ಗಂಗಾವತಿಯಲ್ಲಿ ಶೃಂಗೇರಿ ಶಂಕರ ಶಾಖಾ ಮಠದ ಸೇವಾ ಕೈಂಕರ್ಯ

| Published : Jan 22 2025, 12:35 AM IST

ಸಾರಾಂಶ

ಭತ್ತದ ನಾಡು ಎನಿಸಿಕೊಂಡಿರುವ ಗಂಗಾವತಿ ನಗರ ಕೇವಲ ವಾಣಿಜ್ಯ ಕ್ಷೇತ್ರಕ್ಕೆ ಮೀಸಲಾಗದೆ ಧಾರ್ಮಿಕ ಕೇಂದ್ರವೆಂದೂ ಹೆಸರು ಪಡೆದಿದೆ.

ಜಾತ್ಯಾತೀತ ಮಠಕ್ಕೆ ಹರಿದು ಬರುತ್ತಿದೆ ಭಕ್ತ ಸಮೂಹ ₹ ಲೋಕಕಲ್ಯಾಣಾರ್ಥ ವಿಜಯಯಾತ್ರೆ

ರಾಮಮೂರ್ತಿ ನವಲಿ

ಗಂಗಾವತಿ:

ಭತ್ತದ ನಾಡು ಎನಿಸಿಕೊಂಡಿರುವ ಗಂಗಾವತಿ ನಗರ ಕೇವಲ ವಾಣಿಜ್ಯ ಕ್ಷೇತ್ರಕ್ಕೆ ಮೀಸಲಾಗದೆ ಧಾರ್ಮಿಕ ಕೇಂದ್ರವೆಂದೂ ಹೆಸರು ಪಡೆದಿದೆ. ಇಂತಹ ಕೇಂದ್ರದಲ್ಲಿ ಶೃಂಗೇರಿ ಶಂಕರ ಮಠದ ಶಾಖಾ ಮಠವು ಈಗ ಜಾತ್ಯತೀತವಾಗಿ ಧಾರ್ಮಿಕ ಕೇಂದ್ರವಾಗಿ ಜನಸೇವಾ ಕಾರ್ಯಕ್ಕೆ ಮುಂದಾಗಿದೆ.

ಇಲ್ಲಿಯ ಶಾರದ ನಗರದಲ್ಲಿ ಬೃಹತ್ ಶಂಕರ ಮಠ ಇದ್ದು, ಕಲ್ಯಾಣ ಮಂಟಪವು ಸಹ ನಿರ್ಮಾಣಗೊಂಡಿದೆ. 2007ರಲ್ಲಿ ವಿಜಯಯಾತ್ರೆಯಲ್ಲಿ ಗಂಗಾವತಿ ನಗರಕ್ಕೆ ಆಗಮಿಸಿದ್ದ ಶೃಂಗೇರಿ ಶಂಕರ ಮಠಾಧೀಶ ಭಾರತಿತೀರ್ಥ ಸ್ವಾಮೀಜಿ ಗಂಗಾವತಿ ನಗರದಲ್ಲಿ ಶಂಕರ ಮಠ ಸ್ಥಾಪನೆಯಾಗ ಬೇಕೆಂದು ಆಶೀರ್ವದಿಸಿದ್ದರು. ಸ್ವಾಮೀಜಿ ಮಾರ್ಗದರ್ಶನ ಪಡೆದಿದ್ದ ಭಕ್ತ ಸಮೂಹ ಮಾ. 14, 2014ರಲ್ಲಿ ಶಂಕರ ಮಠ ಸ್ಥಾಪನೆಗೆ ಸ್ವಾಮೀಜಿಗಳೇ ಭೂಮಿ ಪೂಜೆ ನೆರವೇರಿಸಿದ್ದರು.

2018ರಲ್ಲಿ ವಿಜಯಯಾತ್ರೆಗೆ ಗಂಗಾವತಿ ನಗರಕ್ಕೆ ಆಗಮಿಸಿದ್ದ ಸಂಚಾತ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ದೇವಸ್ಥಾನ, ಗುರುಭವನ, ಅರ್ಚಕರ ನಿವಾಸ, ಭಾರತೀತೀರ್ಥ ಕೃಪಾ ಕಲ್ಯಾಣ ಮಂಟಪ ಉದ್ಘಾಟನೆಗೊಂಡಿತು. ದೇವಸ್ಥಾನದಲ್ಲಿ ಶ್ರೀ ಗಣಪತಿ, ಶ್ರೀ ಶಾರದಾಂಬ, ಚಂದ್ರಮೌಳೇಶ್ವರ ಸಹಿತ ಶಂಕರಾಚಾರ್ಯರ ಮೂರ್ತಿ ರಾರಾಜಿಸುತ್ತವೆ.

ಜಾತ್ಯತೀತ ಮಠ:

ನಗರದ ಶಾರದ ನಗರದಲ್ಲಿರುವ ಶಂಕರ ಮಠಕ್ಕೆ ಜಾತ್ಯತೀತವಾಗಿ ಭಕ್ತ ಸಮೂಹ ಆಗಮಿಸುತ್ತಿರುವುದು ವಿಶೇಷವಾಗಿದೆ. ವರ್ಷದುದ್ದಕ್ಕೂ ಬರುವ ಧಾರ್ಮಿಕ ಕಾರ್ಯಕ್ರಮಗಳು ನಿರಂತವಾಗಿ ನಡೆಯುತ್ತಾ ಬಂದಿವೆ. ನವರಾತ್ರಿ ಉತ್ಸವ, ಸಂಕ್ರಾಂತಿ, ಯುಗಾದಿ, ಶಿವರಾತ್ರಿ, ದತ್ತ ಜಯಂತಿ, ಅಲ್ಲದೇ ಮಹಿಳೆಯರಿಂದ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಜಾತಿ ಭೇದ-ಭಾವ ಇಲ್ಲದೆ ಈ ಮಠಕ್ಕೆ ಬರುವ ಭಕ್ತರೇ ಸಾಕ್ಷಿಯಾಗಿದ್ದಾರೆ.

ಲೋಕಕಲ್ಯಾಣಾರ್ಥ ವಿಜಯಯಾತ್ರೆ:

ಗಂಗಾವತಿ ನಗರಕ್ಕೆ ಮಂಗಳವಾರ ಸಂಜೆ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸಿದ್ದು, ಲೋಕಕಲ್ಯಾಣಾರ್ಥವಾಗಿ ವಿಜಯಯಾತ್ರೆ ಕೈಗೊಂಡರು.ಶೃಂಗೇರಿ ಶ್ರೀಗಳಿಗೆ ಅದ್ಧೂರಿ ಸ್ವಾಗತ:

ಶೃಂಗೇರಿ ಶಾರದಾ ವಿದ್ಯಾಪೀಠದ ಭಾರತೀತೀರ್ಥ ಮಹಾಸ್ವಾಮಿಗಳ ಸಂಸ್ಥಾನ ಸ್ವೀಕಾರದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ನಿಮಿತ್ತ ಗಂಗಾವತಿ ನಗರಕ್ಕೆ ಆಗಮಿಸಿದ ವಿಧುಶೇಖರ ಸ್ವಾಮೀಜಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತೆರದ ವಾಹನದಲ್ಲಿ ಸ್ವಾಮೀಜಿಯವರನ್ನು ಶಂಕರ ಮಠಕ್ಕೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಮೆರವಣಿಗೆಯಲ್ಲಿ ಗಂಗಾವತಿ ನಗರದ ವಿವಿಧ ಮಹಿಳಾ ಭಜನಾ ಮಂಡಳಿಗಳು, ಶ್ರೀರಾಮನಗರ, ಜಂಗಮರ ಕಲ್ಗುಡಿ, ತಾವರಗೇರಾ ಸೇರಿದಂತೆ ವಿವಿಧ ನಗರಗಳಿಂದ ಭಜನಾ ಮಂಡಳಿಗಳು ಭಾಗವಹಿಸಿದ್ದರು.ಮೆರವಣಿಗೆಯಲ್ಲಿ ಮಾಜಿ ಸಂಸದ ಶಿವರಾಮಗೌಡ, ಶಂಕರ ಮಠ ಶಾಖಾ ವ್ಯವಸ್ಥಾಪಕ ನಾರಾಯಣರಾವ್, ಬಾಲಕೃಷ್ಣ ದೇಸಾಯಿ, ವಾಲ್ಮೀಕಿ ಸಮಾಜದ ಮುಖಂಡರಾದ ಜೋಗದ ನಾರಾಯಣಪ್ಪನಾಯಕ, ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪನಾಯಕ ಹೊಸಮಲಿ ಮಲ್ಲೇಶಪ್ಪ, ದುರಗಪ್ಪ ದಳಪತಿ, ಹೊಸಕೇರಿ ಪ್ರಭಾಕರ, ನಗರಸಭಾ ಸದಸ್ಯ ವಾಸುದೇವ ನವಲಿ, ಮೇಗೂರು ರಾಘವೇಂದ್ರ, ನ್ಯಾಯವಾದಿ ಪ್ರಹ್ಲಾದರಾವ ನವಲಿ, ಪ್ರಹ್ಲಾದ ಹೇರೂರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.