ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಗಂಡು ಮೆಟ್ಟಿನ ನಾಡು ಉತ್ತರ ಕರ್ನಾಟಕ ಬಯಲಾಟಗಳಿಗೆ ಹೆಸರುವಾಸಿ. ಇಲ್ಲಿನ ಪಾರಿಜಾತ ಕಲೆಗೆ ರಾಷ್ಟ್ರೀಯ ಮನ್ನಣೆ ಇದೆ. ಇಲ್ಲಿನ ಅನೇಕ ಕಲಾವಿದರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲೆ ಪ್ರದರ್ಶನ ಮಾಡಿ ನಾಡಿನ ಕೀರ್ತಿ ಪಸರಿಸಿದ್ದಾರೆ. ಅವರಲ್ಲಿ ಮರಗವ್ವ ಜುನ್ನಪ್ಪನವರ ಸಹ ಒಬ್ಬರು.ಕಲೆ ಯಾರ ಸ್ವತ್ತಲ್ಲ. ಯಾರು ಮನಸಾರೆ ಆರಾಧಿಸುತ್ತಾರೋ ಅವರಿಗೆ ಒಲಿಯುತ್ತದೆ. ಶ್ರೀ ಕೃಷ್ಣ ಅಜನಪಿತನೆಂದು ಭಜನೆ ಮಾಳ್ಪರು...ನಾರಿ ರುಕ್ಮಿಣಿ ಬಾರೆ ಎನ್ನುತ್ತಲೇ ನಾರಿ ತುರುಬಿಗೆ ಪಾರಿಜಾತ ಮುಡಿಸಿದ ಈ ಪಾರಿಜಾತ ನಾಟಕದ ರೋಮಾಂಚನಕಾರಿ ದೃಶ್ಯ ನೋಡಲೆರಡು ಕಣ್ಣು ಸಾಲದು. ಪಾರಿಜಾತ ಎಂದರೆ ಜ್ಞಾನದ ಸಂಕೇತ. ಪಾರಿಜಾತ ಕಂಪು ಮನಸ್ಸಿಗೆ ತಂಪು ನೀಡುತ್ತದೆ.
ಶ್ರೀ ಕೃಷ್ಣ ಪಾರಿಜಾತ ಸಂಘ ಕಟ್ಟಿಕೊಂಡು ತನ್ನ ಅಮೋಘ ಅಭಿನಯದಿಂದ ಪಾರಿಜಾತದ ಕಸ್ತೂರಿ ಪರಿಮಳವನ್ನು ಹರಡಿದ ಕನ್ನಡದ ಕಸ್ತೂರಿ ಮರಗವ್ವ ಬಯಲಾಟದ ಭಾರ್ಗವಿ ಎಂದೇ ಖ್ಯಾತರು. ಲೋಕಾಪುರದ ಹಿರಿಯ ಕಲಾವಿದೆ ಸೇವೆಗೆ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.ಮರಗವ್ವ ಕಡು ಬಡತನದಲ್ಲಿ ಬೆಳೆದ ಕುಸುಮ. ತಂದೆ ದುರ್ಗಾ ದಾಸ್, ತಾಯಿ ರುಕ್ಮಿಣಿ ದಂಪತಿ ಉದರದಲ್ಲಿ ಜನಿಸಿದ ಕಸ್ತೂರಿ ಉರ್ಫ ಮರಗವ್ವ ಜುನ್ನಪ್ಪನವರ ಕಲಾ ಕ್ಷೇತ್ರಕ್ಕೆ ಪರಿಚಯವಾಗಿ 14ನೇ ವಯಸ್ಸಿಗೆ ಶ್ರೀ ಕೃಷ್ಣ ಪಾರಿಜಾತ ಕಲೆಯ ಸೆಳೆತಕ್ಕೆ ಸಿಲುಕಿ ನಾಡಿನಾದ್ಯಂತ ಪೂಜಾ, ರುಕ್ಮಿಣಿ, ನಾರದ ಮುಂತಾದ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರ ಮನಗೆದ್ದವರು. ತಿಂಗಳಿಗೆ ಕೇವಲ ₹ 12 ಸಾವಿರ ಗುರುಕಾಣಿಯಾಗಿ ನೀಡಿ ಕಲಿತ ವಿದ್ಯೆ ಇಂದು ಬದುಕಿಗೆ ಆಸರೆಯಾಗಿದೆ. ಉತ್ತರ ಕರ್ನಾಟಕದ ಪ್ರಸಿದ್ಧ ಪಾರಿಜಾತ ಕಂಪನಿಗಳಾದ ಬಬಲೇಶ್ವರ, ಜಾಲಿ ಕಟ್ಟಿ, ದಾದನಟ್ಟಿ, ಮಹಾಲಿಂಗಪುರ, ನಾವಲಗಿ, ಜಮಖಂಡಿ ಮುಂತಾದ ನಾಟ್ಯ ಸಂಘಗಳಲ್ಲಿ ಸೇವೆ ಸಲ್ಲಿಸಿ, ಮೈಸೂರು, ಕಿತ್ತೂರು, ವಿಜಯಪುರ, ಹಂಪಿ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಪಾರಿಜಾತ ಕಲಾ ಪ್ರದರ್ಶನ ನೀಡಿದ್ದಾರೆ.
ನಾಲ್ಕು ದಶಕಕ್ಕೂ ಅಧಿಕ ಕಾಲ ಕಲಾಸೇವೆಗೆ ರಾಷ್ಟ್ರೀಯ ಪುರಸ್ಕಾರ ಒಲಿದು ಬಂದಿದ್ದು, ಮುಧೋಳ ತಾಲೂಕು ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜ.26ರಂದು ಮುಧೋಳದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿರುವ ಜಾನಪದ ಕಲಾ ಪ್ರದರ್ಶನ ಹಾಗೂ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಾಡಿನ ಶ್ರೀಗಳ ಸಮ್ಮುಖದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.