ಕಾನ್ವೆಂಟ್‌ ಶಾಲೆ ಮೀರಿಸುವ ಗಜಾಪುರ ಅಂಗನವಾಡಿ ಕೇಂದ್ರ

| Published : Jul 29 2024, 12:49 AM IST / Updated: Jul 29 2024, 12:50 AM IST

ಕಾನ್ವೆಂಟ್‌ ಶಾಲೆ ಮೀರಿಸುವ ಗಜಾಪುರ ಅಂಗನವಾಡಿ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಕಾರ್ಯಕರ್ತೆ ಬಿ.ವಸಂತಮ್ಮ. ಹೊಸ ಪ್ರಯೋಗಗಳ ಮೂಲಕ ಪ್ರಾಥಮಿಕ ಪೂರ್ವಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ರಾಜ್ಯಾದ್ಯಂತ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಅಂತಹ ಪೂರ್ವ ಪ್ರಾಥಮಿಕ ಶಾಲೆಗಳನ್ನು ಮೀರಿಸುವ ಅಂಗವಾಡಿ ತಾಲೂಕಿನ ಗಜಾಪುರದಲ್ಲಿದೆ.

ಇಲ್ಲಿಯ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಕಳುಹಿಸುವ ಬದಲು ಅಂಗನವಾಡಿ ಕೇಂದ್ರಕ್ಕೆ ಕರೆತರುತ್ತಾರೆ. ಅದಕ್ಕೆ ಕಾರಣ ಇಲ್ಲಿಯ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತಮ್ಮ. ಹೊಸ ಪ್ರಯೋಗಗಳ ಮೂಲಕ ಪ್ರಾಥಮಿಕ ಪೂರ್ವಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ.

ವಸಂತಮ್ಮ ಅಂಗವಿಕಲೆ, ಪದವೀಧರೆ. ಅಂಗನವಾಡಿ ಕಾರ್ಯಕರ್ತೆಯಾಗಿ 2013ರಲ್ಲಿ ಆಯ್ಕೆಯಾಗಿದ್ದಾಗ ಕೇವಲ 10-15 ಮಕ್ಕಳಷ್ಟೇ ಅಂಗನವಾಡಿಗೆ ಬರುತ್ತಿದ್ದರು. ಆದರೆ ಅವರು ಬಂದಮೇಲೆ ಗಣನೀಯ ಬೆಳವಣಿಗೆ ಕಂಡಿದೆ. ಪ್ರತಿ ಮಗುವಿನ ಚಲನವಲನ, ಅವರ ಮನಸ್ಸಿನ ಆಳಕ್ಕೆ ಇಳಿದು ಅವರನ್ನು ಇತರ ಮಕ್ಕಳ ಜತೆ ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳುವ ಜತೆಗೆ ಮಕ್ಕಳೊಂದಿಗೆ ಮಕ್ಕಳಾಗಿ ಕಲಿಸುವ ಪರಿ ಅನನ್ಯ.

ಕೇಂದ್ರದಲ್ಲಿ ಆಟಿಕೆಗಳು, ಚಿತ್ರಪಟ, ಕೃಷಿ ಉತ್ಪನ್ನ, ತಾಲೂಕು, ರಾಜ್ಯ, ದೇಶ ಸೇರಿದಂತೆ ಪ್ರಾಥಮಿಕ ತಿಳಿವಳಿಕೆ, ದಿಕ್ಕುಗಳು, ಮಾಸಗಳು, ಗಿಡ, ಮರಗಳ, ಹವಾಮಾನ, ಸ್ಥಳೀಯ ಪರಿಸರ ಹೀಗೆ ಮಕ್ಕಳು ಪ್ರಾಯೋಗಿಕವಾಗಿ ಕಲಿಯುತ್ತಾರೆ. ಎಲ್ಲ ಮಕ್ಕಳಿಗೂ ಒಂದೊಂದು ಚೀಲಗಳನ್ನು ಗೋಡೆಗೆ ನೇತು ಹಾಕಲಾಗಿದೆ. ಮಕ್ಕಳು ವಾರದ ಕಲಿಕೆಯ ಸಾಮಗ್ರಿ, ಪರಿಕರಗಳನ್ನು ಆ ಚೀಲದೊಳಗೆ ಹಾಕುತ್ತಾರೆ. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಪೋಷಕರನ್ನು ಕರೆಸಿ ತಮ್ಮ ಮಕ್ಕಳ ಕಲಿಕೆಯ ಪ್ರಗತಿಯ ಬಗ್ಗೆ ಇಲ್ಲಿಯ ಅಂಗನವಾಡಿ ಕಾರ್ಯಕರ್ತೆ ಸಾಕ್ಷಿ ಕೊಡುತ್ತಾರೆ. ಅಂಗನವಾಡಿ ಕೇಂದ್ರದಲ್ಲಿ ಕಲಿತಿರುವ ಮಕ್ಕಳು ಮನೆಯಲ್ಲಿ ಪೋಷಕರಿಗೂ ತಿಳಿಸುತ್ತಾರೆ.

ಮಕ್ಕಳ ಸರ್ವಾಂಗೀಣ ವಿಕಾಸಗೊಳಿಸುವ ಕಾರ್ಯ ಇಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಇಲ್ಲಿಯ ಮಕ್ಕಳು ವಿವಿಧ ಚಟುವಟಿಕೆ ಮಾಡಿ ತೋರಿಸುತ್ತಾರೆ. ಕಂಠಪಾಠ, ಹಾಡು, ಕುಣಿತ, ವಸ್ತುಗಳ ಗುರುತಿಸುವಿಕೆ, ವಸ್ತು ಜೋಡಿಸುವುದು ಮುಂತಾದ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

10 ವರ್ಷಗಳಿಂದ ರಾಜ್ಯದ ಮೂಲೆ ಮೂಲೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ತಜ್ಞರು, ಸಂಘ-ಸಂಸ್ಥೆಗಳವರು ಇಲ್ಲಿಗೆ ಆಗಮಿಸಿ, ಇಲ್ಲಿಯ ಕಲಿಕಾ ಪದ್ಧತಿ ಅಧ್ಯಯನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಈಗ ಇಂತಹ ಪದ್ಧತಿ ಅಳವಡಿಸಿಕೊಳ್ಳುತ್ತಿದೆ. ಆದರೆ 10 ವರ್ಷಗಳ ಹಿಂದಿನಿಂದಲೇ ಇಂತಹ ವ್ಯವಸ್ಥೆ ಈ ಕೇಂದ್ರದಲ್ಲಿದೆ.

ಮೊದಮೊದಲು ಹತ್ತಾರು ಮಕ್ಕಳು ಕೇಂದ್ರಕ್ಕೆ ಬರುತ್ತಿದ್ದರು, ಈಗ 28ಕ್ಕೂ ಹೆಚ್ಚು ಮಕ್ಕಳು ಕೇಂದ್ರಕ್ಕೆ ಬರುತ್ತಿದ್ದಾರೆ. ಕಲಿಕೆಗೆ ನನ್ನ ವೇತನದಲ್ಲಿಯೇ ಖರ್ಚು ಮಾಡಿ ಮನೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ಶಾಲೆಗೆ ತರುತ್ತೇನೆ. ನನಗಿನ್ನೂ ಬಹಳ ಕನಸುಗಳಿವೆ ಎನ್ನುತ್ತಾರೆ ಗಜಾಪುರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಿ.ವಸಂತಮ್ಮ.

ಗಜಾಪುರ ಬಿ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಿರುವ ಅಲ್ಲಿಯ ಕಾರ್ಯಕರ್ತೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅಂಗನವಾಡಿಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣದ ಪರಿಕಲ್ಪನೆ ಈಡೇರಿಸಬಹುದು ಎಂಬುದನ್ನು ವಸಂತಮ್ಮ ತೋರಿಸಿಕೊಟ್ಟಿದ್ದಾರೆ. ಇದು ನಮ್ಮ ಇಲಾಖೆಗೆ ಹೆಮ್ಮೆ ಎನ್ನುತ್ತಾರೆ ತಾಲೂಕು ಪ್ರಭಾರ ಸಿಡಿಪಿಒ ವಿಜಯಲಕ್ಷ್ಮಿ.