ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಹಿತಿ ಕೆ.ಎನ್.ಗಣೇಶಯ್ಯ ಅವರು ವಿಶಿಷ್ಟವಾದ ವಸ್ತುವೊಂದನ್ನು ಆಯ್ಕೆ ಮಾಡಿಕೊಂಡು ಅದನ್ನು ಪತ್ತೇದಾರಿ ಕಾದಂಬರಿಯ ರೀತಿ ಓದುಗರಿಗೆ ಅದ್ಭುತವಾಗಿ ತಲುಪಿಸುತ್ತಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ವಾಂಸ ಡಾ। ದೇವರಕೊಂಡಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ। ಕೆ.ಎನ್.ಗಣೇಶಯ್ಯ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಗಣೇಶಯ್ಯ ಅವರು ವಿಶಿಷ್ಟ ವೈಜ್ಞಾನಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಪತ್ತೇದಾರಿ ಕಾದಂಬರಿಯ ರೂಪ ಕೊಡುವುದರಿಂದ ಕಾತರದಿಂದ ಓದಲು ಸಾಧ್ಯವಾಗುತ್ತದೆ. ನಿರೂಪಣೆ ಅದ್ಭುತವಾಗಿರುತ್ತದೆ ಎಂದರು.
ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಮಾತನಾಡಿ, ತಮ್ಮಂತಹ ಓದುಗನನ್ನು ಸೆಳೆಯುವಂತಹ ವಸ್ತು ಹಾಗೂ ದ್ರವ್ಯ ಗಣೇಶಯ್ಯ ಅವರ ಬರಹಗಳಲ್ಲಿ ಇದ್ದೇ ಇರುತ್ತದೆ. ‘ಹೊಕ್ಕಳ ಮೆದುಳು’ ಕಾದಂಬರಿಯಲ್ಲಿ ಗಣೇಶಯ್ಯ ಅವರಿಂದ ಏನನ್ನು ನಿರೀಕ್ಷಿಸುತ್ತಿರೋ ಎಲ್ಲವೂ ಇದೆ. ಒಂದೇ ಗುಕ್ಕಿಗೆ ಕಾದಂಬರಿ ಓದಿಬಿಡಬಹುದು. ಎಷ್ಟು ಬೇಕೋ ಅಷ್ಟನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.‘ಇಮ್ಮಡಿ ಮಡಿಲು’ ಕಥಾಸಂಕಲನ ಮತ್ತು ‘ಅಜ್ಞಾತ ಚಿತ್ತದತ್ತ ಒಂದು ಹೆಜ್ಜೆ’ ಲೇಖನ ಸಂಕಲನದ ಕುರಿತು ಮಾತನಾಡಿದ ಕಥೆಗಾರ ಕರ್ಕಿ ಕೃಷ್ಣಮೂರ್ತಿ, ಗಣೇಶಯ್ಯ ಅವರ ಪುಸ್ತಕಗಳಲ್ಲಿ ವಿಜ್ಞಾನವಿದ್ದರೂ ವಿಜ್ಞಾನಬರಹವಲ್ಲ, ಇತಿಹಾಸವಿದ್ದರೂ ಐತಿಹಾಸಿಕ ಕತೆ-ಕಾದಂಬರಿಯಲ್ಲ. ಸಸ್ಯಲೋಕದ ವಿಸ್ಮಯ, ಪ್ರಾಣಿಲೋಕದ ದ್ವಂದ್ವಗಳಿವೆ. ಆಧ್ಯಾತ್ಮವಿದೆ, ಅಂತರಾತ್ಮವಿದೆ. ವ್ಯಕ್ತಿಗಳ ವಿಚಾರಕ್ಕೆ ಬಂದರೆ ಅಕ್ಕಮಹಾದೇವಿ, ಬಸವಣ್ಣ, ಕುವೆಂಪು, ಶಿವರಾಮ ಕಾರಂತರು ಇದ್ದಾರೆ. ಹೀಗೆ ಅನೇಕ ವಿಭಿನ್ನ, ವಿಶಿಷ್ಟವಾದ ವಿಷಯಗಳ ಮಿಶ್ರಣ ಅಥವಾ ಒಂದು ಸಂಗ್ರಹ ಈ ಪುಸ್ತಕಗಳಲ್ಲಿ ಸಿಗುತ್ತದೆ ಎಂದು ವಿವರಿಸಿದರು.
ಜೋಯಿಸ್ ಕಲಾ ಕೇಂದ್ರದ ಕಲಾವಿದೆಯರು ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಲೇಖಕ ಗಣೇಶಯ್ಯ ಉಪಸ್ಥಿತರಿದ್ದರು.