ಬೆಳಗಾವಿಯಲ್ಲಿ 100 ಕೋಟಿ ರು.ವೆಚ್ಚದಲ್ಲಿ ಐತಿಹಾಸಿಕ ಗಾಂಧಿ ಸ್ಮಾರಕ ನಿರ್ಮಾಣ ಮತ್ತು ಗಾಂಧೀಜಿಯವರು ರಾಜ್ಯದಲ್ಲಿ ಭೇಟಿ ನೀಡಿದ್ದ ಎಲ್ಲ ಪ್ರಮುಖ ಸ್ಥಳಗಳಲ್ಲಿ ''ಗಾಂಧಿ ಸ್ಮಾರಕ ಸ್ತಂಭ''ಗಳನ್ನು ನಿರ್ಮಿಸಲಾಗುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ಬೆಳಗಾವಿಯಲ್ಲಿ 100 ಕೋಟಿ ರು.ವೆಚ್ಚದಲ್ಲಿ ಐತಿಹಾಸಿಕ ಗಾಂಧಿ ಸ್ಮಾರಕ ನಿರ್ಮಾಣ ಮತ್ತು ಗಾಂಧೀಜಿಯವರು ರಾಜ್ಯದಲ್ಲಿ ಭೇಟಿ ನೀಡಿದ್ದ ಎಲ್ಲ ಪ್ರಮುಖ ಸ್ಥಳಗಳಲ್ಲಿ ''''ಗಾಂಧಿ ಸ್ಮಾರಕ ಸ್ತಂಭ''''ಗಳನ್ನು ನಿರ್ಮಿಸಲಾಗುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಮತ್ತು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ, ಮಹಾತ್ಮಗಾಂಧಿ ಮ್ಯೂಸಿಯಂ ಮತ್ತು ಗಾಂಧಿ ಪುಸ್ತಕಗಳ ಲೋಕಾರ್ಪಣೆ ಹಾಗೂ ‘ಮಹಾತ್ಮಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು 1924ರಂದು ಬೆಳಗಾವಿಯಲ್ಲಿ ನಡೆದ 39ನೇ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ನೂರು ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ ಬೆಳಗಾವಿಯ ಸುಭಾಷ್ ನಗರದಲ್ಲಿ ಸುಮಾರು 100 ಕೋಟಿ ರು. ವೆಚ್ಚದಲ್ಲಿ ಬೃಹತ್ ಮತ್ತು ಐತಿಹಾಸಿಕ ಸ್ಮಾರಕ ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗುವುದು ಎಂದರು.ಅದೇ ರೀತಿ ರಾಜ್ಯದಲ್ಲಿ ಮಹಾತ್ಮಗಾಂಧೀಜಿಯವರು ಭೇಟಿ ನೀಡಿದ್ದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಗಾಂಧಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸಲು ಸೂಚಿಸಿದ್ದು, ಮುಂದಿನ ಗಾಂಧಿ ಜಯಂತಿಯೊಳಗಾಗಿ ಈ ಎಲ್ಲ ಸ್ತಂಭಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.
ದೇಶದಲ್ಲಿ ಇಂದು ಎರಡು ಪ್ರಮುಖ ಕುಟುಂಬ ಅಥವಾ ವಿಚಾರಧಾರೆಗಳಿವೆ. ಒಂದು ಗಾಂಧೀಜಿಯವರ ತತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಸಾಗುವ ಕುಟುಂಬವಾದರೆ, ಇನ್ನೊಂದು ಗಾಂಧಿವಾದವನ್ನು ವಿರೋಧಿಸಿ ಅವರ ಜೀವ ತೆಗೆದಂಥ ಮನಸ್ಥಿತಿಯ ಕುಟುಂಬ. ಗಾಂಧೀಜಿಯವರ ‘ಅಹಿಂಸೆ’, ‘ಸತ್ಯ’ ಮತ್ತು ‘ಶ್ರಮವೇ ಸಾಧನೆ’ ಎಂಬ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಮುಂದಿನ ಪೀಳಿಗೆಗೆ ಗಾಂಧಿವಾದವನ್ನು ತಲುಪಿಸುವ ಕೆಲಸವಾಗಬೇಕು ಎಂದರು.ಪ್ರಶಸ್ತಿ ಮೊತ್ತ ಗಾಂಧಿ ಸ್ಮಾರಕ ನಿಧಿಗೆ ಅರ್ಪಣೆ:
ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ಡಾ.ವೂಡೇ ಪಿ.ಕೃಷ್ಣ ಅವರು ಮಾತನಾಡಿ, ಮಹಾತ್ಮಗಾಂಧಿ ಅವರು ತಮ್ಮ ಜೀವನದುದ್ದಕ್ಕೂ ಮೂಲಭೂತವಾದಿಗಳು, ಹಿಂಸೆಯ ಪ್ರತಿಪಾದಕರು ಮತ್ತು ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಿದ್ದರು. ಈ ಮೂರು ನಮ್ಮ ದೇಶಕ್ಕೆ ಮಾರಕವಾಗಿ ಪರಿಣಮಿಸಿವೆ. ಮಹಾತ್ಮ ಗಾಂಧೀಜಿಯವರನ್ನು ತಪ್ಪಾಗಿ ಅರ್ಥೈಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಗಾಂಧೀಜಿಯವರನ್ನು ಸಂಪೂರ್ಣವಾಗಿ ಓದದೇ, ಅರಿಯದೇ ಟೀಕಿಸಬಾರದು ಎಂದರು. ಇದೇ ವೇಳೆ ಪ್ರಶಸ್ತಿ ಮೊತ್ತ 5 ಲಕ್ಷ ರು.ಗಳನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಗೆ ಅರ್ಪಿಸಿದರು.ಡಿಜಿಟಲ್ ಮ್ಯೂಸಿಯಂ ಲೋಕಾರ್ಪಣೆ:
ನಗರದ ಗಾಂಧಿ ಭವನದಲ್ಲಿ ಗಾಂಧೀಜಿಯ ಬಾಲ್ಯದಿಂದ ಅಂತಿಮ ಯಾತ್ರೆಯವರೆಗಿನ ಜೀವನವನ್ನು ಡಿಜಿಟಲ್ ರೂಪದಲ್ಲಿ ಕಟ್ಟಿಕೊಟ್ಟಿರುವ ‘ಮಹಾತ್ಮನ ಪಯಣ’ ಡಿಜಿಟಲ್ ಮ್ಯೂಸಿಯಂ ಮತ್ತು ಗಾಂಧಿ ಪುಸ್ತಕಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಿದರು.ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಉದ್ಯೋಗದ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ನರೇಗಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಇತ್ತೀಚೆಗೆ ಗಾಂಧೀಜಿಯವರ ಹೆಸರನ್ನು ತೆಗೆಯಲಾಗಿದ್ದು ವಿಬಿಜಿ ರಾಮ್‌ಜೀ ಎಂದು ಬದಲಿಸಲಾಗಿದೆ. ಈ ಪ್ರಯತ್ನಗಳು ವಿಮರ್ಶೆಗೆ ಒಳಪಡಬೇಕಿದೆ ಎಂದರು.
ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಮಾತನಾಡಿ, ರಾಜ್ಯದ ಬಹುತೇಕ ಕಡೆಗಳಲ್ಲಿ ಗಾಂಧಿ ಭವನಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದೇವೆ. ಇನ್ನೂ ಕೆಲ ಕಡೆ ಸ್ಥಾಪನೆಯಾಗಬೇಕಿದೆ. ಅವುಗಳ ನಿರ್ವಹಣೆಗೆ ಸರ್ಕಾರ ಮುಂದಾಗಬೇಕು. ಮುಖ್ಯಮಂತ್ರಿಯವರು ಹೆಚ್ಚಿನ ಆಸಕ್ತಿ ವಹಿಸಿ ಈ ಕೆಲಸ ಮಾಡಿಕೊಡುತ್ತಾರೆಂಬ ನಂಬಿಕೆ ಇದೆ ಎಂದರು.ಕಾರ್ಯಕ್ರಮದಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್, ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ, ನಿವೃತ್ತ ನ್ಯಾಯಮೂರ್ತಿ ಟಿ.ಜೆ.ಶಿವಶಂಕರಗೌಡ, ಡಿ.ಆರ್.ಪಾಟೀಲ್, ಕರ್ನಾಟಕ ಚಿತ್ರಕಲಾ ಪರಿಷತ್ ಬಿ.ಎಲ್.ಶಂಕರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಇತರರಿದ್ದರು.