ಕಾಡಾನೆಗಳ ಚಿನ್ನಾಟ; ರೈತರಿಗೆ ಪ್ರಾಣ ಸಂಕಟ

| Published : Nov 22 2024, 01:18 AM IST

ಸಾರಾಂಶ

ಶಿವಮೊಗ್ಗ ತಾಲೂಕು ತಮ್ಮಡಿಹಳ್ಳಿ ಗ್ರಾಮದ ರೈತ ಹೊನ್ನಪ್ಪ ಅವರ ಅಡಕೆ ತೋಟವನ್ನು ಕಾಡಾನೆಗಳು ನಾಶ ಮಾಡಿರುವುದು.

ಮಲೆನಾಡಿನಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ

ಕೂಡಿ, ತಮ್ಮಡಿಹಳ್ಳಿ ಚೌಡಿಕಟ್ಟೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ

ತೋಟಕ್ಕೆ ನುಗ್ಗಿ ಅಡಕೆ ಗಿಡಗಳು ಸೇರಿ ಇತರ ಬೆಳೆಗಳ ನಾಶ

ಬೆಳೆ ಹಾನಿಗೆ ಕೂಡಲೇ ಪರಿಹಾರ ನೀಡುವಂತೆ ರೈತರ ಆಗ್ರಹ

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಾಲೂಕಿನ ಪುರದಾಳು, ಮಲೇಶಂಕರ ಭಾಗದಲ್ಲಿ ಮತ್ತೆ ಹಾವಳಿ ಎಬ್ಬಿಸಿರುವ ಕಾಡಾನೆಗಳು, ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಮೂಡಿಸಿವೆ.

ಹಿಂಡಾಗಿ ಬರುವ ಕಾಡಾನೆಗಳನ್ನು ಎಷ್ಟು ಸಾರಿ ಓಡಿಸಿದರೂ ಮತ್ತೆ ಅದೇ ಸ್ಥಳಕ್ಕೆ ಬಂದು ನೆಲೆಯೂರುತ್ತಿವೆ. ಹೀಗಾಗಿ ಕಾಡಾನೆಗಳ ಹಾವಳಿಗೆ ಇಲ್ಲಿನ ಜನ ಹೈರಾಣಾಗಿದ್ದಾರೆ. ಸಂಜೆ ನಾಲ್ಕೈದು ಗಂಟೆ ಆಗುತ್ತಿದ್ದಂತೆ ಹೊಲ-ಗದ್ದೆ, ತೋಟಗಳಿಗೆ ನುಗ್ಗುವ ಕಾಡಾನೆಗಳು ಬೆಳೆ ನಾಶ ಮಾಡುತ್ತಿವೆ.

ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ:

ಎರಡ್ಮೂರು ಆನೆ ಸೇರಿಕೊಂಡು ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ದಾಳಿ ಮುಂದುವರಿಸಿದ್ದು, ಅಡಕೆ ಗಿಡಗಳನ್ನು ನಾಶ ಮಾಡುತ್ತಿವೆ. ಆಡಿನಕೊಟ್ಟಿಗೆಯ ಗಿರೀಶ್, ಹೊನ್ನಪ್ಪ, ಸಂತೋಷ್ ಎಂಬುವರ ಜಮೀನಿನಲ್ಲಿ ಆನೆಗಳು ದಾಳಿ ಮಾಡಿ ಬೆಳೆ ನಾಶಪಡಿಸಿವೆ. ಜೋಳ ಹಾಗೂ ಭತ್ತದ ಗದ್ದೆಯಲ್ಲಿ ಹಗಲಿನ ವೇಳೆಯಲ್ಲಿಯೇ ಆನೆಗಳು ಓಡಾಡುವುದನ್ನು ರೈತರು ವಿಡಿಯೋ ಮಾಡಿಕೊಂಡಿದ್ದಾರೆ.

ತಾಲೂಕಿನ ವೀರಗಾರನ ಬೈರನಕೊಪ್ಪ ಬಳಿ ವಿದ್ಯುತ್ ಸ್ಪರ್ಶಿಸಿ, ಆನೆ ಮೃತಪಟ್ಟ ಬಳಿಕ ಕಾಡಾನೆ ಹಾವಳಿ ಕೊಂಚ ಕಡಿಮೆಯಾಯ್ತು ಎನ್ನುವ ಹೊತ್ತಿನಲ್ಲೇ ಕಾಡಾನೆ ಉಪಟಳ ಮತ್ತೆ ಪ್ರಾರಂಭವಾಗಿರುವುದು ರೈತರ ನಿದ್ದೆ ಕೆಡಿಸಿದೆ. ಇನ್ನು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಬಗ್ಗೆ ದೂರು ಸಲ್ಲಿಸಿದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ವಿದ್ಯುತ್ ಸ್ಪರ್ಶಿಸಿ ಆನೆಯೊಂದು ಮೃತಪಟ್ಟಿದ್ದರೂ ಕೂಡ ಸಮಸ್ಯೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ರೈತರು ದೂರಿದ್ದಾರೆ.

ತೋರಿಕೆ ಕಾರ್ಯಾಚರಣೆ:

ಶಿವಮೊಗ್ಗ ತಾಲೂಕಿನ ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಸಿರಿಗೆರೆ, ಮಲೇಶಂಕರ, ಮಂಜರಿಕೊಪ್ಪ, ಆಲದೇವರ ಹೊಸೂರು, ತಮ್ಮಡಿಹಳ್ಳಿ, ಎರೇಬಿಸು, ಕೂಡಿ, ಗುಡ್ಡದ ಅರಕೆರೆ, ಲಕ್ಕಿನಕೊಪ್ಪ, ಹುರಳಿಹಳ್ಳಿ, ಗೋಣಿಬೀಡು, ಸಂಪಿಗೆಹಳ್ಳ ಹಾಗೂ ಬೆಳ್ಳೂರು ಸೇರಿದಂತೆ ಹಲವಾರು ಕಡೆ ಕಾಡಾನೆಗಳು ದಾಳಿ ನಡೆಸುತ್ತಿವೆ.

ಈ ಕಾಡಂಚಿನ ಗ್ರಾಮಗಳ ರೈತರಿಂದ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ನಂತರ ಅರಣ್ಯ ಇಲಾಖೆ ಕಾಡಾನೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದೆಯಾದರೂ ಆನೆಗಳು ಮಾತ್ರ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿವೆ. ಸಕ್ರೆಬೈಲು ಆನೆ ಬಿಡಾರದಿಂದ ಆಲೆ, ಬಹದ್ದೂರ್, ಸೋಮಣ್ಣ ಆನೆಗಳನ್ನು ಕರೆಸಿ ಪುರದಾಳು ಭಾಗದಲ್ಲಿ ಕಾರ್ಯಾಚರಣೆ ನಡೆಸಿದರೂ ಸಹ ಯಾವುದೇ ಫಲ ಸಿಕ್ಕಿಲ್ಲ.

ಕಾಡಾನೆ ಓಡಾಟ ನಡೆಸುವ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಬೇಕೇ ಹೊರತು ಬೇರೆ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಿದರೆ ಕಾಡಾನೆಗಳನ್ನು ಓಡಿಸಲು ಸಾಧ್ಯ ಎಂಬುದು ರೈತರ ಪ್ರಶ್ನೆಯಾಗಿದೆ.

ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ:

ಕಾಡಾನೆ ದಾಳಿಯಿಂದ ಬೆಳೆ ಹಾನಿಗೊಳಗಾದ ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿ, ಹಿಡಿಶಾಪ ಹಾಕಿದರೂ ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಮುಂದುವರಿದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ 3 ಕಾಡಾನೆಗಳು ವಿದ್ಯುತ್ ತಗುಲಿ ಸಾವನ್ನಪ್ಪಿವೆ. ಎರಡು ವರ್ಷದ ಹಿಂದೆ ಆಯನೂರು ಸಮೀಪದ ಚನ್ನಹಳ್ಳಿ ಬಳಿ ಎರಡು ಕಾಡಾನೆಗಳು ವಿದ್ಯುತ್ ತಗುಲಿ ಸಾವನ್ನಪ್ಪಿದ್ದರೆ ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಅದೇ ಆಯನೂರು ಸಮೀಪದ ವೀರ ಬೈರಗಾರನಕೊಪ್ಪದ ಬಳಿ ಸುಮಾರು 35 ವರ್ಷದ ಗಂಡು ಕಾಡಾನೆ ಮೃತಪಟ್ಟಿದೆ.

ಇತ್ತ ಕಾಡಾನೆ ಮತ್ತು ಮಾನವ ಸಂಘರ್ಷ ಮುಂದುವರಿದಿದೆ. ರಿಪ್ಪನಪೇಟೆ ಬಳಿಯ ಬಸವಾಪುರದಲ್ಲಿ ದರಗೆಲೆ ತರಲು ಕಾಡಿಗೆ ಹೋಗಿದ್ದ ರೈತ ತಿಮ್ಮಪ್ಪ ಹಾಗೂ ಪುರದಾಳು ಸಮೀಪದ ಆಲದೇವರ ಹೊಸೂರು ಬಳಿ ಹನುಮಂತಪ್ಪ ಎಂಬ ಕೂಲಿಕಾರ್ಮಿಕನನ್ನು ಕಾಡಾನೆಗಳು ಬಲಿ ತೆಗೆದುಕೊಂಡಿವೆ. ಇಷ್ಟೆಲ್ಲಾ ಅವಘಡಗಳು ಸಂಭವಿಸಿದರೂ ಸಹ ಅರಣ್ಯ ಇಲಾಖೆ ಜೀವಹಾನಿ ತಪ್ಪಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳದೆ ಇರುವುದು ಮಾತ್ರ ಸ್ಥಳೀಯರು ಸೇರಿದಂತೆ ಕಾಡಂಚಿನ ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ.