ಸೌಹಾರ್ದತೆಗೆ ಮಾದರಿಯಾದ ಗಣೇಶಮೂರ್ತಿ ವಿಸರ್ಜನೆ, ಈದ್‌ಮಿಲಾದ್

| Published : Sep 17 2024, 12:46 AM IST

ಸೌಹಾರ್ದತೆಗೆ ಮಾದರಿಯಾದ ಗಣೇಶಮೂರ್ತಿ ವಿಸರ್ಜನೆ, ಈದ್‌ಮಿಲಾದ್
Share this Article
  • FB
  • TW
  • Linkdin
  • Email

ಸಾರಾಂಶ

7ನೇ ಹೊಸಕೋಟೆಯಲ್ಲಿ ಮಾದರಿ ಮತ್ತು ಶ್ಲಾಘನೀಯ ಕಾರ್ಯಕ್ರಮ ನಡೆದು ಸೌಹಾರ್ದ ಮತ್ತು ಬೆಸುಗೆಗೆ ಸಾಕ್ಷಿಯಾಗಿದೆ. ಎರಡು ಸಮುದಾಯದ ಜನರು ವಿವಿಧತೆಯಲ್ಲಿ ಏಕತೆ ಬಿಂಬಿಸುವ ಮೂಲಕ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಪರಸ್ಪರ ಭ್ರಾತೃತ್ವವನ್ನು ವೃದ್ಧಿಸುವ ನಂಬಿಕೆ ಮತ್ತು ಆಚಾರ ವಿಚಾರಗಳನ್ನು ಸಮಾನವಾಗಿ ಗೌರವಿಸುವ ಸಮಾನ ಮನಸ್ಕರಿಂದ ಸುಂಟಿಕೊಪ್ಪ ಹೋಬಳಿಯ 7ನೇ ಹೊಸಕೋಟೆಯಲ್ಲಿ ಒಂದು ಮಾದರಿ ಮತ್ತು ಶ್ಲಾಘನೀಯ ಕಾರ್ಯಕ್ರಮ ನಡೆದು ಸೌಹಾರ್ದ ಮತ್ತು ಬೆಸುಗೆಗೆ ಸಾಕ್ಷಿಯಾಗಿದೆ.

7ನೇ ಹೊಸಕೋಟೆಯು ಶ್ರೀಮಹಾಗಣಪತಿ ದೇವಸ್ಥಾನ ಹಾಗೂ ಮಸೀದಿ ಮತ್ತು ಚರ್ಚ್ ಕೆಲವೇ ಹೆಜ್ಜೆಗಳ ಅಂತರ ಹೊಂದಿದೆ. ಇಲ್ಲಿ ಶ್ರೀ ಗಣೇಶೋತ್ಸವ ಅತ್ಯಂತ ಸಂಭ್ರಮವಾಗಿ ನಡೆದು ಭಾನುವಾರ ಸಂಜೆ ಗಣೇಶಮೂರ್ತಿ ವಿಸರ್ಜನೆ ಸಂದರ್ಭ ಮುಸ್ಲಿಂ ಸಮುದಾಯದ ನೂರಾರು ಯುವಕರು ಮೆರವಣಿಗೆಯುದ್ದಕ್ಕೂ ಸಿಹಿ ತಿಂಡಿ ಮತ್ತು ತಂಪು ಪಾನೀಯವನ್ನು ಸರಬರಾಜು ಮಾಡುವ ಮೂಲಕ ಮೆರವಣಿಗೆಗೆ ಸಾಥ್‌ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಇದನ್ನು ಅತ್ಯಂತ ಆತ್ಮೀಯವಾಗಿ ಸ್ವೀಕರಿಸಿದ ಹಿಂದೂ ಬಾಂಧವರು ಸೋಮವಾರ ಈದ್‌ಮಿಲಾದ್ ಮೆರವಣಿಗೆಯ ಸಂದರ್ಭ ಸಿಹಿ ತಿಂಡಿ ಮತ್ತು ತಂಪು ಪಾನಿಯವನ್ನು ಸರಬರಾಜು ಮಾಡಿ ಸ್ನೇಹದ ಬೇಸುಗೆಯನ್ನು ಗಟ್ಟಿಗೊಳಿಸಿದ್ದಾರೆ. 7ನೇ ಹೊಸಕೋಟೆಯಲ್ಲಿ ನಡೆದ ಈ ಎರಡು ಕಾರ್ಯಕ್ರಮಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರಿ ಪ್ರಮಾಣದಲ್ಲಿ ಮೆಚ್ಚುಗೆಯ ಸಂದೇಶಗಳು ಹರಿದು ಬರುತ್ತಿವೆ. ಈ ರೀತಿಯ ಧರ್ಮ ಮತ್ತು ಜಾತ್ಯತೀತ ನೆಲೆಗಟ್ಟಿನಲ್ಲಿ ಪರಸ್ಪರ ನಂಬಿಕೆ ಭಾವನೆಗಳನ್ನು ಗೌರವಿಸಿದಾಗ ನಾವು ರಾಮರಾಜ್ಯದ ರೂವಾರಿಗಳಾಗುತ್ತೇವೆ. ಇಂತಹ ಒಳ್ಳೆಯ ಕೆಲಸ ಇನ್ನು ಅನೇಕ ಒಳ್ಳೆಯ ಮನಸ್ಸುಗಳಿಗೆ ಪ್ರೇರಣೆ ನೀಡಿ ಸುಖಿ ಮತ್ತು ಸಮೃದ್ಧಿಯ ಸಮಾಜವನ್ನು ಕಟ್ಟುವಲ್ಲಿ ಪಣತೊಡಲು ಕೈಮರವಾಗಲೆಂದು ಎರಡು ಸಮುದಾಯದ ಜನರು ಆಶಯ ವ್ಯಕ್ತಪಡಿಸಿದ್ದಾರೆ.

ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸಿದ ಕೋಮುಸೌಹಾರ್ದತೆಯನ್ನು ಸಾರಿದ ಅನೇಕ ಪ್ರದೇಶಗಳಲ್ಲಿ ಕೊಡಗು ಒಂದು. ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವ ಪ್ರಯತ್ನ ಇಲ್ಲಿ ಸದಾ ಜಾರಿಯಲ್ಲಿದೆ. ದುರಾದೃಷ್ಟವಶಾತ್ ಕೆಲವು ಕಾಣದ ಕೈಗಳು ಪಟ್ಟಭದ್ರ ಹಿತಾಸಕ್ತಿಗಳಿಂದ ಸರ್ವಜನಾಂಗದ ಶಾಂತಿಯ ತೋಟದ ಆಶಯಕ್ಕೆ ಭಂಗ ಬರುವುದು ಇದೆ.

ಸಾಮಾನ್ಯವಾಗಿ ಕೋಮು ಸೌಹಾರ್ದತೆಯ ಸುದ್ಧಿಗಳಿಗೆ ಬದಲಾಗಿ ಕೋಮುಗಲಭೆ ಅಥವಾ ಸಾರ್ವಜನಿಕ ಶಾಂತಿ ಭಂಗದ ಸುದ್ದಿಗಳನ್ನು ಮತ್ತು ಯಾವುದೇ ಹಬ್ಬಹರಿದಿನಗಳು ಎದುರಾದರೆ ಒಬ್ಬರಿಂದೊಬ್ಬರು ಸಂಶಯಿಸುವಂತಹ ವಾತಾವರಣದಲ್ಲಿ ಇದ್ದೇವೆ. ಇಂತಹ ಕಲುಷಿತ ವಾತಾವರಣ ಹೋಗಲಾಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ.