ಗುಟ್ಕಾ ತುಂಬಿದ ಬಾಕ್ಸ್, ಮೊಬೈಲ್‌ಗಳನ್ನು ಡಕಾಯಿತಿ ಮಾಡಿದ ಗ್ಯಾಂಗ್‌ನ್ನು ಶನಿವಾರ ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಣಿಬೆನ್ನೂರು: ಗುಟ್ಕಾ ತುಂಬಿದ ಬಾಕ್ಸ್, ಮೊಬೈಲ್‌ಗಳನ್ನು ಡಕಾಯಿತಿ ಮಾಡಿದ ಗ್ಯಾಂಗ್‌ನ್ನು ಶನಿವಾರ ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ನಗರದ ಶಾಬಾಜ್ ಅಹ್ಮದ್ ತಂದೆ ಇಮ್ತಿಯಾಜ್ ಅಹ್ಮದ್, ಹೊನ್ನಾಳಿ ತಾಲೂಕು ಹೊಳೆಹರಳಹಳ್ಳಿ ಬಸವರಾಜ ತಂದೆ ವೀರಪ್ಪ ಅಂಗಡಿ, ರಾಣಿಬೆನ್ನೂರಿನ ನಾಡಿಗ್ಗೇರ ಓಣಿಯ ಜಗದೀಶ ತಂದೆ ಶಂಕರಪ್ಪ ಜಾಲಿಹಾಳ, ರಾಣಿಬೆನ್ನೂರು ತಾಲೂಕು ಕಾಕೋಳ ಗ್ರಾಮದ ಆನಂದ ತಂದೆ ಹನುಮಂತಪ್ಪ ಶಿವಣ್ಣನವರ ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ: ಅ.28ರಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಉಗಾರಖುರ್ದು ಗ್ರಾಮದ ಅರ್ಮಾನ ತಂದೆ ನಯೀಮ್‌ಪಾಷಾ ಪಟಾಯಿತ್ ಎಂಬುವರು ತಮಗೆ ಸಂಬಂಧಿಸಿದ ಎರಿಟಿಗಾ ಕಾರಿನಲ್ಲಿ ತನ್ನ ಸ್ನೇಹಿತ ಸಮೀರ ತಂದೆ ಮಹ್ಮದಅಜಮ್ ಅವಟಿ ಇವರೊಂದಿಗೆ ಬೆಳಗಾವಿಯಿಂದ ಹಾವೇರಿಗೆ ಬಂದು ಹಾವೇರಿಯಲ್ಲಿ ಆರ್.ಎಮ್.ಡಿ ಗುಟ್ಕಾ ಪಾನ್ ಮಸಾಲದ 25 ಬಾಕ್ಸಗಳನ್ನು ಖರೀದಿ ಮಾಡಿಕೊಂಡು ತನ್ನ ಸ್ನೇಹಿತ ಶಬಾಜ್‌ಅಹ್ಮದ ಖಾನ್ ಇವರಿಗೆ ರಾಣೇಬೆನ್ನೂರಿಗೆ ಡ್ರಾಪ್ ಮಾಡಲು ತಿಳಿಸಿದರು. ಅದರಂತೆ ರಾಣಿಬೆನ್ನೂರು ನಗರದ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಬಂದಾಗ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ದೂರುದಾರ ಹಾಗೂ ದೂರುದಾರನ ಸಂಗಡ ಇದ್ದ ದೂರುದಾರನ ಸ್ನೇಹಿತ ಸಮೀರ ಅವಟೆ ಇವರುಗಳಿಗೆ ಚಾಕು ತೋರಿಸಿ, ಬಡಿಗೆಯಿಂದ ಹಲ್ಲೆ ನಡೆಸಿ ಅವರ ಬಳಿಯಿದ್ದ ರು.1.35 ಲಕ್ಷದ ಐಪೋನ್, ರು.25 ಸಾವಿರ ಮೌಲ್ಯದ ಪೋಕೋ ಮೊಬೈಲ್ ಹಾಗೂ 7.45 ಲಕ್ಷ ಮೌಲ್ಯದ 25 ಬಾಕ್ಸ್ ಆರ್.ಎಮ್.ಡಿ ಪಾನ್ ಮಸಾಲ್ ಬಾಕ್ಸಗಳು ಸೇರಿದಂತೆ ಒಟ್ಟು 9.05 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಕುರಿತು ಅರ್ಮಾನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಎಸ್‌ಪಿ ಯಶೋದ ವಂಟಗೋಡಿ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ರಾಣಿಬೆನ್ನೂರು ಡಿವೈಎಸ್‌ಪಿ ಲೊಕೇಶ ಜೆ. ಮಾರ್ಗದರ್ಶನಲ್ಲಿ ಆರೋಪಿತರ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿದ್ದರು. ಶಹರ ಸಿಪಿಐ ವೆಂಕಟೇಶ ಎನ್, ನೇತೃತ್ವದ ತಂಡ

ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಪ್ರಕರಣ ದಾಖಲಾದ 48 ಗಂಟೆಯ ಒಳಗಾಗಿ ಕ್ಷೀಪ್ರ ಕಾರ್ಯಾಚರಣೆ ಕೈಗೊಂಡು ವೈಜ್ಞಾನಿಕ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ವ್ಯಾಪಕ ಪರಿಶೀಲನೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.60 ಲಕ್ಷ ಮೌಲ್ಯದ ಎರಡು ಮೊಬೈಲ್‌ಗಳು, 50 ಸಾವಿರ ನಗದು, ಆರೋಪಿತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿನ ರು.1.80 ಲಕ್ಷ ಹಣ ಚಲಾವಣೆ ಮಾಡಲು ಬಾರದಂತೆ ಸ್ಥಗಿತ ಮಾಡಿಸಲಾಗಿದೆ. ರು. 59.600 ಮೌಲ್ಯದ 2 ಬಾಕ್ಸ್ ಆರ್.ಎಮ್.ಡಿ ಪಾನ್‌ಮಸಾಲಾ ಬಾಕ್ಸಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿಎಸ್‌ಐಗಳಾದ ಪರಮೇಶ ಡಿ.ಜಿ, ಎಚ್. ಎನ್. ದೊಡ್ಡಮನಿ, ಎಎಸ್‌ಐ ಡಿ.ಜಿ.ಇಂಗಳಗೊಂದಿ, ಸಿಬ್ಬಂದಿಗಳಾದ ಎಂ.ಆರ್. ಬುಳ್ಳಾಪುರ, ಪಿ.ಕೆ. ಲಮಾಣಿ, ವೈ.ಬಿ. ಓಲೇಕಾರ, ಮೋಹನ ಮೇಲಗಿರಿ, ಎಲ್. ಬಿ. ಕರಿಗಾರ, ಎಚ್.ಎಲ್. ದನವಿನಮನಿ, ಎಚ್. ಟಿ. ನಗಾವತ್, ಮಂಜುನಾಥ ಯರೇಸಿಮಿ, ಆರ್.ಎಚ್. ಕುಸಗೂರು, ಎಸ್.ಕೆ. ಬಿಲ್ಲಳ್ಳಿ, ಎಸ್.ಎಲ್. ರಾಥೋಡ, ಮಂಜು ರೊಟ್ಟಿಯವರ, ಎಸ್.ಎಮ್ ಗಾಂಜಿ ಮತ್ತು ತಾಂತ್ರಿಕ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.