ಗಣೇಶೋತ್ಸವ ಸಂಸ್ಕೃತಿಯ ಪ್ರತೀಕ

| Published : Sep 26 2024, 09:55 AM IST

ಸಾರಾಂಶ

ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುದರ ಸಲುವಾಗಿ ಇದನ್ನು ಸಾಧನವಾಗಿ ಬಳಸಿಕೊಂಡರು

ಲಕ್ಷ್ಮೇಶ್ವರ: ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣಪತಿಯನ್ನು ನಮ್ಮ ಸಂಸ್ಕೃತಿ, ಹಿಂದೂ ಧರ್ಮದ ಉಳಿವಿಗಾಗಿ ಪ್ರತಿಷ್ಠಾಪನೆ ಮಾಡಲು ಆರಂಭಿಸಿದರು ಎಂದು ಗದಗ ಜಿಲ್ಲಾ ಸಾರ್ವಜನಿಕ ಗಜಾನನೊತ್ಸವ ಮಹಾಮಂಡಳಿ ಅಧ್ಯಕ್ಷ ರಾಜಣ್ಣ ಮಲ್ಲಾಡದ ಹೇಳಿದರು.

ಬುಧವಾರ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ ಎದುರಗಡೆ ಲಕ್ಷ್ಮೇಶ್ವರ ತಾಲೂಕು ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುದರ ಸಲುವಾಗಿ ಇದನ್ನು ಸಾಧನವಾಗಿ ಬಳಸಿಕೊಂಡರು. ಗಣೇಶ ಹಬ್ಬದಲ್ಲಿ ಯುವಕರು ನಮ್ಮ ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಶ್ರೀ ರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಸಾರ್ವಜನಿಕ ಗಣೇಶ ಚತುರ್ಥಿ ಅಂದರೆ ಡಿಜೆಗೆ ಅಷ್ಟೇ ಸೀಮಿತವಾಗಿರಬಾರದು, 131 ವರ್ಷದ ಹಿಂದೆ ಮನೆಯಲ್ಲಿ ಸೀಮಿತವಾಗಿದ್ದ ಗಣೇಶ ಹಬ್ಬ ಸಾರ್ವಜನಿಕವಾಗಿ ಎಲ್ಲ ಹಿಂದೂಗಳು ಜಾತಿ ಬೇಧಭಾವ ಮರೆತು ಎಲ್ಲರೂ ಕೂಡಿಕೊಂಡು ಒಂದಾಗಿ ಹಬ್ಬ ಆಚರಣೆ ಮಾಡುವ ಉದ್ದೇಶ ಹೊಂದಿದೆ. ಗಣೇಶ ಹಬ್ಬದಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯ ಯುವಕರು ಮಾಡಲಿ ದಿನನಿತ್ಯ ಪೂಜೆ ಸಲ್ಲಿಸುವಾಗ ಹೆಚ್ಚಿನ ಸಂಖ್ಯೆ ಜನರು ಕೂಡಿಕೊಂಡು ಗಣೇಶ ನಾಮಸ್ಮರಣೆ ಮಾಡಬೇಕು. ಕೆಲವು ಕಡೆ ಡಿಜೆ ಯಾವಾಗ ಸೆಟ್ ಆಗುತ್ತೆ ಅವಾಗ ಗಣೇಶ ವಿಸರ್ಜನೆ ಮಾಡುತ್ತಾರೆ ಈ ಪದ್ಧತಿ ಬಿಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಕೆಂಚಲಾಪುರ ಓಣಿಯ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಪ್ರಥಮ, ಪಿಎಸ್‍ಬಿಡಿ ಶಾಲೆ ಹತ್ತಿರದ ಈಶ್ವರ ಯುವಕ ಮಂಡಳಿಯ ಗಣೇಶ ದ್ವಿತೀಯ, ಹಳ್ಳದಕೇರಿ ಓಣಿಯ ಮಾರುತಿ ಯುವಕ ಮಂಡಳಿಯ ಗಣೇಶ ತೃತೀಯ ಸ್ಥಾನ ಪಡೆದು ಈ ಯುವಕ ಮಂಡಳದವರು ಬಹುಮಾನ ಪಡೆದರು.

ಸಾರ್ವಜನಿಕ ಗಜಾನನೋತ್ಸವ ಮಂಡಳಿ ಸಂಚಾಲಕ ಈರಣ್ಣ ಪೂಜಾರ, ಹಿಂದೂ ಮಹಾ ಸಭಾ ಗಣಪತಿ ಸಂಘ ಅಧ್ಯಕ್ಷ ಫಕ್ಕೀರೇಶ ಅಣ್ಣಿಗೇರಿ, ಕರವೇ ಪ್ರವೀಣಶೆಟ್ಟಿ ಬಣದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ, ಮಹೇಶ ಮೇಟಿ, ಬಿಜಿಪಿ ಯುವ ಮೋರ್ಚಾ ತಾಲೂಕಾಧ್ಯಕ್ಷ ಬಸವರಾಜ ಚಕ್ರಸಾಲಿ ಸೇರಿದಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು, ಗಣೇಶ ಯುವಕ ಮಂಡಳಿಗಳ ಸದಸ್ಯರು ಇದ್ದರು.