ಕುರಿಗಾರರ ಹಿತರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಮನವಿ

| Published : Jan 25 2024, 02:00 AM IST

ಕುರಿಗಾರರ ಹಿತರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪಶುಪಾಲಕರು ಮತ್ತು ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪಶುಪಾಲಕರ ಮತ್ತು ಕುರಿಗಾರರ ಹಿತರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.

ಹುಬ್ಬಳ್ಳಿ: ಪಶುಪಾಲಕರು ಮತ್ತು ಕುರಿಗಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಪಶುಪಾಲಕರ ಮತ್ತು ಕುರಿಗಾರರ ಹಿತರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಕುರುಬ ಸಮಾಜದ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಕುರಿಗಳೊಂದಿಗೆ ಆಗಮಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದು ತೇಜಿ ಮಾತನಾಡಿ, ಪಶು ಸಂಗೋಪನೆ ಮತ್ತು ಕುರಿಗಾರಿಕೆ ನಾಡಿನ ಮೂಲ ಕಸಬಾಗಿದೆ. ಈ ವೃತ್ತಿಯನ್ನು ಎಲ್ಲ ಶೋಷಿತ ಸಮುದಾಯದವರು ಮತ್ತು ಹಿಂದುಳಿದ ವರ್ಗವವರು ಮುಂದುವರಿಸಿಕೊಂಡು ಬಂದಿದ್ದಾರೆ. ಪಶುಸಂಗೋಪನೆ ಮತ್ತು ಕುರಿಗಾರಿಕೆಯ ವೃತ್ತಿಯ ಮೇಲೆ ಲಕ್ಷಾಂತರ ಕುಟುಂಬ ಅವಲಂಭಿತವಾಗಿವೆ. ಇವರು ಬೆಟ್ಟ-ಗುಡ್ಡಗಳನ್ನು ಒಳಗೊಂಡಂತೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಪಶು ಸಂಗೋಪನೆ ಮತ್ತು ಕುರಿಗಾರಿಕೆಯನ್ನೇ ಜೀವನದ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪಶುಪಾಲಕರು ಮತ್ತು ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ. ಈ ಹಿಂದೆ ಕುಂದಗೋಳ ತಾಲೂಕಿನ ಕುರಿಗಾಹಿಯ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು. ಕುರಿ ಕಳ್ಳತನ ಮಾಡುವ ಉದ್ದೇಶದಿಂದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪ್ರಭು ಮೇತ್ರೆ ಅವರನ್ನು ಕೊಲೆ ಮಾಡಲಾಯಿತು.

ಇಂತಹ ನೂರಾರು ಪ್ರಕರಣಗಳು ರಾಜ್ಯದಲ್ಲಿ ನಡೆದಿದೆ. ಗುಡ್ಡಗಾಡಿನಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ. ದೇಶಕ್ಕೆ ಸ್ವಾತಂತ್ರ ಸಿಗುವ ಪೂರ್ವದಲ್ಲಿ, ಪ್ರಾಚೀನ ಕಾಲದಿಂದಲೂ ಬೆಟ್ಟಗುಡ್ಡಗಳಲ್ಲಿ ಪಶು ಸಂಗೋಪನೆ ಮತ್ತು ಕುರಿಗಾರಿಕೆ ಮಾಡಿಕೊಂಡು ಬಂದಿರುವ ಜನರಿಗೆ ಆಯಾ ಪ್ರದೇಶದಲ್ಲಿ ಇಂದು ಅವರ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ.

ರಾಜ್ಯದಲ್ಲಿ ನಿರಂತರವಾಗಿ ಕುರಿಗಳ ಕಳ್ಳತನ ನಡೆಯುತ್ತಿದೆ. ಅಲ್ಲದೇ ಕುರಿ ಮೇಯಿಸುತ್ತಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಉಚಿತವಾಗಿ ಕುರಿಗಳನ್ನು ಕೊಡುವಂತೆ ಬೇಡಿಕೆ ಇಡುವುದು ಹಾಗೂ ಅವರು ನಿಗದಿ ಮಾಡಿದ ಲಂಚ ನೀಡಲು ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ಸರ್ಕಾರ ಮಹಿಳೆಯರ ಪರ, ಮಕ್ಕಳ ಪರ, ಶೋಷಿತ ಸಮುದಾಯಗಳ ಪರ ಹಾಗೂ ವಿವಿಧ ವೃತ್ತಿ ನಿರ್ವಹಿಸುತ್ತಿರುವವರ ಪರ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ರಕ್ಷಣೆಯನ್ನೂ ಮಾಡಿದೆ. ಅದೇ ರೀತಿ ಪಶು ಸಂಗೋಪನೆ ಮತ್ತು ಕುರಿ ಕಾಯುವ, ಪಶುಪಾಲಕರ ಮತ್ತು ಕುರಿಗಾರರ ರಕ್ಷಣೆಗಾಗಿ ಪಶುಪಾಲಕರ ಹಾಗೂ ಕುರಿಗಾರರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲು ಒತ್ತಾಯಿಸಿದರು. ನಂತರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ರಾಜ್ಯ ಸಂಚಾಲಕ ರವಿರಾಜ ಕಂಬಳಿ, ಯಲ್ಲಪ್ಪ ಹೆಗಡೆ ಸೇರಿದಂತೆ ಹಲವು ಕುರಿಗಾರರು ಪಾಲ್ಗೊಂಡಿದ್ದರು.