ಸಾರಾಂಶ
ಯಲ್ಲಾಪುರ: ಕ್ಷೇತ್ರದ ವೈಶಿಷ್ಯವೆಂದರೆ ಈ ದೇವರಿಗೆ ಎರಡು ಹೆಸರು. ಒಂದು ಸಿದ್ಧಿ ವಿನಾಯಕ, ಇನ್ನೊಂದು ಘಂಟೆ ಗಣಪ. ಸಂಗೀತ ರತ್ನಾಕರದಲ್ಲಿ ಉಲ್ಲೇಖಿಸಿದಂತೆ ಎಲ್ಲ ದೇವರಿಗೂ ಘಂಟೆಯ ನಾದ ಪ್ರಿಯವಾದುದು. ಸ್ಕಂದ ಪುರಾಣದಲ್ಲಿ ಘಂಟೆಯ ಮಹತ್ವದ ಕುರಿತು ಉಲ್ಲೇಖಿಸಲಾಗಿದೆ. ಓಂಕಾರಕ್ಕೆ ಅತ್ಯಂತ ಮಹತ್ವದ ಶಕ್ತಿಯಿದೆ. ಗಣಪತಿಗೆ ಹಾಗಾಗಿಯೇ ಘಂಟೆಯ ನಾದ ಹೆಚ್ಚು ಪ್ರಿಯವಾಗಿದೆ. ಪ್ರಕೃತಿ-ಪುರುಷ ಸಂಬಂಧವೇ ಈ ಘಂಟೆ ಗಣಪತಿಗೆ ಪ್ರೀತ್ಯರ್ಥಕವಾದುದು ಎಂದು ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟ ಹೇಳಿದರು.
ಅವರು ತಾಲೂಕಿನ ಚಂದಗುಳಿಯ ಸಿದ್ಧಿ ವಿನಾಯಕ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಮೊದಲ ದಿನದಂದು ಗಣೇಶನ ಕುರಿತು ಪ್ರವಚನದಲ್ಲಿ ಅತ್ಯಂತ ಸುಂದರವಾಗಿ ವಿವರಿಸಿದರು.ಗಣಪತಿಗೆ ತುಳಸಿಯ ಅರ್ಚನೆ ಮಾಡಬಾರದೆಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ದೇವತಾ ಪೂಜೆಗೆ ಬಳಸುವ ಪಾತ್ರಗಳಿಗೂ ರಾಸಾಯನಿಕ ಬಳಸಿ ಪ್ರಕ್ಷಾಲನ ಮಾಡಬಾರದು. ದೇವಾಲಯಗಳಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ಅಷ್ಟಬಂಧ ನೆರವೇರಿಸಲೇಬೇಕು. ಆ ಸಂದರ್ಭದಲ್ಲಿ ಬ್ರಹ್ಮಕಲಶಾಭಿಷೇಕ, ಕುಂಭಾಭಿಷೇಕ ಮಹತ್ವದ್ದಾಗಿದೆ. ಗಣಪತಿಗೆ ಅತ್ಯಂತ ಪ್ರಧಾನವಾಗಿ ದೇಶಾದ್ಯಂತ ಸಲ್ಲುವ ಗಣಹವನದಲ್ಲಿ ಶಾರದಾ ತಿಲಕದಲ್ಲಿ ಹೇಳಲ್ಪಟ್ಟಂತೆ ಅಷ್ಟದ್ರವ್ಯ ಮಿಶ್ರಣ ಮಾಡಬಾರದು. ಆದರೆ ಇಂದು ಪ್ರಪಂಚದಲ್ಲಿ ಎಲ್ಲ ದೇವಾಲಯಗಳಲ್ಲಿ ಮಿಶ್ರಣ ಮಾಡುವ ಪರಂಪರೆ ಬಂದಿದೆ. ಬಹುಶಃ ಪ್ರಸಾದ ಆಗಲಿ, ಅಷ್ಟದ್ರವ್ಯವಾಗಲಿ ಸ್ವಾದಿಷ್ಟವಾದ ರುಚಿ ನೀಡಲೆಂಬ ಕಾರಣಕ್ಕೆ ಮಾಡಲಾಗುತ್ತಿದೆ. ವಿಶೇಷವಾಗಿ ಹಿಂದೂಗಳ ಮನೆಯಲ್ಲಿಯೂ ಗಣಹವನ ನಡೆದೇ ನಡೆಯುತ್ತದೆ. ಗಣೇಶ ಪುರಾಣದಲ್ಲಿ ಉಲ್ಲೇಖಿಸಿದಂತೆ ಶೈವ, ವೈಷ್ಣವರೆಲ್ಲರೂ ಗಣೇಶನನ್ನು ಆರಾಧಿಸುತ್ತಾರೆ ಎಂದರು.
ನಂತರ ನಡೆದ ಕರ್ಮಬಂಧ (ಭೀಷ್ಮಾರ್ಜುನ) ತಾಳಮದ್ದಲೆಯಲ್ಲಿ ಕೃಷ್ಣನಾಗಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟ, ಭೀಷ್ಮನಾಗಿ ಡಾ.ಪ್ರಭಾಕರ ಜೋಶಿ, ಅರ್ಜುನನಾಗಿ ಎಂ.ಎನ್. ಹೆಗಡೆ ಹಳವಳ್ಳಿ ಸಮರ್ಥವಾಗಿ ಪ್ರೌಢಿಮೆಯುಕ್ತವಾದ ಮಾತುಗಾರಿಕೆಯ ಮೂಲಕ ಜನಮನಸೂರೆಗೊಂಡರು. ಅಷ್ಟೇ ಪ್ರಭಾವಪೂರ್ಣವಾಗಿ ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ಗಣಪತಿ ಭಾಗ್ವತ ಕವಾಳೆ ತಮ್ಮ ನಾದಸಿರಿಯನ್ನು ಮೊಳಗಿಸಿದರೆ, ಶಂಕರ ಭಾಗ್ವತ ಯಲ್ಲಾಪುರ ಮೃದಂಗದ ನಿನಾದದ ಮೂಲಕ ರಂಜಿಸಿದರು.