ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅಹಿಂಸಾ ಮಾರ್ಗವನ್ನು ಹಾಕಿಕೊಟ್ಟವರು ಮಹಾತ್ಮ ಗಾಂಧೀಜಿ. ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂಬುದು ಅವರ ಕನಸು ಹಾಗೂ ತತ್ವ ಸಿದ್ಧಾಂತವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ ಎಂದು ಸಂಸದರಾದ ಶ್ರೇಯಸ್ ಎಂ.ಪಟೇಲ್ ಕರೆ ನೀಡಿದರು.ಜಿಲ್ಲಾಡಳಿತದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಅವರು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅವರ ಬಗ್ಗೆ ಎಷ್ಟೇ ಬಣ್ಣಿಸಿದರೂ ಸಾಲದು. ಅವರ ನಡೆ-ನುಡಿ, ತತ್ವ-ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಧರ್ಮದ ಮೂಲ ಒಂದೇ ಆಗಿದೆ. ಅಹಿಂಸೆ, ಸತ್ಯತೆಯನ್ನು ಎತ್ತಿ ಹಿಡಿಯುವಂತಹದ್ದಾಗಿದೆ ಎಂದು ತಿಳಿಸಿದರು. ಗಾಂಧೀಜಿಯವರು ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸ್ವಚ್ಛತೆಯೇ ಸತ್ಯ, ಸ್ವಚ್ಛತೆಯೇ ಸುಂದರ, ನಮ್ಮ ಜಿಲ್ಲೆ ಸ್ವಚ್ಛತೆಯ ಜಿಲ್ಲೆಯಾಗಿ ಮಾಡಲು ನಾವೆಲ್ಲರೂ ಕೈ ಜೋಡಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿಜ್ಞೆ ಮಾಡೋಣ ಎಂದರು. ಪ್ರತಿಯೊಂದು ಅಂಗಡಿ ಮುಂದೆ ಕಸದ ಬುಟ್ಟಿಗಳನ್ನು ಇಟ್ಟುಕೊಳ್ಳಬೇಕು. ಸ್ವ-ಇಚ್ಛೆಯಿಂದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವಂತಹದ್ದು ನಾಗರೀಕರೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರೆಲ್ಲರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನೆರವೇರಿತು. ಹಿಂದೂ ಧರ್ಮ ಕುರಿತು ಸತ್ಯನಾರಾಯಣ, ಮುಸ್ಲಿಂ ಧರ್ಮ ಕುರಿತು ಎಸ್.ಎಸ್ ಪಾಷ, ಕ್ರಿಶ್ಚಿಯನ್ ಧರ್ಮ ಕುರಿತು ವೀನಿಶ್ ಸ್ವರೂಪ್, ಬೌದ್ದ ಧರ್ಮ ಕುರಿತು ಬಸವರಾಜ್, ಜೈನ್ ಧರ್ಮ ಕುರಿತು ಪದ್ಮಶ್ರೀ ಮೃತ್ಯುಂಜಯ ಅವರು ಪ್ರವಚನ ನೀಡಿದರು. ಕೇಂದ್ರೀಯ ಶಾಲಾ ಮಕ್ಕಳು ಗಾಂಧೀಜಿ ಅವರ ಜನಪ್ರಿಯ ಭಜನೆಗಳನ್ನು ಹಾಡುವ ಮೂಲಕ ಭಜನ ಕಾರ್ಯಕ್ರಮ ನಡೆಸಿಕೊಟ್ಟರು. ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕುರಿತು ಕಿರು ನಾಟಕವನ್ನು ಪ್ರಸ್ತುತಪಡಿಸಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಉಪ ವಿಭಾಗಾಧಿಕಾರಿ ಮಾರುತಿ ಮತ್ತಿತರರು ಉಪಸ್ಥಿತರಿದ್ದರು. ಯದೀಶ್ ನಿರೂಪಣೆ ಮಾಡಿದರು. ಮುರುಳಿ ಮತ್ತು ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಸ್ವಾಗತಿಸಿದರು.ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ:
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಗಮನ ಸೆಳೆದ ಗಾಂಧಿ ವೇಷಧಾರಿಗಳು:
ಪುಟಾಣಿ ಮಕ್ಕಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ವೇಷಧಾರಿಗಳಾಗಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು. ವೇಷಧಾರಿ ಮಕ್ಕಳಿಗೆಲ್ಲರಿಗೂ ಬಹುಮಾನ ನೀಡಲಾಯಿತು.ಬಾಕ್ಸ್:: ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದವರು ಶಾಸ್ತ್ರೀಜಿದೇಶ ಕಂಡಂತಹ ಅಪ್ರತಿಮ ನಾಯಕರಾದ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸರಳ ಸಜ್ಜನಿಕೆ ಹಾಗೂ ಭ್ರಷ್ಟಚಾರ ಮುಕ್ತ ಆಡಳಿತವನ್ನು ನೀಡಿದಂತಹವರು. ಬಡತನದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು, ಬಡತನದಲ್ಲೇ ಅಸುನೀಗಿದವರಾಗಿದ್ದಾರೆ. ತಾವು ಪ್ರಧಾನ ಮಂತ್ರಿಯಾದ ಕಡಿಮೆ ಅವಧಿಯಲ್ಲೇ ಅತ್ಯಂತ ಪ್ರಾಮಾಣಿಕವಾದ ಆಡಳಿತವನ್ನು ನೀಡಿದವರಾಗಿದ್ದಾರೆ ಎಂದು ತಿಳಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಕೊಟ್ಟಿರುವ ಜೈ ಜವಾನ್ ಜೈ ಕಿಸಾನ್ ಸಂದೇಶ, ರೈತರ ಸಬಲೀಕರಣ, ಮಹಿಳಾ ಸಬಲೀಕರಣ, ವಿವಿಧ ಖಾತೆಗಳ ಸಚಿವರಾಗಿ ಕೆಲಸ ನಿರ್ವಹಣೆ ಮಾಡಿರುವುದು ಮಾದರಿಯಾಗಿದೆ ಎಂದರು.