ಗಾಳೀಬೀಡು: ಗ್ರಾಮೀಣ ಕ್ರೀಡಾಕೂಟ ಸಮಾರೋಪ

| Published : Apr 18 2025, 12:38 AM IST

ಸಾರಾಂಶ

ಸ್ನೇಹಿತರ ಯುವಕ ಸಂಘದ 42ನೇ ವರ್ಷದ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಗಾಳೀಬೀಡು ಗ್ರಾಮದ ಅಡ್ಕದ ಬಾಣೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ನೇಹಿತರ ಯುವಕ ಸಂಘದ 42ನೇ ವರ್ಷದ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಗಾಳೀಬೀಡು ಗ್ರಾಮದ ಅಡ್ಕದ ಬಾಣೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ ಇದರ ಸಹಯೋಗದೊಂದಿಗೆ ಸ್ನೇಹಿತರ ಯುವಕ ಸಂಘ ಅಧ್ಯಕ್ಷ ಕೋಳುಮುಡಿಯದ ಎ.ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಡಿವೈಎಸ್‌ಪಿ ಯಾಲದಾಳು ಕೇಶವಾನಂದ ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ ನಂತರ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಮುಕ್ತ ಹಗ್ಗಜಗ್ಗಾಟ ನಡೆಯಿತು. ಪುರುಷರಿಗೆ ವಾಲಿಬಾಲ್ ಪಂದ್ಯಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಿತು. ಪುರುಷರಿಗೆ, ಮಹಿಳೆಯರಿಗೆ, ಹಿರಿಯ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಿತು. ಬಾರದ ಕಲ್ಲು ಎಸೆತ, ಬಕೆಟ್‌ಗೆ ಚೆಂಡು ಹಾಕುವುದು, 1,500 ಮೀಟರ್ ಓಟ, 100*4 ರಿಲೇ ಓಟ, ವಯಸ್ಕರಿಗೆ ಓಟ, ಪಟ್ಟಣಕ್ಕೆ ಬಾಂಬ್, ಕೋಳಿ ಜಗಳ ಸೇರಿದಂತೆ ವಿವಿಧ ಕ್ರೀಡಾಕೂಟ ನಡೆಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಾಲದಾಳು ರಾಜಶೇಖರ್, ಮಡಿಕೇರಿ ಶಿರಸ್ತೇದಾರ್ ಕರಕರನ ಮಧುಕರ್, ಗ್ರಾಮದ ಹಿರಿಯರಾದ ಕೆ.ಕೆ.ಧರ್ಮಾವತಿ, ಮಾಜಿ ಸೈನಿಕರಾದ ಕೋಚನ ಮನುಕುಮಾರ್ ಇತರರಿದ್ದರು.ಸ್ನೇಹಿತರ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ನೃತ್ಯಕಲಾವಿದೆ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ, ಗೌರವ ಡಾಕ್ಟರೇಟ್ ಪದವಿಧರೆ ಟಿಶೋನಿ ಸಬೀನ್, ನಿವೃತ್ತ ಅಂಗನವಾಡಿ ಶಿಕ್ಷಕಿ ಕೋಳುಮುಡಿಯನ ಪ್ರೇಮಾವತಿ, ನಿವೃತ್ತ ಮಾಜಿ ಸೈನಿಕ ಪುದಿಯೊಕ್ಕಡ ಸುಜಯ್ ಅವರನ್ನು ಸನ್ಮಾನಿಸಲಾಯಿತು. 10ನೇ ತರಗತಿಯಲ್ಲಿ ಅತ್ಯದಿಕ ಅಂಕ ಪಡೆದ ಗಾಳಿಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ನಂತರ ಗ್ರಾಮದ ಮಕ್ಕಳಿಂದ ಭರತನಾಟ್ಯ, ಗ್ರೂಪ್ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಪಿಡಿಒ ಶಶಿಕಿರಣ್, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ಎಂ.ದಿಲೀಪ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್ ಇತರರು ವೇದಿಕೆಯಲ್ಲಿದ್ದರು. ಗ್ರಾಮದ ಹಿರಿಯರು, ಕಿರಿಯರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡು ಕ್ರೀಡಾಕೂಟದ ಯಶಸ್ವಿಗೊಳಿಸಿದರು.