ಸಾರಾಂಶ
ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರು ಬೃಹಸ್ಪತಿಗಳೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರು : ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರು ಬೃಹಸ್ಪತಿಗಳೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಾರಾಯಣಮೂರ್ತಿ ಅವರು ಹಿಂದುಳಿದವರ ಸಮೀಕ್ಷೆ ಎಂದು ಭಾವಿಸಿದ್ದರೆ ಅದು ತಪ್ಪು. ಸಮೀಕ್ಷೆ ಹಿಂದುಳಿದವರಿಗಲ್ಲಾ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇದು ಪ್ರತಿಯೊಬ್ಬರ ಸಮೀಕ್ಷೆ ಎಂದು 20 ಸಲ ಹೇಳಿದ್ದೇನೆ. ಈ ಸಮೀಕ್ಷೆ ಏನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ಫೋಸಿಸ್ ಸಂಸ್ಥೆಯವರು ಅಂದರೆ ಅವರು ಬೃಹಸ್ಪತಿಗಳೇ? ಸರ್ಕಾರ ಮಾಡುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇದು ರಾಜ್ಯದ ಎಲ್ಲರನ್ನು ಒಳಗೊಂಡಂತೆ ಮಾಡುತ್ತಿರುವ ಸಮೀಕ್ಷೆ. ಸಮೀಕ್ಷೆಯನ್ನು ಹಿಂದುಳಿದವರ ಸಮೀಕ್ಷೆಯೆಂದು ಭಾವಿಸುವುದು ತಪ್ಪು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೂ ಜಾತಿಗಣತಿಯನ್ನು ಮಾಡುತ್ತದೆ. ಆಗಲೂ ಇವರು ಸಹಕರಿಸುವುದಿಲ್ಲವೇ? ಅವರಿಗಿರುವ ತಪ್ಪು ಮಾಹಿತಿಯಿಂದಾಗಿ ಈ ರೀತಿ ಅಸಹಕಾರ ತೋರುತ್ತಿರಬಹುದು. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಇದು ಈ ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಾಗಿದೆ ಎಂದರು.
ರಾಜ್ಯ ಸರ್ಕಾರ ಸಾರಿಗೆ ನಿಗಮದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಂತಹ ಕಲ್ಯಾಣ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮಾಸಿಕ 2000 ರು. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ನೀಡುತ್ತಿದೆ. ಮೇಲ್ವರ್ಗದ ಮಹಿಳೆಯರು ಹಾಗೂ ಬಡತನ ರೇಖೆಗಿಂತ ಮೇಲೆ ಇರುವವರು ಇವುಗಳ ಪ್ರಯೋಜನ ಪಡೆಯುತ್ತಿಲ್ಲವೇ ಎಂದರು.
- ಜಾತಿ ಗಣತಿಗೆ ಮಾಹಿತಿ ನೀಡದ್ದಕ್ಕೆ ಅತೃಪ್ತಿ
- ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿಯ ಬೆಂಗಳೂರು ಮನೆಗೆ ತೆರಳಿದ್ದ ಸಮೀಕ್ಷಾ ಸಿಬ್ಬಂದಿ
- ಮಾಹಿತಿ ನೀಡಲು ನಿರಾಕರಿಸಿದ್ದ ಮೂರ್ತಿ, ಸುಧಾ ಮೂರ್ತಿ. ಈ ಬಗ್ಗೆ ಸಿಎಂಗೆ ಪತ್ರಕರ್ತರ ಪ್ರಶ್ನೆ
- ರಾಜ್ಯದ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಹಿಂದುಳಿದವರ ಸಮೀಕ್ಷೆ ಎಂದು ಭಾವಿಸಿದಂತಿದೆ
- 20 ಸಲ ಹೇಳಿದ್ದೇನೆ, ಇದು ಅಂತಹ ಸಮೀಕ್ಷೆಯಲ್ಲ. ಆದರೂ ಇನ್ಫೋಸಿಸ್‌ನವರು ಮಾಹಿತಿ ಕೊಟ್ಟಿಲ್ಲ
- ಅವರೇನು ಬೃಹಸ್ಪತಿಗಳೇ? ಕೇಂದ್ರದ ಗಣತಿಗೂ ಮಾಹಿತಿ ಕೊಡಲ್ವೇ? ಎಂದು ಸಿದ್ದರಾಮಯ್ಯ ಪ್ರಶ್ನೆ