ಸೂರ್ಯ-ಚಂದ್ರ ಇರುವರೆಗೂ ಗಣೇಶೋತ್ಸವ ನಿಲ್ಲಲ್ಲ

| Published : Sep 22 2024, 01:50 AM IST

ಸಾರಾಂಶ

ತುಮಕೂರು: ನಗರದ ಬಿ.ಜಿ.ಎಸ್. ವೃತ್ತದಲ್ಲಿರುವ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನಾಗರಕಟ್ಟೆ ದೇವಾಲಯದ ಮುಂಭಾದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್, ವಿವಿಧ ಮಠಾಧೀಶರು ಗಣೇಶೋತ್ಸವಕ್ಕೆ ಚಾಲನೆ ನೀಡಿದರು.

ತುಮಕೂರು: ನಗರದ ಬಿ.ಜಿ.ಎಸ್. ವೃತ್ತದಲ್ಲಿರುವ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನಾಗರಕಟ್ಟೆ ದೇವಾಲಯದ ಮುಂಭಾದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್, ವಿವಿಧ ಮಠಾಧೀಶರು ಗಣೇಶೋತ್ಸವಕ್ಕೆ ಚಾಲನೆ ನೀಡಿದರು.

ಬಿ.ಜಿ.ಎಸ್. ವೃತ್ತದಲ್ಲಿ ಹಿಂದೂ ಮಹಾಗಣೇಶ ಮೂರ್ತಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಗಣೇಶ ಮೂರ್ತಿ ಪೂಜೆ ಸಲ್ಲಿಸಿ ಮಾತನಾಡಿ, ಗಣೇಶೋತ್ಸವ ಈ ದೇಶದ ಸತ್ ಸಂಪ್ರದಾಯ. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರನಾಥ ತಿಲಕ್ ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಸ್ವಾತಂತ್ರ್ಯೋತ್ಸವ ಚಳವಳಿಗೆ ನಾಂದಿ ಹಾಡಿದ್ದರು ಎಂದರು.

ಸೂರ್ಯ-ಚಂದ್ರ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಹಿಂದೂ ರಾಷ್ಟ್ರದಲ್ಲಿ ಗಣೇಶೋತ್ಸವಗಳು ನಡೆಯುತ್ತವೆ. ತುಮಕೂರು ನಗರದಲ್ಲಿ ಅಭೂತಪೂರ್ವ ಗಣೇಶೋತ್ಸವ ಮೆರವಣಿಗೆ ನಡೆದಿದೆ. ಎಲ್ಲರೂ ಒಟ್ಟಾಗಿ ಸೇರಿ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಟವೀ ಶಿವಲಿಂಗ ಸ್ವಾಮೀಜಿ, ಕಾರದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಕೋರಿ ಮಂಜಣ್ಣ, ಜಿ.ಕೆ. ಶ್ರೀನಿವಾಸ್, ಟಿ.ಬಿ. ಶೇಖರ್, ಡಾ. ಪರಮೇಶ್, ರವಿಶಂಕರ್ ಹೆಬ್ಬಾಕ, ಮಂಜು ಭಾರ್ಗವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ಟೌನ್‌ಹಾಲ್ ವೃತ್ತದಿಂದ ಲಕ್ಕಪ್ಪ ವೃತ್ತ, ಜೆ.ಸಿ. ರಸ್ತೆ, ಮಂಡಿಪೇಟೆ ವೃತ್ತ, ಸ್ವಾತಂತ್ರ್ಯ ಚೌಕ, ಅಶೋಕ ರಸ್ತೆ ಮುಖೇನ ಸಾಗಿದ ಗಣೇಶೋತ್ಸವದ ಮೆರವಣಿಗೆಯು ಮತ್ತೆ ಬಿ.ಜಿ.ಎಸ್. ವೃತ್ತದ ಮೂಲಕ ಎಂ.ಜಿ. ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಆಂಜನೇಯಸ್ವಾಮಿ ವೃತ್ತ, ಗಾರ್ಡನ್ ರಸ್ತೆ, ಕೆ.ಎನ್.ಎಸ್. ಕಲ್ಯಾಣಿಗೆ ತಲುಪಿತು. ನಂತರ ಗಣೇಶಮೂರ್ತಿಯನ್ನು ಕಲ್ಯಾಣಿಯಲ್ಲಿ ಭಕ್ತರ ಅಬ್ಬರದ ಜೈಕಾರಗಳೊಂದಿಗೆ ವಿಸರ್ಜಿಸಲಾಯಿತು. ಗಣೇಶೋತ್ಸವದ ಮೆರವಣಿಗೆ ಸಾಗಿದ ಉದ್ದಕ್ಕೂ ಬಜರಂಗದಳದ ಕಾರ್ಯಕರ್ತರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿ ಹಾಕಲಾಗಿದ್ದ ಡಿ.ಜೆ. ಸೌಂಡ್‌ಗೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಹಿಂದೂ ಮಹಾಗಣಪತಿ ಮೂರ್ತಿಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡು ಬಂತು.

ಗಣೇಶೋತ್ಸವದ ಶೋಭಯಾತ್ರೆಯ ಉದ್ದಕ್ಕೂ ರಾಧೆ ಕೃಷ್ಣ ಕೋಲಾಟ, ಜಟಾಯು ಕುಣಿತ, ನಾಸಿಕ್ ಡೋಲ್, ವೀರ ಸಾವರ್ಕರ್ ಪ್ರತಿಮೆ, ಛತ್ರಪತಿ ಶಿವಾಜಿ ಮಹಾರಾಜ್, ವಾಯುಪುತ್ರ ಆಂಜನೇಯ ಟ್ಯಾಬ್ಲೋ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು. ಗಣೇಶೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನೋತ್ಸವದ ಮೆರವಣಿಗೆ ಸಾಗುತ್ತಿದ್ದಂತೆ ವೇಳೆ ಮುಸ್ಲಿಂ ಬಾಂಧವರು ದರ್ಗಾ ಬಳಿ ಗಣೇಶಮೂರ್ತಿಗೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿ, ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಭಕ್ತರಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು. ಇಸ್ಮಾಯಲ್ ಫಯಾಜ್, ಉಬೇದ್ ಜಿಯಾದಾಹಿ ಮತ್ತಿತರರು ಪಾಲ್ಗೊಂಡಿದ್ದರು.

ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು

ಟೌನ್‌ಹಾಲ್ ವೃತ್ತದಲ್ಲಿ ಗಣೇಶೋತ್ಸವದ ಮೆರವಣಿಗೆ ಆರಂಭವಾಗುತ್ತಿದ್ದಂತೆ ಮುಸ್ಲಿಂ ಬಾಂಧವರು ಸಹ ದರ್ಗಾ ಬಳಿ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿ, ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಗೆ ಭಕ್ತರಿಗೆ ಕುಡಿಯುವ ನೀರು ಕೊಡುವ ಮೂಲಕ ಭಾವೈಕ್ಯತೆ ಮೆರೆದರು.

ರಘು ಪೊಲೀಸರ ವಶಕ್ಕೆ

ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭಾಷಣ ಮಾಡಲು ಮುಂದಾಗಿದ್ದ ಹಿಂದೂ ಮುಖಂಡ ಹಾಗೂ ಭಜರಂಗದಳ ಹಾಸನ ಜಿಲ್ಲಾಧ್ಯಕ್ಷ ರಘು ಸಕಲೇಶಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮತಿ ನೀಡುವ ವೇಳೆಯೇ ಯಾವುದೇ ಭಾಷಣ ಮಾಡದಂತೆ ಪೊಲೀಸರು ಸೂಚಿಸಿದ್ದರು. ಆದರೆ ರಘು ಸಕಲೇಶಪುರ ಭಾಷಣ ಮಾಡಲು ಮುಂದಾಗಿದ್ದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.