ನಮ್ಮ ಎತ್ತರಕ್ಕೆ ಮಹಾತ್ಮಗಾಂಧೀಜಿಯನ್ನು ಕತ್ತರಿಸಿ ನೋಡುವ ಅಗತ್ಯವಿಲ್ಲ. ಗಾಂಧೀಜಿಯವರ ಎತ್ತರಕ್ಕೆ ತಲುಪಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಗಗನ ಅದೃಶ್ಯ ವ್ಯಕ್ತಿಯನ್ನು ತಲುಪಲು ಸಾಧ್ಯವಿಲ್ಲ. ಗಾಂಧೀಜಿಯವರು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಎಲ್ಲಾ ಕ್ಷೇತ್ರಗಳ ಕುರಿತು ಮಾತನಾಡಿದ್ದಾರೆ. ಅವರು ಮಾತನಾಡಿದರೆ ದೇಶ ಎದ್ದು ಬರುತ್ತಿದ್ದ ಕಾಲ ಇತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ಗಾಂಧಿ, ವಿವೇಕಾನಂದ ಅವರನ್ನು ಎಲ್ಲಾ ಕಾಲಕ್ಕೂ ನೆನೆಯಬೇಕು. ಗಾಂಧೀಜಿಯವರ ಜೀವನ ಶೈಲಿ ಹಾಗೂ ಅವರಲ್ಲಿದ್ದ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆ ಡಾ. ಕವಿತಾ ರೈ ಕಿವಿಮಾತು ಹೇಳಿದರು.ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಅದಮ್ಯ ರಂಗಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಸದ್ಭಾವನಾ, ಸ್ವಾಮಿ ವಿವೇಕಾನಂದ ಸಮಾಜ ಸೇವಾ, ಅದಮ್ಯ ಚಿಗುರು ಪ್ರತಿಭಾ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಕ್ಕಳ ಸಾಂಸ್ಕೃತಿಕ ಉತ್ಸವ ಶನಿವಾರ ಜರುಗಿತು.
ನಮ್ಮ ಎತ್ತರಕ್ಕೆ ಮಹಾತ್ಮಗಾಂಧೀಜಿಯನ್ನು ಕತ್ತರಿಸಿ ನೋಡುವ ಅಗತ್ಯವಿಲ್ಲ. ಗಾಂಧೀಜಿಯವರ ಎತ್ತರಕ್ಕೆ ತಲುಪಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಗಗನ ಅದೃಶ್ಯ ವ್ಯಕ್ತಿಯನ್ನು ತಲುಪಲು ಸಾಧ್ಯವಿಲ್ಲ. ಗಾಂಧೀಜಿಯವರು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಎಲ್ಲಾ ಕ್ಷೇತ್ರಗಳ ಕುರಿತು ಮಾತನಾಡಿದ್ದಾರೆ. ಅವರು ಮಾತನಾಡಿದರೆ ದೇಶ ಎದ್ದು ಬರುತ್ತಿದ್ದ ಕಾಲ ಇತ್ತು ಎಂದರು.ದೇಶವನ್ನು ವಿಭಜಿಸಿದರೆ, ಒಂದು ದೇಹವನ್ನು ಎರಡು ಭಾಗ ಮಾಡಿದಂತೆ. ಅದನ್ನು ಮಾಡಬೇಡಿ ಎಂದು ಮಹಾತ್ಮ ಗಾಂಧೀಜಿ ಅವರು ಅಂದು ಹೇಳಿದ್ದರು. ಯೂಟ್ಯೂಬ್ ಯುಗದಲ್ಲಿ ಸತ್ಯವನ್ನು ತಿರುಚಲು ಆಗುವುದಿಲ್ಲ. ರಾಜಕಾರಣಿಗಳು ತಿರುಚಿ ಮಾತನಾಡಬಾರದು, ಜನರಿಗೆ ಸತ್ಯವನ್ನು ಸಾರಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ, ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಪ್ರೊ. ಷಹಸೀನಾ ಬೇಗಂ, ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಉಪಾಧೀಕ್ಷಕ ಸಿ. ಕಿರಣ್ ಕುಮಾರ್, ಹುಣಸೂರಿನ ಶಾಸ್ತ್ರೀ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಲ್. ರವಿಶಂಕರ್ ಅವರಿಗೆ ಗಾಂಧಿ ಸದ್ಭಾವನಾ ಪ್ರಶಸ್ತಿ ಯನ್ನು ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಪ್ರದಾನ ಮಾಡಿದರು.ಸ್ವಾಮಿ ವಿವೇಕಾನಂದ ಸಮಾಜಸೇವಾ ಪ್ರಶಸ್ತಿಯನ್ನು ಹಿರಿಯ ವರದಿಗಾರ ಅವಿನಾಶ್ ಜೈನಹಳ್ಳಿ, ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎನ್. ಸಂತೋಷ್ ಕುಮಾರ್, ಸಾಹಿತಿಗಳಾದ ಡಾ.ನೀ.ಗೂ. ರಮೇಶ್ ಮತ್ತು ತಿಪಟೂರಿನ ಎಸ್. ಗಂಗಾಧರ ಕದ್ರಿ, ಪುಸ್ತಕ ಸಂಗ್ರಾಹಕ ಡಾ.ಎಚ್.ಬಿ. ಬೆಟ್ಟಸ್ವಾಮಿ, ನಂಜನಗೂಡಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎನ್. ಚಂದ್ರಶೇಖರ ಬಾಬು, ತಿಪಟೂರಿನ ಟೈಮ್ಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಕೆ.ಎಲ್. ಅನೂಪ್, ಎಚ್.ಡಿ. ಕೋಟೆಯ ಸೇಂಟ್ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಕೆ.ಆರ್. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ. ಕೃಷ್ಣ ಬನ್ನಹಳ್ಳಿ, ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸಿ. ಅನಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲೆಯ ವಿವಿಧ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದಮ್ಯ ಚಿಗುರು-ಪ್ರತಿಭಾ ಚೇತನ ಪ್ರಶಸ್ತಿಯನ್ನು ಎಡಿಸಿ ಡಾ.ಪಿ. ಶಿವರಾಜು ಹಾಗೂ ಚಾಮರಾಜನಗರ ಜಿಲ್ಲೆಯ ಲೋಕಾಯುಕ್ತ ಉಪಾಧೀಕ್ಷಕ ಜಿ.ಎಸ್. ಗಜೇಂದ್ರ ಪ್ರಸಾದ್ ಪ್ರದಾನ ಮಾಡಿದರು.ಕರ್ನಾಟಕ ಮಾಹಿತಿ ಆಯೋಗದ ಮಾಜಿ ಆಯುಕ್ತ ಕೆ.ಎಂ. ಚಂದ್ರೇಗೌಡ, ಅದಮ್ಯ ರಂಗಶಾಲೆ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಲೇಖಕ ಮಿರ್ಲೆ ಚಂದ್ರಶೇಖರ, ಉದ್ಯಮಿ ಎನ್.ಎಲ್. ಗಿರೀಶ್ ಮೊದಲಾದವರು ಇದ್ದರು.