ಛೋಟಾ ಮುಂಬೈನಲ್ಲೂ ಕೊಲ್ಕತಾ ಕಲಾವಿದರ ಕೈಚಳಕ

| Published : Sep 05 2024, 12:36 AM IST

ಛೋಟಾ ಮುಂಬೈನಲ್ಲೂ ಕೊಲ್ಕತಾ ಕಲಾವಿದರ ಕೈಚಳಕ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿಯ ಗಣೇಶ ಪ್ರತಿಷ್ಠಾಪನೆ ವಿಶೇಷತೆ ಹೊಂದಿದೆ. ಇಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಜಕಾಯದ ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಕಾ ಮಹಾರಾಜಾ ಹೆಸರಿನ ಗಣಪತಿ ತಯಾರಿಸುವುದಕ್ಕಾಗಿಯೇ ಕೊಲ್ಕತ್ತಾದಿಂದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಬಂದು ನೆಲೆಸುವುದು ವಿಶೇಷ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಛೋಟಾ ಮುಂಬೈ ಎಂದೇ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲೂ ಈಗ ಗಣೇಶೋತ್ಸವದ ಸಂಭ್ರಮ. ಈಗ ಎಲ್ಲರ ಬಾಯಲ್ಲೂ ಗಜಕಾಯದ ಹುಬ್ಬಳ್ಳಿ ಕಾ ರಾಜಾ... ಹುಬ್ಬಳ್ಳಿ ಕಾ ಮಹಾರಾಜಾ ಗಣಪತಿ ಮಾತು. ಈ ಎರಡೂ ಗಣಪತಿಗಳು ಸಿದ್ಧವಾಗುವುದು ಕೊಲ್ಕತ್ತಾ ಮೂರ್ತಿ ತಯಾರಕರ ಕೈಚಳಕದಲ್ಲಿ ಎಂಬುದು ವಿಶೇಷ. ಈಗಾಗಲೇ ಈ ಎರಡೂ ಮೂರ್ತಿಗಳು ಸಿದ್ಧಗೊಂಡಿದ್ದು ಅಂತಿಮ ಹಂತದ ಸ್ಪರ್ಶ ನೀಡಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿಯ ಗಣೇಶ ಪ್ರತಿಷ್ಠಾಪನೆ ವಿಶೇಷತೆ ಹೊಂದಿದೆ. ಇಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಜಕಾಯದ ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಕಾ ಮಹಾರಾಜಾ ಹೆಸರಿನ ಗಣಪತಿ ತಯಾರಿಸುವುದಕ್ಕಾಗಿಯೇ ಕೊಲ್ಕತ್ತಾದಿಂದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಬಂದು ನೆಲೆಸುವುದು ವಿಶೇಷ.

ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗುವ ಹುಬ್ಬಳ್ಳಿ ಕಾ ಮಹಾರಾಜ ಗಣಪತಿಯನ್ನು ಕಳೆದ 1995ರಿಂದ ಕೋಲ್ಕತ್ತಾದಿಂದ ಅಪ್ಪು ಪಾಲ್‌ ಎಂಬ ಮೂರ್ತಿ ತಯಾರಕರ ತಂಡ ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ನಿರ್ಮಿಸಲಾಗಿರುವ ಶೆಡ್‌ನಲ್ಲಿಯೇ 4-5 ತಿಂಗಳ ಮೊದಲೇ ಬಂದು ನೆಲೆಸಿ ಮೂರ್ತಿ ತಯಾರಿಸುತ್ತದೆ. ಇನ್ನು ದಾಜಿಬಾನ್‌ ಪೇಟೆಯಲ್ಲಿ ಪ್ರತಿಷ್ಠಾಪಿಸಲಾಗುವ ಹುಬ್ಬಳ್ಳಿ ಕಾ ಮಹಾರಾಜಾ ಗಣೇಶ ಮೂರ್ತಿಯನ್ನು 2017ರಿಂದ ಕೊಲ್ಕತ್ತಾದ ಮೂರ್ತಿ ತಯಾರಕ ಸಂಜಯ್ ಪಾಲ್‌ ತಂಡ 4 ತಿಂಗಳ ಮೊದಲೇ ಹುಬ್ಬಳ್ಳಿಯ ಬಾಕಳೆ ಗಲ್ಲಿಯಲ್ಲಿ ನಿರ್ಮಿಸಲಾಗಿರುವ ಶೆಡ್‌ನಲ್ಲಿಯೇ ಬಂದು ನೆಲಸಿ ಮೂರ್ತಿ ತಯಾರಿಸುತ್ತಾರೆ.

ಹೇಗಿರುತ್ತೆ ತಯಾರಿ?

ಗಣೇಶ ಚತುರ್ಥಿ ಹಬ್ಬದ 4-5 ತಿಂಗಳು ಮೊದಲೇ ಕೊಲ್ಕತ್ತಾದಿಂದ ಆಗಮಿಸುವ ಪಾಲ್‌ ಮೂರ್ತಿ ತಯಾರಕರ ತಂಡ ಮೂರ್ತಿ ತಯಾರಿಕೆಯಲ್ಲಿ ನಿರತವಾಗುತ್ತದೆ. ಇದಕ್ಕೆ ಬೇಕಾಗುವ ಮಣ್ಣನ್ನು ಕೋಲ್ಕತ್ತಾದಿಂದಲೇ ತರುವುದು ವಿಶೇಷ. ಅಲ್ಲದೆ ಸ್ಥಳೀಯವಾಗಿ ದೊರೆಯುವ ಮಣ್ಣನ್ನೂ ಬಳಕೆ ಮಾಡಿ ಮೂರ್ತಿ ತಯಾರಿಸಲಾಗುತ್ತದೆ. ಈಗಾಗಲೇ ಎರಡೂ ಮೂರ್ತಿಗಳ ಶೇ. 75ರಷ್ಟು ತಯಾರಿಕೆಯ ಕೆಲಸ ಪೂರ್ಣಗೊಂಡಿದ್ದು, ಅಂತಿಮ ಕೆಲಸದಲ್ಲಿ ನಿರತವಾಗಿವೆ.

ಎಲ್ಲೆಲ್ಲಿ ಮಾರಾಟ?

ಕೊಲ್ಕತ್ತಾದ ಪಾಲ್‌ ತಂಡದವರು ತಯಾರಿಸುವ ಗಣೇಶ ಮೂರ್ತಿಗಳಿಗೆ ಪಕ್ಕದ ಆಂಧ್ರಪ್ರದೇಶದ ತಿರುಪತಿ, ಗುಂತಗಲ್ಲ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಬೆಂಗಳೂರು, ವಿಜಯಪುರ, ದಾಂಡೇಲಿ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಿಂದಲೂ ಬೇಡಿಕೆ ಇದೆ. ಗಣೇಶ ಚತುರ್ಥಿಗೂ ಒಂದು ವರ್ಷದ ಮೊದಲೇ ಗಣೇಶೋತ್ಸವ ಸಮಿತಿಯವರು ಮುಂಗಡವಾಗಿ ಹಣ ನೀಡಿ ತಮಗೆ ಬೇಕಾದ ಆಕೃತಿ, ಶೈಲಿಯಲ್ಲಿ ಮೂರ್ತಿ ತಯಾರಿಕೆಗೆ ಬುಕ್‌ ಮಾಡಿ ಹೋಗುತ್ತಾರೆ.

ಅತೀ ಎತ್ತರದ ಗಣಪತಿ

ಹುಬ್ಬಳ್ಳಿ ಕಾ ಮಹಾರಾಜಾ ಗಣಪತಿಯು 23ರಿಂದ 25 ಅಡಿಗಳ ವರೆಗೆ, ಹುಬ್ಬಳ್ಳಿ ಕಾ ರಾಜಾ ಗಣಪತಿಯು 21ರಿಂದ 23 ಅಡಿಗಳ ವರೆಗೆ ಎತ್ತರ ಹೊಂದಿರುತ್ತವೆ. ಈ ಎರಡೂ ಗಣಪತಿಗಳ ದರ್ಶನಕ್ಕಾಗಿಯೇ ಅನ್ಯರಾಜ್ಯಗಳಿಂದ ಹಾಗೂ ಹು-ಧಾ ಸೇರಿದಂತೆ ಹತ್ತಾರು ಜಿಲ್ಲೆಗಳಿಂದ ಜನರು ಆಗಮಿಸುವುದು ವಿಶೇಷ.ಸಂತಸದ ಕಾರ್ಯ

ಕೊಲ್ಕತ್ತಾದಿಂದ ಕರ್ನಾಟಕಕ್ಕೆ ಬಂದು ಮೂರ್ತಿ ತಯಾರಿಸುವಲ್ಲಿ ತುಂಬಾ ಸಂತಸವೆನಿಸುತ್ತದೆ. ಹಲವು ವರ್ಷಗಳಿಂದ ಇಲ್ಲಿನ ಜನತೆ ನಮ್ಮಲ್ಲಿನ ಕಲೆ ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಕೊಲ್ಕತ್ತಾದಿಂದ ಬಂದ ನಮ್ಮ ತಂಡದಲ್ಲಿ 25ಕ್ಕೂ ಅಧಿಕ ಕೆಲಸಗಾರರಿದ್ದಾರೆ.

ಅಪ್ಪು ಪಾಲ್, ಹುಬ್ಬಳ್ಳಿ ಕಾ ಮಹಾರಾಜಾ ಗಣಪತಿ ತಯಾರಿಕೆಯಲ್ಲಿ ನಿರತರಾಗಿರುವ ಕೊಲ್ಕತ್ತಾದ ಮೂರ್ತಿ ತಯಾರಕ

ಮುಂಗಡ ಹಣ

ಕಳೆದ 7-8 ವರ್ಷಗಳಿಂದ ಹುಬ್ಬಳ್ಳಿ ಕಾ ರಾಜಾ ಗಣೇಶ ಮೂರ್ತಿ ತಯಾರಿಸುತ್ತಿದ್ದೇವೆ. ಅನ್ಯ ರಾಜ್ಯ, ಜಿಲ್ಲೆಗಳಿಂದಲೂ ಬರುವ ಗಣೇಶೋತ್ಸವ ಸಮಿತಿಯವರು ಮುಂಗಡ ಹಣ ನೀಡಿ ತಮಗೆ ಬೇಕಾದ ಆಕೃತಿ ಗಣಪತಿ ಬುಕ್‌ ಮಾಡಿ ಹೋಗುತ್ತಾರೆ.

ಸಂಜಯ್ ಪಾಲ್, ಹುಬ್ಬಳ್ಳಿ ಕಾ ರಾಜಾ ಗಣಪತಿ ತಯಾರಿಸುವ ಕೊಲ್ಕತ್ತಾದ ಮೂರ್ತಿ ತಯಾರಕ