ಚಿಕ್ಕಮಗಳೂರುತಾಲೂಕಿನ ಗಾಣದಾಳು ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ನಿಂದ ನಿರ್ಮಿಸಲಾಗಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಪರೀಕ್ಷಾರ್ಥ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಉಪಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಶಾಸಕ ಎಚ್.ಡಿ. ತಮ್ಮಯ್ಯ ಹೇಳಿಕೆ । ಗಾಣದಾಳು ಉಪಕೇಂದ್ರಕ್ಕೆ ಭೇಟಿ । ಕಾಮಗಾರಿ ಪ್ರಗತಿ ಪರಿಶೀಲಿಸಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕಿನ ಗಾಣದಾಳು ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ನಿಂದ ನಿರ್ಮಿಸಲಾಗಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಪರೀಕ್ಷಾರ್ಥ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಉಪಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಬುಧವಾರ ಗಾಣದಾಳು ಉಪಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಬಳಿಕ ಮಾತನಾಡಿ ೨೦೨೩ರ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಎಲ್‌ಒಇ ನೀಡಲಾಗಿದೆ. ೨೦ ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಭೂ ಸ್ವಾಧೀನ, ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ರೈತರ ಸಹಕಾರ ಪಡೆಯುವುದು ಸೇರಿದಂತೆ ವಿವಿಧ ಕಾರಣಗಳಿಂದ ಕಾಮ ಗಾರಿ ವಿಳಂಬವಾಯಿತು. ರೈತರ ಮನವೊಲಿಸಿ ನಿಯಮಾನುಸಾರ ಪರಿಹಾರ ನೀಡಲಾಗಿದೆ. ಅರಣ್ಯ ಇಲಾಖೆ ಅನು ಮತಿಯೂ ದೊರೆತಿದೆ. ಇದೀಗ ಅಂತಿಮ ಹಂತದ ಕಾಮಗಾರಿ ಹಾಗೂ ಪರೀಕ್ಷಾರ್ಥ ಕಾರ್ಯಾಚರಣೆ ನಡೆಯುತ್ತಿದೆ ಎಂದರು.ಸುಮಾರು ₹೧೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಣದಾಳು ಉಪಕೇಂದ್ರದಿಂದ ಈ ಭಾಗದ ವಿದ್ಯುತ್ ಸಮಸ್ಯೆ ನಿವಾರಣೆಗೆ ಹೆಚ್ಚಿನ ಅನುಕೂಲವಾಗಲಿದೆ. ಗಾಣದಾಳು, ಬೆಳವಾಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಮೂಲ ಸೌಕರ್ಯ ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.ಮಲ್ಲಂದೂರು ಭಾಗದಲ್ಲಿ ಸುಮಾರು ₹೨೪ ಕೋಟಿ ವೆಚ್ಚದ ವಿದ್ಯುತ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿದ್ದು, ಆರು ತಿಂಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ. ಬೆಳವಾಡಿ ಗ್ರಾಪಂ ವ್ಯಾಪ್ತಿಯ ಗೋವಿಂದಪುರದಲ್ಲಿ ಎರಡು ಎಕರೆ ಜಾಗದಲ್ಲಿ ಮತ್ತೊಂದು ಉಪಕೇಂದ್ರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.ನಿಡಘಟ್ಟ ಹಾಗೂ ಕಳಸಾಪುರ ಭಾಗದಲ್ಲಿ ಸುಮಾರು ₹೧೮ ಕೋಟಿ ವೆಚ್ಚದ ವಿದ್ಯುತ್ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಇವು ಪೂರ್ಣಗೊಂಡ ಬಳಿಕ ಚಿಕ್ಕ ಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಪೂರೈಕೆ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಿದರು.

ಭದ್ರಾ ಉಪಕಣಿವೆ, ರಣಘಟ್ಟ ಯೋಜನೆಗೆ ವೇಗ:

ಭದ್ರಾ ಉಪಕಣಿವೆ ಯೋಜನೆ ಮೂರನೇ ಹಂತಕ್ಕೆ ಆಡಳಿತಾತ್ಮಕ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ರಣಘಟ್ಟ ಯೋಜನೆ ಶೀಘ್ರ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಗಾಣದಾಳು ಉಪಕೇಂದ್ರದಿಂದ ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯುತ್ ಕಡಿತದ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಇದರಿಂದ ಪರಿಹಾರ ದೊರೆಯಲಿದೆ ಎಂದರು.ಈ ಸಂದರ್ಭದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಸ್ಥಳೀಯ ಮುಖಂಡರು, ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

-- ಬಾಕ್ಸ್-- ಸಖರಾಯಪಟ್ಟಣಕ್ಕೆ ₹೭೫ ಕೋಟಿ ವೆಚ್ಚದ ಉಪಕೇಂದ್ರಸಖರಾಯಪಟ್ಟಣ ಹೋಬಳಿ ಹೊಸಹಳ್ಳಿ ಭಾಗದಲ್ಲಿ ೨೦೦ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸುಮಾರು ₹೭೫ ಕೋಟಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.ಯೋಜನೆಗಳು ಯಾವ ಸರ್ಕಾರದ ಅವಧಿಯಲ್ಲಿ ಮಂಜೂರಾಗಿವೆ ಎಂಬುದಕ್ಕಿಂತ ಅವುಗಳನ್ನು ಪೂರ್ಣಗೊಳಿಸಿ ಜನರಿಗೆ ಉಪಯೋಗವಾಗುವಂತೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ರೈತರಿಗೆ ಪಕ್ಷ, ಜಾತಿ ಭೇದವಿಲ್ಲದೆ ಯೋಜನೆಗಳ ಸೌಲಭ್ಯ ತಲುಪಿಸುವುದು ಮುಖ್ಯ ಎಂದು ತಮ್ಮಯ್ಯ ಹೇಳಿದರು.

--ಬರ ಎದುರಿಸಲು ಸಿದ್ಧತೆ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾದ ಬರದಿಂದ ಮಲೆನಾಡಿನಲ್ಲೇ ಕೆರೆಗಳು ತುಂಬದಿರುವುದು ಆತಂಕಕಾರಿ ಸಂಗತಿ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಸ್ಥಿತಿ ಪರಿಶೀಲಿಸಿದ್ದು, ಟಾಸ್ಕ್‌ಫೋರ್ಸ್ ಸಭೆಯನ್ನೂ ನಡೆಸಲಾಗಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.ರಾಜ್ಯದ ವಿದ್ಯುತ್ ಕೊರತೆ ನಿವಾರಣೆಗೆ ವಿವಿಧ ರಾಜ್ಯಗಳೊಂದಿಗೆ ಮಾಡಿಕೊಂಡಿರುವ ವಿದ್ಯುತ್ ವಿನಿಮಯ ವ್ಯವಸ್ಥೆ ಸೆ.೩೦ಕ್ಕೆ ಮುಕ್ತಾಯವಾಗಲಿದ್ದು, ಬಳಿಕ ಜಾರ್ಖಂಡ್ ಹಾಗೂ ಹರಿಯಾಣದಿಂದ ವಿದ್ಯುತ್ ಲಭ್ಯವಾಗುವ ವ್ಯವಸ್ಥೆ ಯಿರುವುದರಿಂದ ಪೂರೈಕೆ ಸುಧಾರಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.ಪೋಟೋ: ಗಾಣದಾಳು ಉಪಕೇಂದ್ರಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಬುಧವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು. ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಹಾಗೂ ಅಧಿಕಾರಿಗಳು ಇದ್ದರು.