ಹಬ್ಬದ ಸಡಗರಕ್ಕೆ ರಸ್ತೆ ಬದಿಗೆ ಬಂದ ಗಣೇಶ

| Published : Sep 05 2024, 12:35 AM IST

ಸಾರಾಂಶ

ಹೊಸದುರ್ಗ ಪಟ್ಟಣದ ಬಿಇಒ ಕಚೇರಿ ಮುಂಬಾಗ ರಸ್ತೆ ಬದಿಯಲ್ಲಿ ವ್ಯಾಪಾರಕ್ಕಗಿ ಇಡಲಾಗಿರುವ ಗಣೇಶನ ಮೂರ್ತಿಗಳು.

ಕನ್ನಡಪ್ರಭ ವಾರ್ತೆ ಹೊಸದುರ್ಗ ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗುತ್ತಿದ್ದಂತೆ ಕಲಾವಿದನ ಕೈಯಲ್ಲಿ ಶೃಂಗಾರಗೊಂಡ ವಿವಿಧ ಮಾದರಿಯ ಗಣಪನ ಮಣ್ಣಿನ ಮೂರ್ತಿಗಳು ರಸ್ತೆ ಬದಿಯಲ್ಲಿ ವ್ಯಾಪಾರಕ್ಕಾಗಿ ಕಾಯುತ್ತಿವೆ.

ಹಬ್ಬಕ್ಕೆ ಎರೆಡು ದಿನ ಇರುವಾಗಲೇ ಪಟ್ಟಣದ ಹುಳಿಯಾರು ವೃತ್ತ, ಹಿರಿಯೂರು ವೃತ್ತ ಹಾಗೂ ಬಿಇಒ ಕಚೇರಿ ಮುಂಬಾಗದಲ್ಲಿ ವ್ಯಾಪಾರಕ್ಕಾಗಿ ಸಿದ್ಧವಾಗಿರುವ ವಿವಿಧ ಬಂಗಿಯಲ್ಲಿರುವ ಗಣೇಶನ ಮೂರ್ತಿಗಳನ್ನು ಕಾಣಬಹುದಾಗಿದೆ.

ಗೌರಿ ಹಬ್ಬ ಮಹಿಳೆಯರಿಗೆ ಸಂಭ್ರಮ ಮೂಡಿಸಿದರೆ ಗಣೇಶ ಯುವಕರಲ್ಲಿ ಸಂಭ್ರಮ ಉಂಟುಮಾಡುತ್ತಾನೆ. ದಶಕಗಳ ಹಿಂದೆ ಗ್ರಾಮದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಕೊಳ್ಳುತ್ತಿದ್ದ ಗಣೇಶ, ಇತ್ತೀಚಿನ ದಿನಗಳಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.

ಕೋವಿಡ್‌ ನಂತರ ಕಳೆದೆರೆಡು ವರ್ಷಗಳಿಂದ ಗಣೇಶ ಮೂರ್ತಿಯ ವ್ಯಾಪಾರ ಸ್ವಲ್ಪ ಚೇತರಿಕೆ ಕಾಣುತ್ತಿದೆಯಾದರೂ ಪಟ್ಟಣದಲ್ಲಿ ಗಣೇಶನ ಮೂರ್ತಿಗಳನ್ನು ವ್ಯಾಪಾರಕ್ಕಾಗಿ ಸ್ಥಳದ ತೊಂದರೆ ಉಂಟಾಗುತ್ತಿದೆ ಎನ್ನುತ್ತಾರೆ ಗಣೇಶ ಮೂರ್ತಿಯ ವ್ಯಾಪಾರಿ ರಾಮಣ್ಣ.

ಪಿಒಪಿ ಗಣೇಶನ ಮೂರ್ತಿಗಳಿಗೆ ಅಧಿಕಾರಿಗಳು ಕಡಿವಾಣ ಹಾಕುತ್ತಿದ್ದು, ಬರಗಾಲದಿಂದ ಕೆರೆಗಳಲ್ಲಿ ನೀರಿಲ್ಲದೆ ಜೇಡಿ ಮಣ್ಣಿನ ಅಭಾವ ವಿರುವ ಕಾರಣದಿಂದ ಮಣ್ಣಿನ ಮೂರ್ತಿಗಳನ್ನು ಮಾಡಲು ಬೆಲೆ ದುಬಾರಿಯಾಗುತ್ತಿದ್ದು ವ್ಯಾಪಾರ ಮಾಡುವುದೇ ಕಷ್ಠವಾಗುತ್ತಿದೆ ಎಂದು ಮತ್ತೋರ್ವ ಗಣೇಶ ವ್ಯಾಪಾರಿ ಕರಿಯಣ್ಣ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂಘಟನೆಗಾಗಿ ಬಂದಂತಹ ಈ ಗಣೇಶ ಉತ್ಸವ ಪ್ರಸ್ತುತ ವ್ಯಕ್ತಿಗಳ, ಜಾತಿಯ ಘನತೆಯನ್ನು ಎತ್ತಿಯಿಡಿಯುವ ಕೆಲಸವಾಗಿರುವುದು ದುರಂತ. ಅಲ್ಲದೆ ಇಂದಿನ ಗಣೇಶ ಉತ್ಸವಗಳಲ್ಲಿ ಡಿಜೆ ಸಂಸ್ಕೃತಿ ಬಂದು ಕುಡಿದು ಕುಣಿಯುವ ಪ್ರವೃತ್ತಿ ಬೆಳೆಯುತ್ತಿದೆ ಇದರಿಂದ ನವ ಕುಡುಕರು ಸೃಷ್ಠಿಯಾಗುತ್ತಾರೆ. ಇದು ಹೋಗಬೇಕು ಉತ್ಸವಗಳಲ್ಲಿ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಗೌರಿ ಗಣೇಶ ಹಬ್ಬದ ಆಚರಣೆಯಿಂದ ನಾಡಿಗೆ ಉತ್ತಮ ಮಳೆ ಬೆಳೆಯಾಗುವ ಮೂಲಕ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಸಿ ಸರ್ವರಲ್ಲೂ ಸಾಮರಸ್ಯದ ಮನೋಭಾವನೆಯನ್ನು ಮೂಡಿಸಲಿ ಎಂಬುದು ಪ್ರಜ್ಞಾವಂತ ಜನರ ಅಭಿಲಾಷೆವಾಗಿದೆ.