ಸಾರಾಂಶ
ಕನ್ನಡಪ್ರಭ ವಾರ್ತೆ ಶಿರ್ವ
ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜಿನಲ್ಲಿ ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಗೆಲಾಕ್ಟಿಕ್ ಗಾಲಾ-೨೦೨೪ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೇಜಾವರ ಹಿರಿಯ ಶ್ರೀಗಳ ಕನಸಿನ ಶಾಲೆ, ಪೇಜಾವರ ಈಗಿನ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದದಿಂದ ಇಂದು ಹೆಮ್ಮರವಾಗಿ ಬೆಳೆದಿದ್ದು, ಇಲ್ಲಿ ನರ್ಸರಿಯಿಂದ ಪದವಿ ವರೆಗೆ ಸುಮಾರು ೩೦೦೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂಬುದೇ ಹೆಮ್ಮೆಯ ವಿಚಾರ ಎಂದರು.ಮಧ್ವಾಚಾರ್ಯರು ಜನಿಸಿದ ಈ ಪವಿತ್ರ ಭೂಮಿಯಲ್ಲಿ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಇದಕ್ಕೆ ಟ್ರಸ್ಟಿನ ಎಲ್ಲಾ ಸದಸ್ಯರು ಅವಿರತವಾಗಿ ಶ್ರಮಿಸುತ್ತಿರುವುದೇ ಕಾರಣ. ಜಿಲ್ಲೆಯ ಹತ್ತಾರು ಕಾಲೇಜಿನ ವಿದ್ಯಾರ್ಥಿಗಳನ್ನು ಇಲ್ಲಿ ಕರೆಸಿ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪರ್ಧೆ ನಡೆಸುವುದು ಅತ್ಯಂತ ಜವಾಬ್ದಾರಿಯುತವಾದ ಕೆಲಸ. ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ನಾಗರಾಜ್ ಬಲ್ಲಾಳ್, ಉಪಾಧ್ಯಕ್ಷ ಶ್ರೀಹರಿ ಭಟ್, ಖಜಾಂಜಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯರಾದ ಸುದರ್ಶನ್ ರಾವ್, ರೂಪಾ ಬಲ್ಲಾಳ್, ಕಾಲೇಜು ಪ್ರಾಂಶುಪಾಲ ವಿಜಯ್ ಪಿ. ರಾವ್, ಕಾಲೇಜು ಸಂಯೋಜಕಿ ರಕ್ಷಿತಾ, ಆನಂದತೀರ್ಥ ವಿದ್ಯಾಲಯ ಪ್ರಾಂಶುಪಾಲೆ ಡಾ. ಗೀತಾ ಶಶಿಧರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಘಾ ಕಾರ್ಯಕ್ರಮ ನಿರೂಪಿಸಿ, ಶ್ರೇಯಾ ಜಿ. ಆರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಶರಣ್ಯಾ ಸ್ವಾಗತಿಸಿ, ಸಿಂಚನಾ ವಂದಿಸಿದರು.