ಸಾರಾಂಶ
ದಾಂಡೇಲಿ: ಗಣೇಶ ಚತುರ್ಥಿಯಂದು ಮನೆ ಮನೆಗಳಲ್ಲಿ ಪೂಜೆಗೊಳ್ಳಲು ಮೂಷಿಕ ವಾಹನ ಹೊಂದಿರುವ ಗಣೇಶನ ಮೂರ್ತಿಗಳು ಅತ್ಯಂತ ಸುಂದರ, ಆಕರ್ಷಕ ಬಣ್ಣಗಳೊಂದಿಗೆ, ವಿವಿಧ ಭಂಗಿಗಳಲ್ಲಿ ತಯಾರಾಗುತ್ತಿದ್ದಾನೆ.
ಗಣೇಶ ಚತುರ್ಥಿಯು ಇನ್ನೇನು ಬಂದೇ ಬಿಟ್ಟಿತು. ಇನ್ನು ಮೂರ್ತಿಗಳ ತಯಾರಿಯ ಅನೇಕ ಕೆಲಸಗಳು ಬಾಕಿ ಇವೆ. ತಯಾರಾದ ಮೂರ್ತಿಗಳನ್ನು ಭಕ್ತರ ಖರೀದಿಗಾಗಿ ಮಾರುಕಟ್ಟೆಗೆ ಕಳುಹಿಸಿರುವುದಾಗಿ ಮೂರ್ತಿ ಕಲಾಕಾರರು ಹೇಳುತ್ತಾರೆ. ಈ ಸಲವು ಮರುಕಟ್ಟಿಯಲ್ಲಿ ತಮಗಿಷ್ಟವಾದ ಗಣಪನ ಮೂರ್ತಿಯನ್ನು ಮುಂಗಡವಾಗಿ ಕಾಯ್ದಿರಿಸುವ ಕೆಲಸವು ಕೂಡ ನಡೆದಿದೆ.ನಗರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳಿವೆ. ನಗರದ ಸಾವಿರಾರು ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲ್ಪಡುತ್ತಾನೆ. ಭಕ್ತರು ನಮ್ಮ ಅನುಕೂಲಕ್ಕೆ ತಕ್ಕಂತೆ ಮೆನಗಳಲ್ಲಿ ೧ ರಿಂದ ೧೧ ದಿನಗಳವರೆಗೆ ಮನೆಗಳಲ್ಲಿ ಗಣಪತಿಯನ್ನು ಪೂಜಿಸಿ ಆರಾಧಿಸುತ್ತಾರೆ. ಇನ್ನು ಸಾರ್ವಜನಿಕ ಗಣೇಶ ಮಂಡಳದವರು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಪರ ಊರುಗಳಿಂದ, ಬೆಳಗಾವಿ, ಹುಬ್ಬಳ್ಳಿ, ಮಹಾರಾಷ್ಟ್ರದ ಕೊಲ್ಲಾಪುರ, ಇಚ್ಚಲಕರಂಜಿ ಮುಂತಾದ ಕಡೆಗಳಿಂದ ತರುತ್ತಾರೆ. ಮನೆಗಳಲ್ಲಿ ಪೂಜಿಸುವ ಭಕ್ತರು ನಗರದಲ್ಲಿಯೇ ಹೆಚ್ಚಾಗಿ ಖರಿದಿಸುತ್ತಾರೆ. ನಗರದಲ್ಲಿ ಅತೀ ಸುಂದರ ವಿವಿಧ ಬಣ್ಣಗಳಿಂದ ಅಲಂಕಾರಗೊಂಡ ಚಂದದ ಗಣಪನಿಗೆ ಹೆಚ್ಚು ಬೇಡಿಕೆಯಿದೆ.
ನಗರದ ಅಂಬೇವಾಡಿಯ ಡಬಲ್ ಬಿಲ್ಡಿಂಗ್, ಜೆ.ಎನ್.ರಸ್ತೆ, ಬರ್ಚಿ ರಸ್ತೆ, ಸಂಡೆ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಭಕ್ತರು ಮಾರುಕಟ್ಟೆಯಲ್ಲಿರುವ ಗಣೇಶನ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯಲು ಮುಂಗಡ ಹಣ ಕೊಟ್ಟು ಕಾಯ್ದಿರಿಸುತ್ತಿದ್ದಾರೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಜೋರಾಗಿದೆ.ಶಿವಗಣಪತಿ, ನಟರಾಜ, ಪಂಚಮುಖೀ, ಗಣಾಂಜನೇಯ, ಅರ್ಧನಾರೇಶ್ವರ, ಹನುಮಂತನ ಮೇಲೆ ಕುಳಿತ ಗಣಪ, ಶೇಷಶಯನ, ವೇಂಕಟೇಶ್ವರ, ಕಾಳಿಂಗ ಮರ್ಧನ, ರಾಜ ದರ್ಬಾರ ಗಣಪ, ಕಮಲದ ಹೂವಿನ ಮೇಲೆ ಕುಳಿತ ಗಣಪ, ಮೂಷಿಕ ಮೇಲೆ ಕುಳಿತ ಗಣಪ ಹೀಗೆ ವಿವಿಧ ತರದ ಮೂರ್ತಿಗಳು ಸಿಗುತ್ತವೆ. ಹೆಚ್ಚಿನ ಗಣಪತಿ ಮೂರ್ತಿಗಳನ್ನು ಮನಿನಲ್ಲಿ ಮಾಡಿದ್ದು, ಎತ್ತರ ಮತ್ತು ದೊಡ್ಡ ಗಣಪತಿ ಮೂರ್ತಿಗಳನ್ನು ತಯಾರಿಸಲು ಕಷ್ಟವಾಗುತ್ತದೆ ಎಂದು ಮೂರ್ತಿ ತಯಾರಕರ ಮಾತಾಗಿದೆ.
ಕಳೆದ ಕೆಲವು ವರ್ಷಗಳಿಂದ ಪಿಒಪಿ ಮೂರ್ತಿಗಳ ತಯಾರಿಕೆಯನ್ನು ಸರ್ಕಾರ ನಿಷೇಧಿದ್ದು, ಗಣಪತಿ ಮೂರ್ತಿ ತಯಾರಕರಿಗೆ ಮತ್ತು ಮೂರ್ತಿ ಮಾರಾಟ ಮಾಡುವವರಿಗೆ ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಕುರಿತು ಕಟ್ಟುನಿಟ್ಟಾಗು ಪಾಲಿಸಲು ಸೂಚನೆ ನೀಡಬೇಕು. ಮಣ್ಣಿನ ಮೂರ್ತಿ ತಯಾರಿಸುವವರು ಇದ್ದರು, ಕೆಲವರು ಪಿಒಪಿ ಗಣೇಶನ ಮೂರ್ತಿ ತಯಾರಿಸುವರಿದ್ದಾರೆ. ಅಂತಹವರನ್ನು ಕಂಡು ಹಿಡಿದು ಕ್ರಮ ಕೈಗೊಳ್ಳಬೇಕು.