ಮೈಸೂರಿನ ಸಾಕಷ್ಟು ನೃತ್ಯ ಕಲಾವಿದರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುನಾಟ್ಯಚಾರ್ಯ ಪ್ರೊ.ಕೆ. ರಾಮಮೂರ್ತಿರಾವ್‌ ಅವರ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಕುವೆಂಪುನಗರದ ಗಾನಭಾರತೀ ಸಭಾಗಂಣದಲ್ಲಿ ಬುಧವಾರ ಏರ್ಪಡಿಸಿದ್ದ ಕೆ. ವನಜಾಕ್ಷಮ್ಮ ಸಂಸ್ಮರಣ 30ನೇ ನೃತ್ಯ ಆರಾಧನಾ ಕಾರ್ಯಕ್ರಮದಲ್ಲಿ ಖ್ಯಾತ ವಿದುಷಿ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ನೂಪುರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಂತರ ವಸುಂಧರಾ ದೊರೆಸ್ವಾಮಿ ಮಾತನಾಡಿ, ಮೈಸೂರಿನ ಸಾಕಷ್ಟು ನೃತ್ಯ ಕಲಾವಿದರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸದಾ ಸಂಗೀತ- ನೃತ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್‌. ವಾಸುದೇವ ಭಟ್‌ ಮಾತನಾಡಿ, ಡಾ. ವಸುಂಧರಾ ದೊರೆಸ್ವಾಮಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯಕ್ಕೆ ಹೆಸರು ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರುನೂಪುರ ಕಲಾವಿದರು ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಕೆ. ರಾಮಮೂರ್ತಿ ರಾವ್‌ ಮಾತನಾಡಿ, ಕಳೆದ ಆರು ದಶಕಗಳಿಂದಲೂ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾವಿರಾರು ಶಿಷ್ಯರನ್ನು ತಯಾರಿ ಮಾಡಿರುವ ಡಾ.ವಸುಂಧರಾ ದೊರೆಸ್ವಾಮಿ ಅವರಿಗೆ ಮುಂದಿನ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆಯಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟಿನ ಲತಾ ರಾಮಮೂರ್ತಿರಾವ್‌ ಇದ್ದರು. ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್‌. ವಿಶ್ವದೀಪ್‌ ಅವರು ಭರತನಾಟ್ಯ ಪ್ರದರ್ಶನ ನೀಡಿದರು.