ಅಮಾಯಕ ಯುವಕರನ್ನು ಮಸೀದಿಯ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಭಟ್ಕಳ: ತಾಲೂಕಿನ ಮುಟ್ಟಳ್ಳಿಯ ತಲಾಂದ ಸಾರ್ವಜನಿಕ ಗಣೇಶನ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿಯ ಕಿಟಕಿ ಗಾಜು ಒಡೆದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿದೆ.

ಅಮಾಯಕ ಯುವಕರನ್ನು ಮಸೀದಿಯ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಒತ್ತಡದ ಮೇರೆಗೆ ಅಮಾಯಕ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ, ಅಮಾಯಕ ಯುವಕರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಿರುವುದು ಖಂಡನೀಯ. ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ಅಮಾಯಕರನ್ನು ವಶಕ್ಕೆ ಪಡೆದಿರುವುದು ಖಂಡನೀಯ ಎಂದರು.

ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಕಲ್ಲು ತೂರಿರುವುದು ಮಕ್ಕಳು ಎಂದು ಹೇಳುತ್ತಿದ್ದೀರಿ. ಇತ್ತೀಚಿನ ಕೆಲವು ಘಟನೆಗಳು ಮಕ್ಕಳಿಂದಲೇ ಆಗಿದೆ. ಮಕ್ಕಳ ಪಾಲಕರ ಮೇಲೆ ಕ್ರಮ ಕೈಗೊಳ್ಳಬೇಕು. ಎರಡೂ ಕಡೆಯವರನ್ನು ಕರೆದು ಮಾತುಕತೆ ಮಾಡುವುದನ್ನು ಬಿಟ್ಟು ಪೊಲೀಸರು ತರಾತುರಿಯಲ್ಲಿ ಯಾರದ್ದೋ ಒತ್ತಡಕ್ಕೆ ಮಣಿದು ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.

ಪ್ರಮುಖರಾದ ಈಶ್ವರ ನಾಯ್ಕ, ಜಯಂತ ನಾಯ್ಕ, ಶ್ರೀಕಾಂತ ನಾಯ್ಕ, ರಾಮಕೃಷ್ಣ ನಾಯ್ಕ ಮಾತನಾಡಿ, ವಶಕ್ಕೆ ಪಡೆದವರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ತೂರಿರುವುದು ಖಂಡನೀಯ. ಎಲ್ಲ ಘಟನೆಗಳು ಮಾಡುವುದು ಮಕ್ಕಳು ಎಂದಾದರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದರು.

ಇನ್ಸಪೆಕ್ಟರ್ ದಿವಾಕರ ಅವರು ಆಕ್ರೋಶಿತರನ್ನು ಸಮಾಧಾನಿಸಿ, ಮೆರವಣಿಗೆ ಮೇಲೆ ಕಲ್ಲು ಎಸೆದಿರುವುದು ನಿಜ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ದೂರು ನೀಡಿದ್ದರೆ, ಮಸೀದಿಯ ಕಿಟಕಿಯ ಗಾಜು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿಯವರು ದೂರು ನೀಡಿದ್ದಾರೆ. ಎರಡೂ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದೇವೆ. ಎರಡೂ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ತಂಡ ಕೂಡ ರಚಿಸಲಾಗಿದೆ ಎಂದರು.

ತಮ್ಮ ಅಮಾಯಕ ಮಕ್ಕಳನ್ನು ವಶಕ್ಕೆ ಪಡೆದ ಬಗ್ಗೆ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಕೆಲಹೊತ್ತು ಠಾಣೆ ಮುಂದೆ ಮಹಿಳೆಯುರು ಧರಣಿ ಕುಳಿತರು. ಮುರಿನಕಟ್ಟೆ ಪ್ರಕರಣ ಆದ ಮೇಲೆ ಭಟ್ಕಳದಲ್ಲಿ ಪದೇ ಪದೇ ಇಂತಹ ಘಟನೆ ನಡೆಯುತ್ತಿದೆ. ಮುರಿನಕಟ್ಟೆ ವಿವಾದ ಬಗೆಹರಿಸಬೇಕು ಎಂದು ಒತ್ತಾಯಿಸಿದ ಹಿಂದೂ ಕಾರ್ಯಕರ್ತರು ಗಣೇಶೋತ್ಸವ ಮೆರವಣಿಗೆ ಮೇಲೆ ಇಂತಹ ಕಲ್ಲು ತೂರಾಟ ನಡೆಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಯತ್ನಿಸಿದ್ದಾರೆ. ಕಲ್ಲು ತೂರಾಟ ಮಕ್ಕಳು ಮಾಡಿದ್ದರೂ ಪಾಲಕರ ಮೇಲೆ ಕ್ರಮ ಕೈಗೊಳ್ಳಬೇಕು. ಇದರ ಹಿಂದಿನ ಕೈವಾಡದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾತ್ರಿ ಮುಸ್ಲಿಮರ ಪ್ರತಿಭಟನೆ

ಬುಧವಾರ ರಾತ್ರಿ ಗುಳ್ಮಿಯ ಇಸ್ಮಾಯಿಲ್ ಸುನ್ನೀ ಜಾಮೀಯಾ ಮಸೀದಿಯ ಹಿಂಭಾಗದ ಕಿಟಕಿ ಗಾಜು ಒಡೆಯಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮುಸ್ಲಿಮರು ನಗರ ಠಾಣೆ ಮುಂದೆ ಜಮಾಯಿಸಿ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ, ದೂರು ದಾಖಲಿಸಿದರು. ಸ್ಥಳಕ್ಕೆ ಎಸ್ ಪಿ ದೀಪನ್ ಭೇಟಿ

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್ಪಿ ದೀಪನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಎರಡೂ ಕಡೆಯವರ ಮಾತನ್ನು ಕೇಳಿದರು. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ 3 ವಿಶೇಷ ತಂಡ ರಚಿಸಲಾಗಿದೆ. ಆರೋಪಿತರ ಪತ್ತೆ ಕ್ರಮ ಕೈಗೊಳ್ಳಲಾಗಿದೆ. ಭಟ್ಕಳದ ಪರಿಸ್ಥಿತಿ ಶಾಂತವಾಗಿದೆ. ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಫೋಠೊ ಪೈಲ್ : 17ಬಿಕೆಲ್2

ಅಮಾಯಕ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಬಗ್ಗೆ ಬಿಜೆಪಿ, ಹಿಂದೂಪರ ಕಾರ್ಯಕರ್ತರು ನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಇನ್ಸಪೆಕ್ಟರ್ ಬಳಿ ಮಾತನಾಡಿದರು.17ಬಿಕೆಲ್3

ಅಮಾಯಕ ಯುವಕರನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸರ ಬಳಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿರುವುದು.17ಬಿಕೆಲ್4

ಭಟ್ಕಳ ನಗರ ಠಾಣೆ ಮುಂದೆ ಬಿಜೆಪಿ, ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು.