ದಿ.ಗಣೇಶ್‌ರಾವ್‌ ಸಿಂಧ್ಯಾ ಭದ್ರಾವತಿ ಪತ್ರಿಕೋದ್ಯಮದ ಹೆಗ್ಗುರುತು: ಎನ್.ಬಾಬು

| Published : Feb 12 2024, 01:37 AM IST / Updated: Feb 17 2024, 11:24 AM IST

ದಿ.ಗಣೇಶ್‌ರಾವ್‌ ಸಿಂಧ್ಯಾ ಭದ್ರಾವತಿ ಪತ್ರಿಕೋದ್ಯಮದ ಹೆಗ್ಗುರುತು: ಎನ್.ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ಪತ್ರಿಕಾ ಭವನ ಸಭಾಂಗಣದಲ್ಲಿ ಹಿರಿಯರ ಬಳಗದ ವತಿಯಿಂದ ಹಿರಿಯ ಪತ್ರಕರ್ತ ದಿವಂಗತ ಗಣೇಶ್ ರಾವ್ ಸಿಂಧ್ಯಾ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಹಲವು ಗಣ್ಯರು ಪಾಲ್ಗೊಂಡು ಸಿಂಧ್ಯಾ ಸಾಧನೆ ನೆನೆದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕಿನ ಪತ್ರಿಕೋದ್ಯಮದಲ್ಲಿ ಹೆಗ್ಗುರುತು ಮೂಡಿಸಿರುವ ಕೆಲವೇ ಕೆಲವು ಪತ್ರಕರ್ತರಲ್ಲಿ ದಿವಂಗತ ಗಣೇಶ್‌ರಾವ್ ಸಿಂಧ್ಯಾ ಸಹ ಒಬ್ಬರು ಎಂದು ಹಿರಿಯ ಪತ್ರಕರ್ತ ಎನ್.ಬಾಬು ಬಣ್ಣಿಸಿದರು.

ಹಳೇನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಹಿರಿಯರ ಬಳಗದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತ ದಿವಂಗತ ಗಣೇಶ್‌ರಾವ್ ಸಿಂಧ್ಯಾ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪತ್ರಕರ್ತರಾದ ಸಿಡಿಲಮರಿ ಕೃಷ್ಣಪ್ಪ ಹಾಗೂ ಗಣೇಶ್ ರಾವ್ ಸಿಂಧ್ಯಾ ಈ ಇಬ್ಬರನ್ನು ತಾಲೂಕಿನ ಜನರು ಎಂದಿಗೂ ಮರೆಯುವುದಿಲ್ಲ. ಬರವಣಿಗೆ ಮಾತ್ರವಲ್ಲದೆ ಹೋರಾಟ ಗಾರರನ್ನು ಹಾಗೂ ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿದಾರಿಗೆ ತರುವಲ್ಲಿ ಗಣೇಶರಾವ್ ಅವರು ಶ್ರಮಿಸಿದರು. ಮಿತಭಾಷಿಯಾಗಿದ್ದರೂ ತೀಕ್ಷ್ಣ ಸ್ವಭಾವ ಮತ್ತು ತೀಕ್ಷ್ಣ ಬರವಣಿಗೆ ಮೂಲಕ ಜನಪರ ಕಾಳಜಿ ಹೊಂದಿದ್ದರು. ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ವ್ಯಕ್ತಿಯಾಗಿದ್ದರು ಎಂದರು.

ಹಿಂದುಳಿದ ವರ್ಗಗಳ ಮುಖಂಡ ಟಿ.ವೆಂಕಟೇಶ್ ಮಾತನಾಡಿ, ಗಣೇಶ್ ರಾವ್ ಸಿಂಧ್ಯಾ ಅವರು ಯಾವುದೇ ಪಕ್ಷದ ಬೆಂಬಲಿಗರಾಗದೆ ಪ್ರಾಮಾಣಿಕ ಹಾಗೂ ಸಾಮಾಜಿಕ ಬದ್ಧತೆ ಹೊಂದಿದ ಪತ್ರಕರ್ತರಾಗಿದ್ದರು. 50 ವರ್ಷಗಳ ನಿರಂತರವಾದ ಸುದೀರ್ಘ ಸೇವೆ ಸ್ಮರಣೀಯವಾದದ್ದು. ತುರ್ತು ಪರಿಸ್ಥಿತಿಯಲ್ಲಿ ಮುದ್ರಣವನ್ನು ತಡೆಹಿಡಿದರೂ ಎದೆಗುಂದದೆ ಪತ್ರಿಕೆ ಮುನ್ನಡೆಸಿದ ವ್ಯಕ್ತಿ. ಕ್ಷೇತ್ರದ ಅನೇಕ ರಾಜಕಾರಣಿಗಳ ಬೆಳವಣಿಗೆಯಲ್ಲಿ ಗಣೇಶ್ ರಾವ್ ಸಿಂಧ್ಯಾರವರ ಪರಿಶ್ರಮವಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಗಣೇಶ್ ರಾವ್ ಸಿಂಧ್ಯಾರಂತಹ ಹಿರಿಯ ಪತ್ರಕರ್ತರು, ಮಹಾನೀಯರ ಸ್ಮರಣೆ ಇಂದಿನ ಅಗತ್ಯ. ಕೆಲವು ಪ್ರಕರಣಗಳು ದಾಖಲಾದಾಗಲೂ ಜಗ್ಗದೆ ಧೈರ್ಯವಾಗಿ ಪತ್ರಿಕೆ ಮುನ್ನಡೆಸಿದ ನೆನಪುಗಳನ್ನು ಸ್ಮರಿಸಿದರು.

ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ನಗರಸಭೆ ಸದಸ್ಯರಾದ ಬಿ.ಟಿ.ನಾಗರಾಜ್, ಶಶಿಕಲಾ ನಾರಾಯಣಪ್ಪ, ಮುಖಂಡ ರಾದ ಎನ್.ವಿಶ್ವನಾಥ ರಾವ್, ಹಾ.ರಾಮಪ್ಪ, ಡಿ.ನರಸಿಂಹಮೂರ್ತಿ, ರಮಾಕಾಂತ್, ನರಸಿಂಹಚಾರ್, ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಪರಶುರಾಮ್, ನಗರಸಭೆ ಮಾಜಿ ಸದಸ್ಯೆ ನಾಗರತ್ನ, ದಿ.ಗಣೇಶ್‌ರಾವ್ ಕುಟುಂಬ ಸದಸ್ಯರಾದ ಸುಭಾಷ್ ರಾವ್ ಸಿಂಧ್ಯಾ, ಪ್ರವೀಣ್, ನವೀನ್, ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ಗಣೇಶ್ ರಾವ್ ಅವರನ್ನು ಸ್ಮರಿಸಿದರು. ಹರ್ಷಿತ ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿದರು. ನರಸಿಂಹಚಾರ್ ನಿರೂಪಿಸಿ, ವಂದಿಸಿದರು.