ಕರ್ನಾಟಕದ ಇತಿಹಾಸ, ಸಂಸ್ಕೃತಿಗೆ ಗಜೇಂದ್ರಗಡದ ಕೊಡುಗೆ ಅಪಾರ

| Published : Jan 22 2025, 12:35 AM IST

ಸಾರಾಂಶ

ಗಜೇಂದ್ರಗಡ ಕೋಟೆಯು ಐದು ಸೊಂಡಿಲು ಆನೆಯಂತೆ ಕಾಣುವುದರಿಂದ ಇದು ಗಜೇಂದ್ರಗಡ ಎಂದು ಹೆಸರು ಪಡೆದಿದೆ

ಗಜೇಂದ್ರಗಡ: ಕರ್ನಾಟಕದ ಭವ್ಯ ಇತಿಹಾಸ ಮತ್ತು ಸಂಸ್ಕೃತಿಗೆ ಗಜೇಂದ್ರಗಡವು ತನ್ನ ಸಾಹಿತ್ಯ, ವಾಸ್ತುಶಿಲ್ಪ, ನೇಕಾರಿಕೋದ್ಯಮಗಳ ಮೂಲಕ ಅಪಾರ ಕೊಡುಗೆ ನೀಡಿದೆ ಎಂದು ಇತಿಹಾಸ ಸಂಶೋಧಕ, ಸಾಹಿತಿ ಡಾ. ಮಲ್ಲಿಕಾರ್ಜುನ ಕುಂಬಾರ ಹೇಳಿದರು.

ಅವರು ಪಟ್ಟಣದಲ್ಲಿ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ವಿಶೇಷ ಉಪನ್ಯಾಸದಲ್ಲಿ ಗಜೇಂದ್ರಗಡದ ಇತಿಹಾಸ ಮತ್ತು ಪರಂಪರೆ ಕುರಿತು ಮಾತನಾಡಿದರು.

ಗಜೇಂದ್ರಗಡ ಕೋಟೆಯು ಐದು ಸೊಂಡಿಲು ಆನೆಯಂತೆ ಕಾಣುವುದರಿಂದ ಇದು ಗಜೇಂದ್ರಗಡ ಎಂದು ಹೆಸರು ಪಡೆದಿದೆ. ರಾಷ್ಟ್ರಕೂಟರ ಕಾಲದಿಂದ ಐತಿಹಾಸಿಕ ಪರಂಪರೆ ಹೊಂದಿರುವ ಗಜೇಂದ್ರಗಡವು ಕಾಲಕಾಲೇಶ್ವರ, ವೀರಭದ್ರೇಶ್ವರ, ಸೂಡಿಯ ಜೋಡು ಕಳಸ ದೇವಾಲಯ, ಸವಡಿಯ ಬ್ರಹ್ಮಲಿಂಗೇಶ್ವರ ದೇವಾಲಯ ಹಲವು ಪರಂಪರೆಗಳ ಹಾಗೂ ಪ್ರಮುಖ ವಾಸ್ತುಶಿಲ್ಪ ಕೇಂದ್ರ ಹೊಂದಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಾಳಮುಖಶೈವ ಕೇಂದ್ರವಾಗಿದ್ದ ಈ ಸ್ಥಾನ ನಂತರ ಕರ್ನಾಟಕದ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟಕ್ಕೂ ಅನೇಕ ಪ್ರಮುಖ ನೇತಾರರನ್ನು ನೀಡಿದೆ. ಕರ್ನಾಟಕದ ಏಕೀಕರಣ ಮತ್ತು ನಾಮಕರಣಕ್ಕೆ ಈ ಭಾಗದ ಜಕ್ಕಲಿ ಅಂದಾನಪ್ಪ ದೊಡ್ಡಮೇಟಿ ಕೊಡುಗೆ ಅಪಾರ ಎಂದರು.

ಸಾಹಿತ್ಯ ಕ್ಷೇತ್ರಕ್ಕೂ ಗಜೇಂದ್ರಗಡದ ಕೊಡುಗೆ ಮಹತ್ವದ್ದಾಗಿದೆ. ಕನ್ನಡದ ಪ್ರಥಮ ಐತಿಹಾಸಿಕ ಕಾದಂಬರಿ ಶೌರ್ಯಸಾಗರ ರಚನೆಗೊಂಡಿದ್ದು ಗಜೇಂದ್ರಗಡದವರಾದ ಕೊಟ್ರಪ್ಪ ಅರಳಿಯವರಿಂದ ಇಲ್ಲಿನ ನಾಡಹಬ್ಬಗಳು ಕನ್ನಡದ ಹಬ್ಬಗಳಾಗಿ ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಇಲ್ಲಿ ಸಾಂಸ್ಕೃತಿಕ ವಾತಾವರಣ ಮೂಡಿಸುತ್ತಿದ್ದವು. ಈ ಭಾಗದ ನಿರಂತರ ಸಾಹಿತ್ಯ ವೇದಿಕೆ ಇಲ್ಲಿ ನಿರಂತರವಾಗಿ ಉಪನ್ಯಾಸ ನಡೆಸುತ್ತಾ ಬಂದಿದೆ ಎಂದರು.

ಗೋಷ್ಠಿಯ ಆಶಯ ನುಡಿಗಳನ್ನಾಡಿದ ಡಾ. ಐ.ಜೆ.ಮ್ಯಾಗೇರಿ, ಟಿಪ್ಪುಸುಲ್ತಾನನಿಗೆ ನವಾಬ್‌ ಎಂಬ ಬಿರುದು ನೀಡಿದವರೇ ಗಜೇಂದ್ರಗಡದವರು. ಗಜೇಂದ್ರಗಡದ ಸಮಗ್ರ ಇತಿಹಾಸ ಸಾರುವ ಗ್ರಂಥಗಳು ಹೊರಬರಬೇಕೆಂಬ ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಜಿತ ಘೋರ್ಪಡೆ ಮಾತನಾಡಿ, ಗಜೇಂದ್ರಗಡ ಇತಿಹಾಸ ಮತ್ತು ಸಂಸ್ಕೃತಿ ಘೋರ್ಪಡೆ ಮನೆತನದ ಕೊಡುಗೆ ಸ್ಮರಿಸಿದರು.

ಈ ವೇಳೆ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ವಸ್ತ್ರದ, ಹಿರಿಯ ಪ್ರಾಧ್ಯಾಪಕ ಬಸವರಾಜ ಮುನವಳ್ಳಿ, ಕದಳಿ ಮಹಿಳಾ ವೇದಿಕೆಯ ಶಶಿಕಲಾ ಪಾಟೀಲ, ಭಾರತಿ ಹೊಸಮನಿ, ಕಸ್ತೂರೆಮ್ಮ ಹಿರೇಮಠ ಡಾ. ಸಾವಿತ್ರಿಬಾಯಿ ಉಪಸ್ಥಿತರಿದ್ದರು. ಬಸವರಾಜ ಶೀಲವಂತರ ಸ್ವಾಗತಿಸಿದರು. ನಾಗರಾಜ ಬುಟ್ಟಾ ನಿರೂಪಿಸಿದರು. ಎಂ.ಎಸ್. ಶೀಲವಂತರ ನಿರ್ವಹಿಸಿದರು. ಎ.ಎಸ್. ನರಗುಂದ ವಂದಿಸಿದರು.