ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಜಿ ರಾಮ್ ಜೀ ಎಂದು ಕೇಂದ್ರ ಸರ್ಕಾರ ಬದಲಿಸುವ ಮೂಲಕ ರಾಷ್ಟ್ರಪಿತನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಳ್ಳಾರಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಜಿ ರಾಮ್ ಜೀ ಎಂದು ಕೇಂದ್ರ ಸರ್ಕಾರ ಬದಲಿಸುವ ಮೂಲಕ ರಾಷ್ಟ್ರಪಿತನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿಯವರು ಮಹಾತ್ಮ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಗಾಂಧೀ, ಅಂಬೇಡ್ಕರ್ ಅವರಂತಹ ಮಹನೀಯರ ಬಗ್ಗೆ ಯಾವ ಗೌರವಗಳನ್ನು ಇಟ್ಟುಕೊಂಡಿಲ್ಲ. ಹೀಗಾಗಿಯೇ ಗಾಂಧೀಜಿ ಹೆಸರನ್ನು ವಿನಾಕಾರಣ ಮುನ್ನಲೆಗೆ ತಂದು ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉದ್ಯೋಗ ಖಾತ್ರಿ ಯೋಜನೆಲ್ಲಿ ಗಾಂಧೀಜಿಯವರ ಹೆಸರನ್ನು ತೆಗೆದುಹಾಕುವ ನಿರ್ಧಾರಕ್ಕೆ ಬಂದಿದೆ. ಬಿಜೆಪಿಯ ದ್ವೇಷ ರಾಜಕಾರಣ ಮಿತಿ ಮೀರಿದೆ. ವಿನಾಕಾರಣ ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲು ಮಾಡುತ್ತಿದೆ. ನ್ಯಾಷನಲ್ ಹೆರಾಲ್ಡ್‌ ವಿರುದ್ಧದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದೆ. ಬಿಜೆಪಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಷ್ಟ್ರೀಯ ನಾಯಕರ ಬಗ್ಗೆ ಯಾವುದೇ ಗೌರವವಿಲ್ಲ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿರಿಸಿಕೊಂಡು ವಿವಿಧ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದ್ದು ವಿವಿಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ವೆಂಕಟೇಶ್ ಹೆಗಡೆ, ಸಿದ್ದೇಶ್ ಎಚ್‌, ನಾಗಭೂಷಣಗೌಡ, ಜಗನ್, ಬಿ.ಎಂ.ಪಾಟೀಲ್ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.