ಬಣ್ಣಬಣ್ಣದ ವಿದ್ಯುತ್ ದೀಪಗಳು, ಹೂವಿನ ಅಲಂಕಾರ ಮತ್ತು ವಿವಿಧ ಕಲಾಕೃತಿಗಳಿಂದ ಗಣಪತಿ ಮಂಟಪಗಳು ಕಂಗೊಳಿಸುತ್ತಿವೆ.

ಬಳ್ಳಾರಿ: ಗಣೇಶೋತ್ಸವ ಎಂದರೆ ಭಕ್ತಿ, ಸಂಭ್ರಮ, ಸಡಗರದ ಸಂಗಮ. ವಿಘ್ನ ವಿನಾಯಕನನ್ನು ಪ್ರತಿಷ್ಠಾಪಿಸಿ ಪೂಜಿಸುವುದಷ್ಟೇ ಅಲ್ಲದೆ, ತಮ್ಮ ಕಲ್ಪನೆ, ಭಕ್ತಿ ಮತ್ತು ಸೃಜನಶೀಲತೆಗೆ ರೂಪ ನೀಡುವ ಮೂಲಕ ಗಣೇಶೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಪರಿಪಾಠವೂ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಬಾರಿಯೂ ಬಳ್ಳಾರಿ ನಗರದಲ್ಲಿ ಒಂದಕ್ಕಿಂತ ಒಂದು ಭಿನ್ನ ವಿನ್ಯಾಸದ ಗಣಪತಿ ಮೂರ್ತಿಗಳು ಹಾಗೂ ಅಲಂಕಾರಗಳು ಜನರ ಗಮನ ಸೆಳೆಯುತ್ತಿವೆ.

ನಗರದ ವಿವಿಧ ಬಡಾವಣೆ, ಓಣಿ, ಪ್ರಮುಖ ವೃತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳು ಭಕ್ತರ ಕಣ್ಮನ ಸೆಳೆಯುತ್ತಿದ್ದು, ಸಂಜೆ ವೇಳೆಯಲ್ಲಿ ಕುಟುಂಬ ಸಮೇತರಾಗಿ ಗಣಪತಿ ದರ್ಶನಕ್ಕೆ ಜನರು ಆಗಮಿಸುತ್ತಿದ್ದಾರೆ. ಗಣಪತಿ ಮೂರ್ತಿಯ ಜತೆಗೆ ನಿರ್ಮಿಸಿರುವ ವಿಭಿನ್ನ ಹಿನ್ನೆಲೆ, ಕಲಾತ್ಮಕ ಪ್ರತಿಕೃತಿಗಳು, ಧಾರ್ಮಿಕ ಕ್ಷೇತ್ರಗಳ ಮಾದರಿಗಳು ಈ ಬಾರಿಯ ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ತಂದಿವೆ.

ಇಲ್ಲಿನ ಗಾಂಧಿ ಭವನದಲ್ಲಿ ಹಿಂದೂ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಿರುವ 47ನೇ ವರ್ಷದ ಮಹಾಗಣಪತಿ, ಮಹಾನಗರ ಪಾಲಿಕೆಯ ನೌಕರರ ಸಂಘದಿಂದ ನಿರ್ಮಿತ ಪರಿಸರ ಪ್ರೇಮಿ ಗಣೇಶ, ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಸೆಂಟನರಿ ಹಾಲ್‌ನಲ್ಲಿ ರಾಷ್ಟ್ರೀಯ ಭಜರಂಗ ದಳದಿಂದ ನಿರ್ಮಿಸಿರುವ ಹಿಂದೂ ಮಹಾಗಣಪತಿ, ಗಜಮುಖ ಫ್ರೆಂಡ್ಸ್‌ ಅಸೋಸಿಯೇಷನ್ ವತಿಯಿಂದ ನಿರ್ಮಿಸಿರುವ ಉಗ್ರ ನರಸಿಂಹ ಗಣಪತಿ, ಪಾರ್ವತಿನಗರದ ಎರಡನೇ ಲಿಂಕ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಕೇದಾರನಾಥ ಮಾದರಿಯ ಗಣೇಶ, ತಾಳೂರು ರಸ್ತೆಯ ಶ್ರೀ ಬಾಲ ವಿನಾಯಕ ಮಿತ್ರ ಮಂಡಳಿಯ 42ನೇ ವರ್ಷದ ಗಣೋತ್ಸವದಲ್ಲಿ ಮರಗಳನ್ನು ಕಡಿದು ಪರಿಸರ ನಾಶ ಮಾಡದಂತೆ ತಡೆಯೊಡ್ಡುವ ಗಣಪಗಳು ಗಮನ ಸೆಳೆಯುತ್ತಿವೆ.

ವಿದ್ಯುತ್ ದೀಪಗಳ ಅಲಂಕಾರ: ಬಣ್ಣಬಣ್ಣದ ವಿದ್ಯುತ್ ದೀಪಗಳು, ಹೂವಿನ ಅಲಂಕಾರ ಮತ್ತು ವಿವಿಧ ಕಲಾಕೃತಿಗಳಿಂದ ಗಣಪತಿ ಮಂಟಪಗಳು ಕಂಗೊಳಿಸುತ್ತಿವೆ. ಸಂಜೆ ನಂತರ ವಿದ್ಯುತ್ ದೀಪಗಳ ಬೆಳಕಿನಲ್ಲಿ ಮಂಟಪಗಳ ಸೌಂದರ್ಯ ಮತ್ತಷ್ಟು ಹೆಚ್ಚುತ್ತಿದ್ದು, ಜನರು ಕುಟುಂಬ ಸಮೇತರಾಗಿ ದರ್ಶನಕ್ಕೆ ಬರುತ್ತಿದ್ದಾರೆ.

ಧಾರ್ಮಿಕ ವಿಷಯಗಳ ಜತೆಗೆ ಇತಿಹಾಸ ಮತ್ತು ದೇಶಭಕ್ತಿಯ ಸಂದೇಶ ಸಾರುವ ರೀತಿಯಲ್ಲಿಯೂ ಗಣಪತಿ ಮಂಟಪ ಸಿದ್ಧಪಡಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮಾದರಿ ಹಾಗೂ ಅವರ ಶೌರ್ಯ ಪ್ರತಿಬಿಂಬಿಸುವ ಅಲಂಕಾರಗಳು ಯುವಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ.

ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಸಂದೇಶ ಜನರಿಗೆ ತಲುಪಿಸುವ ವೇದಿಕೆಯಾಗಿಯೂ ಬಳಕೆಯಾಗುತ್ತಿರುವುದು ಗಮನಾರ್ಹ. ವಿವಿಧ ಬಡಾವಣೆಗಳ ಯುವಕರು ಗಣಪತಿ ಮಂಟಪಗಳ ನಿರ್ಮಾಣದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಭಕ್ತಿಯ ಜತೆಗೆ ಸೃಜನಶೀಲತೆ: ಬಳ್ಳಾರಿಯಲ್ಲಿ ಪ್ರತಿವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಗಣಪತಿ ಮೂರ್ತಿಗಳ ಗಾತ್ರ, ವಿನ್ಯಾಸ ಮತ್ತು ಅಲಂಕಾರದಲ್ಲಿ ಹೊಸತನ ಕಂಡುಬರುತ್ತಿದೆ. ಈ ಬಾರಿ ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳು, ದೇವರ ರೂಪಗಳು ಹಾಗೂ ಐತಿಹಾಸಿಕ ವ್ಯಕ್ತಿಗಳ ಮಾದರಿಗಳನ್ನು ಗಣಪತಿ ಮಂಟಪಗಳ ಅಲಂಕಾರದಲ್ಲಿ ಬಳಸಿರುವುದು ಗಮನಾರ್ಹವಾಗಿದೆ.

ಒಂದು ಕಡೆ ಗಣಪತಿ ಮೂರ್ತಿಗೆ ಪೂಜೆ, ಮತ್ತೊಂದೆಡೆ ಅದನ್ನು ಸುತ್ತುವರೆದಿರುವ ಕಲಾಕೃತಿಗಳು ಮತ್ತು ಮಾದರಿಗಳ ಮೂಲಕ ಜನರಿಗೆ ಮಾಹಿತಿ ಹಾಗೂ ಅನುಭವ ನೀಡುವ ಪ್ರಯತ್ನ ನಡೆಯುತ್ತಿದೆ. ಮಕ್ಕಳು ಹಾಗೂ ಯುವಕರಲ್ಲಿ ಇಂತಹ ಅಲಂಕಾರಗಳು ಕುತೂಹಲ ಮೂಡಿಸುತ್ತಿವೆ. ವಿವಿಧ ಬಡಾವಣೆಗಳ ನಿವಾಸಿಗಳು ತಮ್ಮ ತಮ್ಮ ಪ್ರದೇಶದಲ್ಲಿ ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಿಸುತ್ತಿರುವುದು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

ರಾತ್ರಿ ವೇಳೆ ವಿದ್ಯುತ್ ದೀಪಗಳ ಝಗಮಗ:ಹಗಲಿನಲ್ಲಿ ಸರಳವಾಗಿ ಕಾಣುವ ಗಣಪತಿ ಮಂಟಪಗಳು ರಾತ್ರಿ ವೇಳೆ ವಿದ್ಯುತ್ ದೀಪಗಳ ಝಗಮಗದಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿವೆ. ಬಣ್ಣಬಣ್ಣದ ಬೆಳಕಿನ ಅಲಂಕಾರ, ಹೂವಿನ ಅಲಂಕಾರ, ಧಾರ್ಮಿಕ ಚಿತ್ರಣ ಹಾಗೂ ವಿವಿಧ ಮಾದರಿಗಳು ಮಂಟಪಗಳ ಸೌಂದರ್ಯ ಹೆಚ್ಚಿಸಿವೆ.

ನಗರದ ಹಲವು ಪ್ರದೇಶಗಳಲ್ಲಿ ಸಂಜೆ ನಂತರ ಜನಸಂದಣಿ ಹೆಚ್ಚಾಗುತ್ತಿದೆ. ಗಣಪತಿ ದರ್ಶನಕ್ಕೆ ಬರುವ ಭಕ್ತರು ಮಂಟಪಗಳ ಅಲಂಕಾರ ವೀಕ್ಷಿಸಿ, ಕುಟುಂಬ ಸದಸ್ಯರೊಂದಿಗೆ ಚಿತ್ರ ತೆಗೆಸಿಕೊಳ್ಳುತ್ತಿದ್ದಾರೆ. ಮಕ್ಕಳಂತೂ ವಿವಿಧ ಮಾದರಿಯ ಗಣಪತಿ ಕಂಡು ಸಂಭ್ರಮಿಸುತ್ತಿದ್ದಾರೆ.

ಗಣೇಶೋತ್ಸವದ ಹಿನ್ನೆಲೆ ಬಡಾವಣೆಗಳಲ್ಲಿ ನಿವಾಸಿಗಳ ನಡುವೆ ಒಗ್ಗಟ್ಟು ಹೆಚ್ಚಾಗಿದೆ. ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ಉತ್ಸವದ ಸಿದ್ಧತೆಯಲ್ಲಿ ಕೈಜೋಡಿಸಿದ್ದಾರೆ. ಮಂಟಪ ನಿರ್ಮಾಣ, ಅಲಂಕಾರ, ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆಯಲ್ಲಿ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಈ ಬಾರಿ ಬಳ್ಳಾರಿಯಲ್ಲಿ ಗಣೇಶೋತ್ಸವವು ಕೇವಲ ಗಣಪತಿ ಪ್ರತಿಷ್ಠಾಪನೆಗೆ ಸೀಮಿತವಾಗದೆ, ಭಕ್ತಿ, ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಸೃಜನಶೀಲತೆಯ ಸಂಗಮವಾಗಿ ರೂಪುಗೊಂಡಿದೆ. ಕೇದಾರನಾಥದ ದರ್ಶನ, ಮಂತ್ರಾಲಯದ ರಾಯರ ಬೃಂದಾವನ, ತಿರುಪತಿ ವೆಂಕಟರಮಣ, ಕನಕದುರ್ಗಮ್ಮ, ಶಿವಾಜಿ ಮಹಾರಾಜ ಸೇರಿದಂತೆ ಹತ್ತು ಹಲವು ವಿಭಿನ್ನ ಮಾದರಿಗಳ ಮೂಲಕ ವಿಘ್ನವಿನಾಯಕನ ಆರಾಧನೆ ನಡೆಯುತ್ತಿದೆ. ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ಈ ವಿಶಿಷ್ಟ ಗಣಪತಿಗಳು ಗಣೇಶೋತ್ಸವದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದ್ದು, ಬಳ್ಳಾರಿಯ ಜನರ ಧಾರ್ಮಿಕ ನಂಬಿಕೆಯ ಜತೆಗೆ ಅವರ ಸೃಜನಶೀಲ ಮನಸ್ಸಿಗೂ ಸಾಕ್ಷಿಯಾಗಿವೆ.