ಸಾರಾಂಶ
ಮಹಾತ್ಮ ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ನಡೆಯುತ್ತಿದೆ.
ಹುಬ್ಬಳ್ಳಿ:
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 155ನೇ ಜಯಂತಿ, ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಮಹಾಧಿವೇಶನಕ್ಕೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯೂ ಗಾಂಧಿ ನಡಿಗೆ ಮಾಡಿತು. ಈ ಮೂಲಕ ಮಹಾತ್ಮನ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಿತು.ಇಲ್ಲಿನ ಕೆಎಂಸಿಆರ್‌ಐನ ಮುಖ್ಯದ್ವಾರದ ಬಳಿ ಇರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮಹಿಳಾ ವಿದ್ಯಾಪೀಠದಲ್ಲಿರುವ ಗಾಂಧೀಜಿ ಚಿತಾಭಸ್ಮದ ಸ್ಥಳದ ವರೆಗೆ ಪಾದಯಾತ್ರೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರಸಾದ ಅಬ್ಬಯ್ಯ, ಮಹಾತ್ಮ ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ನಡೆಯುತ್ತಿದೆ ಎಂದರು.ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಂದ ನಾಥೂರಾಮ ಘೋಡ್ಸೆ ಮತ್ತು ಮನುಸ್ಮೃತಿಯನ್ನು ಒಪ್ಪುವ ಮನಸ್ಥಿತಿಯವರು ದೇಶವನ್ನಾಳುತ್ತಿರುವುದು ವಿಷಾದನೀಯ. ಇಂದು ದೇಶದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಮೊದಲು ಆಡಳಿತ ಪಕ್ಷದವರು ವಿರೋಧ ಪಕ್ಷದವರ ವಿಶ್ವಾಸ ತೆಗೆದುಕೊಂಡು ಅವರಿಗೆ ಗೌರವ ನೀಡಿ ದೇಶದ ಉನ್ನತಿಗೆ ಸರ್ಕಾರಗಳು ಶ್ರಮಿಸುತ್ತಿದ್ದವು. ಆದರೆ ಇಂದು ವಿರೋಧ ಪಕ್ಷದವರನ್ನು ದೇಶದ ಶತ್ರುಗಳಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಯುವಪೀಳಿಗೆ ದೇಶಕ್ಕಾಗಿ ಮಹನೀಯರು ನೀಡಿದ ಬಲಿದಾನ ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು. ದೇಶದ ಐಕ್ಯತೆಗೆ ಪ್ರತಿಯೊಬ್ಬರೂ ಹೋರಾಡಬೇಕು. ಪ್ರಜಾಪ್ರಭುತ್ವದ ಕಲ್ಪನೆ ಮತ್ತು ಸಂವಿಧಾನದ ಆಶಯದಂತೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಸಯೀದ್ ಅಹ್ಮದ್, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಡಿಸಿಸಿ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ, ಅನಿಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಸತೀಶ ಮಹೆರವಾಡೆ, ರಾಜಶೇಖರ ಮೆಣಸಿನಕಾಯಿ, ರಾಜೇಶ್ವರಿ ಪಾಟೀಲ, ಆರೀಫ್ ಭದ್ರಾಪುರ, ಸೆಂದೀಲ್ ಕುಮಾರ್, ಇಕ್ಬಾಲ್ ನವಲೂರ, ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ ಸೇರಿದಂತೆ ಹಲವರಿದ್ದರು.