ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಜೊತೆಗೆ ಧಾರ್ಮಿಕ ಭಾವನೆ ಹೆಚ್ಚಾಗುವಂತೆ ಮಾಡಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಅಭಿಪ್ರಾಯಪಟ್ಟರು.ಹೋಬಳಿ ಕೇಂದ್ರದ ಶ್ರೀ ಸತ್ಯ ಗಣಪತಿ ಸೇವಾ ಸಮಿತಿ ಹೊಯ್ಸಳ ಯುವಕ ಸಂಘದ ವತಿಯಿಂದ 35ನೇ ವರ್ಷದ ಗಣೇಶೋತ್ಸವದ ಅಂಗವಾಗಿ ನಡೆದ ಸಂಸ್ಕೃತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮದ ಹೊಯ್ಸಳ ಸಂಘದ ವತಿಯಿಂದ ಪುರಾಣ ಪ್ರಸಿದ್ಧ ಶ್ರೀ ಸದಾಶಿವ ಸ್ವಾಮಿ ದೇವಾಲಯದಲ್ಲಿ ಕಳೆದ 35 ವರ್ಷಗಳಿಂದ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ವಿಸರ್ಜಿಸಲಾಗುತ್ತಿದೆ. ದೇಶದ ಅನೇಕ ರಾಜ್ಯಗಳಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಗಣೇಶೋತ್ಸವ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗುವುದರ ಜೊತೆಗೆ ಒಗ್ಗಟ್ಟನ್ನು ಮೂಡಿಸುತ್ತಿದೆ. ಗ್ರಾಮದಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಮುಸ್ಲಿಂ ಜನಾಂಗವು ಉತ್ಸವದಲ್ಲಿ ಪಾಲ್ಗೊಂಡಿರುವುದು ತಮಗೆ ಹೆಚ್ಚು ಖುಷಿ ತರಿಸಿದೆ ನುಗ್ಗೇಹಳ್ಳಿ ಗಣೇಶೋತ್ಸವ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಹೋಬಳಿ ಕೇಂದ್ರದಲ್ಲಿ ಶೈಕ್ಷಣಿಕವಾಗಿ ಹಾಗೂ ನೀರಾವರಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ತಮ್ಮ 3 ಅವಧಿಯಲೂ ಹೆಚ್ಚು ಸಹಕಾರ ನೀಡಿರುವುದಾಗಿ ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಮಾತನಾಡಿದರು. ಗಣೇಶೋತ್ಸವದ ಅಂಗವಾಗಿ ಶನಿವಾರ ಸಂಜೆ ಶ್ರೀ ಸದಾಶಿವ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯನ್ನು ಗ್ರಾಮದ ರಾಜ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಣೇಶೋತ್ಸವದಲ್ಲಿ ಭಾಗವಹಿಸಿ ಜನರನ್ನು ರಂಜಿಸಿದವು. ಹೋಬಳಿ ಕೇಂದ್ರವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಭಾನುವಾರ ಬೆಳಿಗ್ಗೆ ಪುರಾಣ ಪ್ರಸಿದ್ಧ ಜೋಡಿ ಕಲ್ಯಾಣಿಯಲ್ಲಿ ಕ್ರೈನ್ ಸಹಾಯದೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.ಗಣೇಶೋತ್ಸವದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಎ ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಚಿದಾನಂದ, ಉದ್ಯಮಿ ಅಣತಿ ಯೋಗೀಶ್, ಯುವ ಮುಖಂಡ ಜೆ ಕೆ ಮಂಜುನಾಥ್, ಗ್ರಾಪಂ ಅಧ್ಯಕ್ಷ ಎನ್ ಎಸ್ ಮಂಜುನಾಥ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಕೃಪಾ ಶಂಕರ್, ಸದಸ್ಯರಾದ ಹೊನ್ನೇಗೌಡ, ನಟರಾಜ್ ಯಾದವ್, ಮುಖಂಡರಾದ ವಾಸು, ಗುಳೇಗೌಡ, ಸೇರಿದಂತೆ ಹೊಯ್ಸಳ ಯುವಕ ಸಂಘದ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.