅವರಿಂದ "ಉಪಾಸನ ಸಂಗೀತ " ಧ್ವನಿಮುದ್ರಣ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು.ಕಲಾ ಗಂಗೋತ್ರಿ ಬೆಂಗಳೂರು ಇವರಿಂದ ಮುಖ್ಯಮಂತ್ರಿ ಎಂಬ ಆಖ್ಯಾನ ನಾಟಕ ಪ್ರದರ್ಶಿಸಲ್ಪಟ್ಟಿತು. ಪ್ರಧಾನ ಪಾತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ಗಮನ ಸೆಳೆದರು.