ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಗೌರಿ, ಗಣೇಶೋತ್ಸವ ಸಂಭ್ರಮದಿಂದ ಜರುಗಿತು. ಚೌತಿ ಅಂಗವಾಗಿ ಕೊಡಗಿನ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿತು.

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಗೌರಿ, ಗಣೇಶೋತ್ಸವ ಸಂಭ್ರಮದಿಂದ ಜರುಗಿತು. ಚೌತಿ ಅಂಗವಾಗಿ ಕೊಡಗಿನ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿತು. ಜಿಲ್ಲೆಯ ಸುಮಾರು 644 ಕಡೆಗಳಲ್ಲಿ ಸಾರ್ವಜನಿಕ ಗೌರಿ ಗಣೇಶ ಮೂರ್ತಿಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಪೈಕಿ ಸುಮಾರು 150ಕ್ಕೂ ಕಡೆಗಳಲ್ಲಿ ಮೊದಲ ದಿನವೇ ದೇವರ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಮಡಿಕೇರಿ ನಗರದಲ್ಲಿ ಶಾಂತಿನಿಕೇತನ, ಅಶೋಕ್‌ ಪುರ, ಕೋಟೆ ಮಹಾ ಗಣಪತಿ, ಪುಟಾಣಿನಗರ, ಹಿಂದೂ ಯುವ ಶಕ್ತಿ, ದೇಚೂರು, ಕೆಇಬಿ, ನಗರಸಭೆ, ಓಂಕಾರ್ ಯುವ ವೇದಿಕೆ, ಚೈನ್ ಗೇಟ್, ಖಾಸಗಿ ಬಸ್ ನಿಲ್ದಾಣದ ಸೇರಿದಂತೆ ವಿವಿಧೆಡೆ ಗೌರಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ವಿರಾಜಪೇಟೆಯ ಗೌರಿ ಗಣೇಶೋತ್ಸವ ಇತಿಹಾಸ ಪ್ರಸಿದ್ಧವಾಗಿದ್ದು, ಸೊಮವಾರ ಸುಮಾರು 21 ಸಮಿತಿಗಳಿಂದ ವಿವಿಧ ಕಡೆಗಳಲ್ಲಿ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಿಜೆ ಅಬ್ಬರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗೆ ಡಿಜೆ ಹಾಗೂ ಧ್ವನಿ ವರ್ಧಕ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಗೌರಿ, ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿರುವ ಸ್ಥಳಗಳಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರು.30 ಲಕ್ಷದ ಬೆಳ್ಳಿಯ ಅಲಂಕಾರ : ಮಡಿಕೇರಿಯ ಕೋಹಿನೂರು ರಸ್ತೆ ಬಳಿ ಹಿಂದೂ ಯುವ ಶಕ್ತಿ ಸಮಿತಿ ವತಿಯಿಂದ 39ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಸುಮಾರು 30 ಲಕ್ಷ ರುಪಾಯಿ ಮೌಲ್ಯದ ಬೆಳ್ಳಿಯ ಕಿರೀಟ ಹಾಗೂ ಆಭರಣಗಳಲ್ಲಿ ಗಣಪತಿಗೆ ಅಲಂಕಾರ ಮಾಡಲಾಗಿದ್ದು, ಕೊಡಗಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಪೈಕಿ ಶ್ರೀಮಂತ ಗಣಪತಿ ಎನಿಸಿಕೊಂಡಿದೆ.