ಸಾರಾಂಶ
ಧಾರ್ಮಿಕ ಉತ್ಸವಗಳು ನಮ್ಮನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ತಪಾಸಣೆ, ರಕ್ತದಾನದಂತಹ ಕಾರ್ಯಕ್ರಮ ಆಯೋಜನೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಾಗರ
ಧಾರ್ಮಿಕ ಉತ್ಸವಗಳು ನಮ್ಮನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ತಪಾಸಣೆ, ರಕ್ತದಾನದಂತಹ ಕಾರ್ಯಕ್ರಮ ಆಯೋಜನೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ ಅಭಿಪ್ರಾಯಪಟ್ಟರು.ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವೀರಶೈವ ಯುವ ವೇದಿಕೆ ವತಿಯಿಂದ ೫೨ನೇ ವರ್ಷದ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಗಣಪತಿ ಉತ್ಸವ ನಮ್ಮ ಸಂಸ್ಕೃತಿಯನ್ನು ಪ್ರತಿಪಾದಿಸುವ ಜತೆಗೆ ಸಾಮಾಜಿಕ ಸೇವೆಗೆ ಪ್ರೇರಣೆ ನೀಡುತ್ತದೆ ಎಂದರು.
ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ವೀರಶೈವ ಯುವ ವೇದಿಕೆ ಗಣಪತಿ ಉತ್ಸವದ ಸಂದರ್ಭದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿದೆ. ಮಳೆಯ ನಡುವೆಯೂ ಹೆಚ್ಚು ಜನರು ರಕ್ತದಾನ ಮಾಡಲು ಆಸಕ್ತಿ ತೋರಿಸಿದ್ದಾರೆ. ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿಯನ್ನು ಸಹ ವಿತರಿಸಲಾಗಿದೆ ಎಂದು ಹೇಳಿದರು.ಸಂಘಟನೆಯ ಗೌರವಾಧ್ಯಕ್ಷ ಗುರುಪ್ರಸಾದ್ ಸಿ.ಎಚ್.ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ಸಮಾಜ ಕಾರ್ಯವಾಗಿದೆ. ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ. ಯುವಕ ಸಂಘವು ನಿರಂತರವಾಗಿ ಇಂತಹ ಸಮಾಜಮುಖಿ ಚಟುವಟಿಕೆ ನಡೆಸಿಕೊಂಡು ಬರುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದೆ ಎಂದರು.
ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ಕವಿತಾ ಜಯಣ್ಣ ಮಾತನಾಡಿದರು. ವೀರಶೈವ ಯುವ ವೇದಿಕೆ ಅಧ್ಯಕ್ಷ ಶರಣೇಶ್ ಡಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಶಶಿಧರ ಬಿ.ಸಿ., ಯೋಗೇಶ್, ಶಂಭುಲಿAಗ, ಮಧು ಮಲ್ಲಿಕಾರ್ಜುನ ಕೋರಿ, ಡಾ.ಬಸವರಾಜ್, ಡಾ.ಸುಪ್ರಿತ್ ಇತರರು ಹಾಜರಿದ್ದರು.