Ganesha installed in the mosque for the fourth consecutive year
ಸಾಮರಸ್ಯ ಗ್ರಾಮ ಎಂಬ ಹೆಗ್ಗಳಿಕೆ ಪಾತ್ರವಾದ ತಾಲೂಕಿನ ಸಂದಿಗವಾಡಪಿ.ಎಸ್.ಪಾಟೀಲ್
ಕನ್ನಡಪ್ರಭ ವಾರ್ತೆ ರೋಣಸಾಮರಸ್ಯದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಾಲೂಕಿನ ಸಂದಿಗವಾಡದ ಮುಸ್ಲಿಂ ಯುವಕರು, ಹಿಂದೂ ಯುವಕರ ಜತೆ ಸೇರಿ ಗ್ರಾಮದ ಮಸೀದಿಯೊಳಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಣೇಶ ಹಬ್ಬವನ್ನು ಭಾವೈಕ್ಯತೆ ಹಬ್ಬವನ್ನಾಗಿ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಜಾತಿ ಭೇದವಿಲ್ಲದೇ ಎಲ್ಲರೂ ಒಂದಾಗಿ ಹಬ್ಬ ಆಚರಿಸುತ್ತಿರುವುದು ತಾಲೂಕಿನಲ್ಲಿಯೇ ಮಾದರಿಯಾಗಿದೆ.ತಲೆ ಮೇಲೆ ಹೊತ್ತು ತಂದರು:
ಸೋಮವಾರ ಅದ್ಧೂರಿ ಮೆರವಣಿಗೆ ಮೂಲಕ ಸ್ವತಃ ಮುಸ್ಲಿಂ ಯುವಕರೇ ಗಣೇಶ ಮೂರ್ತಿಯನ್ನು ತಲೆ ಮೇಲೆ ಹೊತ್ತು ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಮುಸ್ಲಿಂ ಯುವಕರೇ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಂ ಯುವಕರ ಜತೆಗೆ ಹಿಂದೂ ಯುವಕರು, ಹಿರಿಯರು ಗಣೇಶ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆ ಪಸರಿಸುತ್ತಿದ್ದಾರೆ.ಗಣೇಶ ಮೂರ್ತಿಯನ್ನು ಕಳೆದ 4 ವರ್ಷದಿಂದ ಈ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸುತ್ತಾ ಬರಲಾಗಿದೆ. ರಂಜಾನ್, ಮೊಹರಂ, ಈದ್ ಮಿಲಾದ ಹಬ್ಬದಲ್ಲಿ ಮುಸ್ಲಿಮರೊಂದಿಗೆ ಹಿಂದೂ ಯುವಕರು, ಮುಖಂಡರು ಮಸೀದಿಯಲ್ಲಿ ನಮಾಜ್ ಮಾಡುತ್ತಾ ಹೀಗೆ ವರ್ಷದುದ್ದಕ್ಕೂ ಮುಸ್ಲಿಂ ಹಬ್ಬದಲ್ಲಿ ಹಿಂದೂ ಯುವಕರು, ಹಿಂದೂ ಹಬ್ಬದಲ್ಲಿ ಮುಸ್ಲಿಂ ಯುವಕರು ಪಾಲ್ಗೊಳ್ಳುವ ಮೂಲಕ ನಮ್ಮಲ್ಲಿ ಜಾತಿ, ಧರ್ಮಗಳ ಬೇಧ-ಭಾವವಿಲ್ಲ, ನಾವೆಲ್ಲರೂ ಒಂದೇ ಎಂದು ಸಾರುತ್ತಾ ಬಂದಿದ್ದಾರೆ. ಯುವಕರಿಗೆ ಗ್ರಾಮದ ಹಿರಿಯರು, ಮುಖಂಡರು ಸಾಥ್ ನೀಡುತ್ತಾರೆ.ಸಂದಿಗವಾಡ ಗ್ರಾಮಸ್ಥರು, ಮುಸ್ಲಿಮರಿಂದ ಗಣೇಶ ಸ್ತೋತ್ರ, ಕಾಯಿ, ಹಣ್ಣು, ಶಾವಗಿ ಪಾಯಸ ನೈವೇದ್ಯ ಮಾಡಲಾಗುತ್ತಿದೆ. ಮುಸ್ಲಿಂ ಯುವಕರೇ ಗಣೇಶ ಸ್ತೋತ್ರಗಳನ್ನು ಹೇಳುತ್ತಿರುವುದು ವಿಶೇಷ, ಅವರೇ ಭಜನಾ ಪದಗಳನ್ನು ಹಾಡುತ್ತಾರೆ. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯಾರೂ ವಿರೋಧಿಸಿಲ್ಲ. ಕಳೆದ ವರ್ಷ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿ ದರ್ಶನಕ್ಕೆ ಹಿಂದಿನ ಗದಗ ಎಸ್.ಪಿ. ಜಗದೀಶ ರೋಹನ್ ಅವರು ತೆರಳಿ ಪೂಜೆ ಸಲ್ಲಿಸಿ, ಗ್ರಾಮಸ್ಥರ ಭಾವೈಕ್ಯತೆ ಕೊಂಡಿದ್ದರು.
ತಿಂಗಳಪೂರ್ತಿ ಜರುಗುವ ಭಜನಾ ಕೈಂಕರ್ಯದಲ್ಲಿ ರಾಜೇಸಾಬ ಗಂಗೂರ ಎಂಬ ಮುಸ್ಲಿಂ ಯುವಕ ತಬಲಾ ಬಾರಿಸುತ್ತಾ ಭಕ್ತಿಗೀತೆಗಳನ್ನು ಹಾಡುತ್ತಾ ಬಂದಿದ್ದಾನೆ. ಇದರಂತೆ ಅನೇಕ ಮುಸ್ಲಿಂ ಯುವಕರು ಶ್ರಾವಣ ಮಾಸದ ಭಜನೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.ಭಾವೈಕ್ಯತೆಗೆ ಸಾಕ್ಷಿ:
ದೀಪಾವಳಿ, ದಸರಾ, ಯುಗಾದಿ, ಮೊಹರಂ, ರಂಜಾನ್, ಈದ್ ಮಿಲಾದ್, ಗಣೇಶ ಹಬ್ಬ ಹೀಗೆ ಗ್ರಾಮದಲ್ಲಿ ಜರುಗುವ ಪ್ರತಿಯೊಂದು ಹಬ್ಬ ಹರಿದಿನ, ಜಾತ್ರೆ, ಉತ್ಸವಗಳನ್ನು ಯಾವುದೇ ಜಾತಿ ಭೇದವಿಲ್ಲದೇ ಇಲ್ಲಿನ ಜನತೆ ಆಚರಿಸಿಕೊಂಡು ಬರುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಇಲ್ಲಿ ಹಿಂದೂ, ಮುಸ್ಲಿಂ ಎಂಬ ಜಾತಿ ಭೇದವಿಲ್ಲ. ಒಂದೇ ತಾಯಿಯ ಮಕ್ಕಳಂತೆ, ಅಣ್ಣ ತಮ್ಮಂದಿರಂತಿದ್ದೇವೆ. ಗಣೇಶ ಹಬ್ಬವಾಗಲಿ, ದಸರಾ, ದೀಪಾವಳಿ, ಯುಗಾದಿ, ರಂಜಾನ್, ಮೊಹರಂ ಆಗಲಿ ಎಲ್ಲ ಹಬ್ಬವನ್ನು ಜಾತ್ಯತೀತವಾಗಿ ಆಚರಿಸುತ್ತಾ ಬರುತ್ತಿದ್ದಾರೆ, ಅದರಂತೆ ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಮುಸ್ಲಿಂ ಯುವಕರು ಪ್ರತಿಷ್ಠಾಪಿಸಿ, ನಿತ್ಯವೂ ಅವರೇ ಪೂಜೆ ಮಾಡುತ್ತಿದ್ದಾರೆ.ಹಬ್ಬ, ಜಾತ್ರೆ, ಉತ್ಸವ ಯಾವುದೇ ಆಚರಣೆ ಇದ್ದರೂ ಸ್ವತಃ ನಾವೇ ಸ್ವಇಚ್ಚೆಯಿಂದ ಪಾಲ್ಗೊಳ್ಳುತ್ತೇವೆ. ನಮಗೆ ಜಾತಿ ಭೇದವಿಲ್ಲ. ಮೂರ್ತಿ ಪ್ರತಿಷ್ಠಾಪನೆಗೆ, ಪೂಜೆಗೆ ಗ್ರಾಮಸ್ಥರೆಲ್ಲರ ಸಹಕಾರವಿದೆ. ನಿತ್ಯವೂ ಗಣೇಶ ಪೂಜೆಯನ್ನು ನಾವೇ ಮಾಡುತ್ತೇವೆ. ಪೂಜೆಯಲ್ಲಿ ಗ್ರಾಮದ ಎಲ್ಲರೂ ಪಾಲ್ಗೊಳ್ಳುತ್ತಾರೆ. ಎಲ್ಲ ಹಬ್ಬವನ್ನು ಒಂದಾಗಿ ಮಾಡುತ್ತಾ ಬಂದಿದ್ದೇವೆ ಎನ್ನುತ್ತಾರೆ ಮುಸ್ಲಿಂ ಯುವಕರು.ನಮ್ಮೂರಾಗ ಜಾತಿ ಭೇದವಿಲ್ಲ
ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಅಣ್ಣ ತಮ್ಮಂದಿರಂತೆ ಇದ್ದೇವೆ. ಗಣೇಶ ಹಬ್ಬವಾಗಲಿ, ದಸರಾ, ದೀಪಾವಳಿ, ಯುಗಾದಿ, ರಂಜಾನ್, ಮೊಹರಂ ಆಗಲಿ ಎಲ್ಲ ಹಬ್ಬವನ್ನು ಜಾತ್ಯತೀತವಾಗಿ ಆಚರಿಸುತ್ತೇವೆ. ಅದರಂತೆ ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಮುಸ್ಲಿಂ ಯುವಕರು ಪ್ರತಿಷ್ಠಾಪಿಸಿ, ನಿತ್ಯವೂ ಅವರೇ ಪೂಜೆ ಮಾಡುತ್ತಿದ್ದಾರೆ. ನಾವೆಲ್ಲರೂ ಮುಸ್ಲಿಂ ಯುವಕರೊಂದಿಗೆ ಗಣೇಶ ಪೂಜೆ, ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎನ್ನುತ್ತಾರೆ ವಿ.ಕೆ. ಪಾಟೀಲ (ಜೈ ಗುರುದೇವ ಸಂತ್ಸಗ ಮುಖ್ಯಸ್ಥ), ತಿಪ್ಪನಗೌಡ ಹುಲ್ಲೂರ, ಮೈಲಾರಪ್ಪ ಗಾಣಿಗೇರ, ಹನುಮಂತಗೌಡ ಹುಲ್ಲೂರ, ತಿಪ್ಪನಗೌಡ ಹುಲ್ಲರ.