ಮೌಲ್ಯಗಳಿಗೆ ಮಾದರಿಯಾದ ಗಾಂಧಿ: ಎಸ್.ಜೆ. ಕೈರನ್

| Published : Oct 10 2025, 01:01 AM IST

ಸಾರಾಂಶ

ಸುಭಾಶ್ಚಂದ್ರ ಬೋಸ್, ಗೋಖಲೆ, ನೆಹರು ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಮನ್ನಣೆ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದ ಮೋಹನದಾಸ್ ಕರಮಚಂದ ಗಾಂಧಿ ಸರಳ ಬದುಕು, ಸತ್ಯ, ಅಹಿಂಸೆ ಮೊದಲಾದ ಮೌಲ್ಯಗಳಿಗೆ ಮಾದರಿಯಾಗಿದ್ದಾರೆ.

ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ವಾಗ್ಮಿ

ಕನ್ನಡಪ್ರಭ ವಾರ್ತೆ ಹೊನ್ನಾವರ

ಸುಭಾಶ್ಚಂದ್ರ ಬೋಸ್, ಗೋಖಲೆ, ನೆಹರು ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಮನ್ನಣೆ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದ ಮೋಹನದಾಸ್ ಕರಮಚಂದ ಗಾಂಧಿ ಸರಳ ಬದುಕು, ಸತ್ಯ, ಅಹಿಂಸೆ ಮೊದಲಾದ ಮೌಲ್ಯಗಳಿಗೆ ಮಾದರಿಯಾಗಿದ್ದಾರೆ. ನುಡಿದಂತೆ ಜೀವನದಲ್ಲಿ ಅದನ್ನು ಆಚರಿಸಿ ಬದುಕಿದ್ದಾಗಲೇ ಮಹಾತ್ಮರಾದರು ಎಂದು ವಾಗ್ಮಿ ಎಸ್.ಜೆ. ಕೈರನ್ ಹೇಳಿದರು.

ಪಟ್ಟಣದ ಎಸ್‌ಡಿಎಂ ಪದವಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಜಾಗತಿಕ ಸಮಸ್ಯೆಗಳಿಗೆ ಗಾಂಧಿತತ್ವ ಪರಿಹಾರ ಎಂಬ ವಿಷಯದ ಕುರಿತು ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಉಪನ್ಯಾಸ ನೀಡಿದರು.

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಜಗತ್ತಿನಾದ್ಯಂತ ತಮ್ಮ ತತ್ವಾದರ್ಶಗಳ ಮೂಲಕ ಖ್ಯಾತರಾಗಿರುವ ಗಾಂಧಿ ಅವರ ಕುರಿತು ತಿಳಿಯಲು ಅವರ ಆತ್ಮಕತೆ ಹಾಗೂ ಗೋಖಲೆ ಸೇರಿದಂತೆ ಹಲವು ಮೇಧಾವಿಗಳು ಗಾಂಧಿ ಕುರಿತು ಬರೆದ ಪುಸ್ತಕಗಳನ್ನು ಓದಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನೇಹಾ ಎಸ್.ಗೌಡ, ದ್ವಿತೀಯ ಸ್ಥಾನ ಪಡೆದ ಹೇಮಾ ಎಂ.ನಾಯ್ಕ, ತೃತೀಯ ಸ್ಥಾನ ಪಡೆದ ಜಯಲಕ್ಷ್ಮೀ ಜಿ.ನಾಯ್ಕ ಹಾಗೂ ಚತುರ್ಥ ಸ್ಥಾನ ಗಳಿಸಿದ ಮಿಸ್ಬಾ ಸಯ್ಯದ್‌ಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಿ.ಎಲ್. ಹೆಬ್ಬಾರ ಮಾತನಾಡಿ, ಯುದ್ಧ, ಮತೀಯವಾದ ಮೊದಲಾದ ಕಾರಣಗಳಿಂದ ಜಗತ್ತು ಕಂಗೆಟ್ಟಿದ್ದು, ಜಾಗತಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗಾಂಧಿತತ್ವ ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.

ಪ್ರಾಧ್ಯಾಪಕ ಡಾ. ಎಂ.ಜಿ. ಹೆಗಡೆ, ಡಾ. ಸುರೇಶ ಎಸ್., ವಿದ್ಯಾರ್ಥಿ ಕಾರ್ಯದರ್ಶಿಗಳಾದ ಎಚ್.ಮನೋಜ, ವಿಶಾಲ ಹೆಗಡೆ ಭಾಗವಹಿಸಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಉಪನ್ಯಾಸಕಿ ಬಿಂದು ಅವಧಾನಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕಾರ್ತಿಕ ಗೌಡ ವಂದಿಸಿದರು.