ಬೊಮ್ಮವಾರ ಗ್ರಾಮದಲ್ಲಿ ಗಾಂಧಿಭವನ ಲೋಕಾರ್ಪಣೆ

| Published : Oct 03 2025, 01:07 AM IST

ಬೊಮ್ಮವಾರ ಗ್ರಾಮದಲ್ಲಿ ಗಾಂಧಿಭವನ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವನಹಳ್ಳಿ: ಜಿಲ್ಲೆಯಲ್ಲಿ ರಾಷ್ಠಪಿತ ಮಹಾತ್ಮ ಗಾಂಧೀಜಿ ಕೊಡುಗೆ, ಹೋರಾಟ ಒಳಗೊಂಡ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ: ಜಿಲ್ಲೆಯಲ್ಲಿ ರಾಷ್ಠಪಿತ ಮಹಾತ್ಮ ಗಾಂಧೀಜಿ ಕೊಡುಗೆ, ಹೋರಾಟ ಒಳಗೊಂಡ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ತಾಲೂಕಿನ ಬೊಮ್ಮವಾರ ಗ್ರಾಮದ ಗಾಂಧಿ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿಜೀ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಅಹಿಂಸಾ ನೀತಿಯನ್ನು ಅನುಸರಿಸಿ, ವಿವಿಧ ಚಳವಳಿಗಳನ್ನು ಆರಂಭಿಸಿದ ಗಾಂಧೀಜಿ ೧೯೪೨ರ ಭಾರತ ಬಿಟ್ಟು ತೋಲಗಿ ಚಳವಳಿ ತೀವ್ರ ಪರಿಣಾಮಕಾರಿಯಾಗಿ ಇಡೀ ದೇಶಾದ್ಯಂತ ವ್ಯಾಪಿಸಿ, ಜನರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಶಿಕ್ಷಕರು ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜತೆಗೆ ನಮ್ಮ ದೇಶಕ್ಕೆ ಹೋರಾಡಿದ ಮಹನೀಯರ ಜೀವನ ಚರಿತ್ರೆ, ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು. ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸರಳತೆ, ಸಜ್ಜನಿಕೆ ವ್ಯಕ್ತಿತ್ವವನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಣ್ಣ ಹಾಗೂ ಗುಡಿ ಕೈಗಾರಿಕೆಗಳು, ಕುಲಕಸುಬು ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಜಿಲ್ಲಾಧಿಕಾರಿ ಬಸವರಾಜು ಮಾತನಾಡಿ, ರಾಷ್ಠ್ರಪಿತ ಗಾಂಧೀಜಿ, ಶಾಸ್ತ್ರಿಜೀ ಜಯಂತಿ ಹಾಗೂ ಪುಣ್ಯಸ್ಮರಣೆ ದಿನದಂದು ಮಾತ್ರ ನೆನಪಿಸಿಕೊಂಡರೆ ಸಾಲದು, ಅವರ ಕೊಡುಗೆಯನ್ನು ಪ್ರತಿದಿನವೂ ಸ್ಮರಿಸಿಕೊಳ್ಳಬೇಕಿದೆ. ಯುವ ಪೀಳಿಗೆ ಬಾಪೂಜಿ ಹಾಗೂ ಶಾಸ್ತ್ರಿಜೀ ಜೀವನಾದರ್ಶ, ತತ್ವಗಳು ಹಾಗೂ ಸಾಮಾಜಿಕ ಕೊಡುಗೆಗಳನ್ನು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಆರಂಭಿಸಿದ ಖಾದಿ ಕೇಂದ್ರ ಹಾಗೂ ಗುಡಿ ಕೈಗಾರಿಕೆಗಳನ್ನು ಬೆಳೆಸಬೇಕು. ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಜಯಂತಿ ಹಾಗೂ ಆಚರಣೆಗಳಿಂದ ಯುವ ಜನತೆಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಕೃಷ್ಣಪ್ಪ ಮಾತನಾಡಿ, ಗಾಂಧೀಜಿ ಮೇರು ವ್ಯಕ್ತಿತ್ವ ಹೊಂದಿದ್ದು, ಮಹಾನ್ ಶಾಂತಿದೂತ. ಗಾಂಧಿ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಆಚರಿಸಲಾಗುತ್ತದೆ. ಸತ್ಯ-ಅಹಿಂಸೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮರ ತತ್ವಾದರ್ಶಗಳು ಯುವಕರಿಗೆ ಪರಿಚಯಿಸಬೇಕು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀ ಸರಳ ವ್ಯಕ್ತಿತ್ವ ಹಾಗೂ ಪ್ರಾಮಾಣಿಕತೆಯಿಂದ ಕೂಡಿದ ಜನನಾಯಕರಾಗಿ ದೇಶದ ಆಡಳಿತ ನಡೆಸಿದರು ಎಂದರು.

ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ಎಸ್ಪಿ ಸಿ.ಕೆ.ಬಾಬಾ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಜಿಪಂ ಮಾಜಿ ಸದಸ್ಯ ಮಂಜುನಾಥ್, ಬಯಪ ಸದಸ್ಯ ಪ್ರಸನ್ನ ಕುಮಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌)

ಬೊಮ್ಮವಾರ ಗ್ರಾಮದ ಗಾಂಧಿಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿಜೀ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.