ಸಾರಾಂಶ
ಶಿರಸಿ: ಜಿಲ್ಲಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮನೆ- ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿದೆ. ಶಿರಸಿಯಲ್ಲಿ ಮೊದಲಿನಿಂದಲೂ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಸಾಕಷ್ಟು ಮಹತ್ವ ಇದೆ. ಈ ಬಾರಿಯೂ ಹತ್ತಾರು ಸಾರ್ವಜನಿಕ ಸ್ಥಳಗಳಲ್ಲಿ ಮಂಗಲಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷವಾಗಿ ಶಿರಸಿಯಲ್ಲೇ ಮೊದಲ ಬಾರಿಗೆ ಅಯ್ಯಪ್ಪ ನಗರದಲ್ಲಿ ೧೩ ಅಡಿ ಎತ್ತರದ ಗಣಪತಿಯನ್ನು ಕೂರಿಸಲಾಗಿದೆ. ದಾವಣಗೆರೆಯಿಂದ ಇದನ್ನು ತಯಾರಿಸಿ ಶಿರಸಿಗೆ ತರಲಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ.ಶಿರಸಿಯ ಮಾರಿಕಾಂಬಾ ಯುವಕ ಮಂಡಳದಿಂದ ೫೦ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಹಬ್ಬದ ಆಚರಣೆ ನಡೆದಿದ್ದು, ದೇವಸ್ಥಾನದ ಕಲ್ಯಾಣಮಂಟಪದ ಹಿಂಬದಿಯ ಜಾಗದಲ್ಲಿ ಲಕ್ಷಾಂತರ ರು. ವೆಚ್ಚದ ಮಂಟಪ ನಿರ್ಮಾಣ ಮಾಡಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಅದೇ ರೀತಿ ಶಿರಸಿಯ ಅತ್ಯಂತ ಹಳೆಯದಾದ ಮಾರ್ಕೆಟ್ ಗಣಪತಿಯು ಈ ಬಾರಿ ೬೦ನೇ ವರ್ಷದ ಸಂಭ್ರಮದಲ್ಲಿದೆ. ಗಣೇಶ ನಗರ, ಮರಾಠಿಕೊಪ್ಪ, ಡ್ರೈವರ್ ಕಟ್ಟೆ, ಹನುಮಗಿರಿ, ದೇವಿಕೆರೆ, ಝೂ ಸರ್ಕಲ್ ಹೀಗೆ ವಿವಿಧೆಡೆ ಅತ್ಯಂತ ಸುಂದರವಾಗಿ ಮಂಟಪ ಹಾಗೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಬ್ಬದ ಪ್ರಯುಕ್ತ ಬಹುತೇಕ ಕಡೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿರಸಿಯ ದೀನದಾಯಳ ಭವನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಘ್ನ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ನಡೆದಿದ್ದು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಯೂ ಕಾಂಗ್ರೆಸ್ ಪ್ರಮುಖರಿಂದ ಗಣಪತಿ ಪೂಜೆ ನಡೆದಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಭಾನುವಾರ ಗಣೇಶ ಮಂಟಪಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಶ್ರೀಧರನ ಕರದಲ್ಲಿ ಮೂಡಿದ ಸುಂದರ ಗಣಪ!ಯಲ್ಲಾಪುರ: ಇಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಾರ್ಯಾಲಯದಲ್ಲಿ ಸಿಬ್ಬಂದಿಗಳೆಲ್ಲರೂ ಸೇರಿ ಕಳೆದ ೩೦ ವರ್ಷಗಳಿಂದ ಗಣೇಶ ಚತುರ್ಥಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದಾರೆ.ವಿಶೇಷವೆಂದರೆ ಕಳೆದ ಅನೇಕ ವರ್ಷಗಳಿಂದ ಬಾಲಕ ಶ್ರೀಧರ ಸಂಜೀವ ಕೆರೆಕರ(ಕೆಎಚ್‌ಬಿ ಕಾಲನಿ, ಶಿರಸಿ ಚಂದನ ಆಂಗ್ಲ ಮಾಧ್ಯಮ ವಿದ್ಯಾರ್ಥಿ) ಈತನು ಸುಂದರ ಮುತ್ತು, ಹವಳಗಳಿಂದ ಅಲಂಕೃತಗೊಂಡ ಪರಿಸರಸ್ನೇಹಿ ಗಣೇಶಮೂರ್ತಿಯನ್ನು ತಯಾರಿಸಿದ್ದು, ಕಚೇರಿಯ ಅಧಿಕಾರಿಗಳಾದ ಅಶೋಕ ಬಂಟ, ಸಿಬ್ಬಂದಿ ಈತ ತಯಾರಿಸಿದ ಗಣೇಶನ ಮೂರ್ತಿಯನ್ನು ಕಚೇರಿಯಲ್ಲಿ ಪ್ರತಿಷ್ಠಾಪಿಸಲು ನಿರ್ಣಯಿಸಿದರು. ಗಣೇಶನ ಮೂರ್ತಿಯನ್ನು ಸೆ. ೭ರಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.ಶಶಿಕಲಾ ಸಂತೋಷ ಬಾಂದಿವಡೇಕರ ಅವರು ಗಣಪತಿಯ ಪ್ರತಿಷ್ಠಾಪನಾ ಸ್ಥಳದಲ್ಲಿ ಆಕರ್ಷಣೆಗಾಗಿ ಕೇದಾರನಾಥ ದೇವಸ್ಥಾನಕ್ಕೆ ಕೈಗೊಳ್ಳುವ ಯಾತ್ರೆಯ ಸಂಪೂರ್ಣ ಚಿತ್ರಣವನ್ನು ತಯಾರಿಸಿ, ಅಲಂಕರಿಸಿರುವುದು ವಿಶೇಷವಾಗಿದೆ. ನಾಲ್ಕನೇ ದಿನ ಮಂಗಳವಾರ ಮಹಾಪೂಜೆ, ಪ್ರಸಾದ ಭೋಜನ ವಿತರಣೆ ಹಾಗೂ ಐದನೇ ದಿನ ಬುಧವಾರದಂದು ಮಂಗಳಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಿಸಲಾಗುತ್ತದೆ.