ವಿದೇಶಿ ಕರೆನ್ಸಿ ಬದಲಾಯಿಸಿ ಹಣ ದ್ವಿಗುಣಗೊಳಿಸಿಕೊಡುವ ಆಸೆ ತೋರಿಸಿ ಶ್ರೀಮಂತರಿಂದ ಹಣ ಸುಲಿಗೆ ಮಾಡುತ್ತಿದ್ದ 15 ಮಂದಿ ಕಿಡಿಗೇಡಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶಿ ಕರೆನ್ಸಿ ಬದಲಾಯಿಸಿ ಹಣ ದ್ವಿಗುಣಗೊಳಿಸಿಕೊಡುವ ಆಸೆ ತೋರಿಸಿ ಶ್ರೀಮಂತರಿಂದ ಹಣ ಸುಲಿಗೆ ಮಾಡುತ್ತಿದ್ದ 15 ಮಂದಿ ಕಿಡಿಗೇಡಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೊಕ್ಕನಹಳ್ಳಿಯ ಬೆಂಜಮಿನ್‌ ಹರ್ಷ, ಎಂ.ರಕ್ಷಿತ್‌ ಅಲಿಯಾಸ್ ಅಪ್ಪು, ಸೈಯದ್‌ ಆಖಿಬ್‌ ಪಾಷ, ಎಂ.ಡಿ. ಸುಹೇಲ್‌, ಮುಹೀಬ್‌ ಅಲಿಯಾಸ್ ಗುಡ್ಡು, ಸಲ್ಮಾನ್‌ ಖಾನ್‌ ಅಲಿಯಾಸ್ ಬೈಜು, ಕೆಂಗೇರಿ ಉಪನಗರದ ಶ್ರೀಹರ್ಷ, ಸೈಯದ್ ಅಮ್ಜದ್‌, ಸೈಯದ್ ಅಫ್ರೀದ್‌, ವಾಸೀಂ ಅಲಿಯಾಸ್ ತರಕಾರಿ, ವಾಸೀಂ ಅಲಿಯಾಸ್ ಡ್ರೈವರ್ ವಾಸೀಂ, ಸಲ್ಮಾನ್ ಖಾನ್‌, ಮೊಸಿನ್‌ ಖಾನ್‌ ಅಲಿಯಾಸ್ ರಚಿತ್‌, ಬಾಗಲಗುಂಟೆಯ ಚಂದ್ರಶೇಖರ್‌ ಹಾಗೂ ಅತೀಕ್‌ ಅಲಿಯಾಸ್ ಟಿಂಕರ್‌ ಅಡ್ಡು ಬಂಧಿತರಾಗಿದ್ದು, ಆರೋಪಿಗಳಿಂದ 1.11 ಕೋಟಿ ರು. ನಗದು, ನಾಲ್ಕು ಕಾರು, ನಾಲ್ಕು ಬೈಕ್‌ಗಳು ಹಾಗೂ ಮಾರಕಾಸ್ತ್ರಗಳು ಸೇರಿದಂತೆ ಒಟ್ಟು 1.4 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ವಿದೇಶಿ ಕರೆನ್ಸಿ ನೆಪದಲ್ಲಿ 2 ಕೋಟಿ ರು. ಹಣ ದರೋಡೆ ಮಾಡಲಾಗಿದೆ ಎಂದು ಆರೋಪಿಸಿ ಉದ್ಯಮಿ ಕೆಂಗೇರಿ ಉಪನಗರದ ಶ್ರೀಹರ್ಷ ದೂರು ಕೊಟ್ಟಿದ್ದ. ಆದರೆ ಪೊಲೀಸರು ತನಿಖೆಗಿಳಿದಾಗ ಆತನ ಮೋಸದ ಬಣ್ಣ ಬಯಲಾಗಿದೆ. ಕೊನೆಗೆ ದರೋಡೆ ನಾಟಕದ ಪರದೆ ಕಳಚಿ ಬಿದ್ದು ತನ್ನ ತಂಡದ ಜತೆ ಹರ್ಷ ಜೈಲು ಸೇರಿದ್ದಾನೆ.

ವಿದೇಶಿ ಕರೆನ್ಸಿ ಹೆಸರಿನಲ್ಲಿ ವಂಚನೆ

ಶ್ರೀಮಂತರಿಗೆ ಯುಎಸ್‌ಡಿಟಿ (United States Dollar Tether) ಡಿಜಿಟಲ್ ಕರೆನ್ಸಿಗೆ ಪರಿವರ್ತಿಸಿ ಆ ಹಣವನ್ನು ಆರ್‌ಟಿಜಿಎಸ್‌ ಪ್ರೀಮಿಯಂ ಮೂಲಕ ಜಿಎಸ್‌ಟಿ ಸಮೇತ ದ್ವಿಗುಣಗೊಳಿಸಿ ಮರಳಿಸುವುದಾಗಿ ಶ್ರೀ ಹರ್ಷ ಗ್ಯಾಂಗ್ ನಂಬಿಸಿ ಬಲೆಗೆ ಬೀಳಿಸಿಕೊಳ್ಳುತ್ತಿತ್ತು. ಈತನ ಮಾತು ನಂಬಿ ಹಣ ಪರಿವರ್ತನೆಗೆ ಬರುವ ಉದ್ಯಮಿಗಳು ಹಾಗೂ ವ್ಯಾಪಾರಿಗಳು ಸೇರಿದಂತೆ ಹಣವಂತರನ್ನು ತನ್ನ ಸಹಚರರ ಮೂಲಕ ಶ್ರೀ ಹರ್ಷ ದರೋಡೆ ಮಾಡಿಸುತ್ತಿದ್ದ. ಬಳಿಕ ದರೋಡೆ ಬಗ್ಗೆ ದೂರು ಕೊಡದಂತೆ ತನ್ನ ಪರಿಚಿತರಿಗೆ ಆತ ಹೇಳುತ್ತಿದ್ದ. ಬಳಿಕ ತನ್ನ ಸಹಚರರಿಂದ ದೋಚಿದ್ದ ಹಣವನ್ನು ಶ್ರೀಹರ್ಷ ಹಂಚಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಎಂ.ಎಸ್‌.ಪಾಳ್ಯದಲ್ಲಿ ತನ್ನ ಸಹಚರ ಬೇಂಜಮಿನ್‌ ಬಳಿಗೆ ಹಣ ಪರಿವರ್ತನೆ ನೆಪದಲ್ಲಿ ಎಲೆಕ್ಟ್ರಿಕ್ ವಸ್ತುಗಳ ವ್ಯಾಪಾರಿ ಭರತ್ ಸಿಂಗ್ ಹಾಗೂ ಅವರ ಸ್ನೇಹಿತನ ಜತೆ ಶ್ರೀಹರ್ಷ ಕರೆ ತಂದಿದ್ದ. ಆಗ ಹಣದ ಮಾತುಕತೆ ವೇಳೆ ಬೇಂಜಮಿನ್‌ನ ಕಚೇರಿಯಲ್ಲಿ ಹರ್ಷನ ಕೆಲ ಸಹಚರರು 2 ಕೋಟಿ ರು. ಹಣ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸಿ.ಬಿ. ಶಿವಸ್ವಾಮಿ ತಂಡವು, ಸತತ ಕಾರ್ಯಾಚರಣೆ ವೇಳೆ ಶ್ರೀ ಹರ್ಷನ ಮೋಸದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ತುಮಕೂರು ಜಿಲ್ಲೆಯ ಶ್ರೀ ಹರ್ಷ, ಜನರಿಗೆ ನಾನಾ ವಿವಿಧದಲ್ಲಿ ಮೋಸ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಈತನ ಮೇಲೆ ಕೆ.ಆರ್‌.ಪುರ ಸೇರಿದಂತೆ ಇತರೆ ಠಾಣೆಗಳಲ್ಲಿ ಸಹ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ತಾನೇ ದೂರು ಕೊಟ್ಟ ಹರ್ಷ

ತನ್ನ ಮೇಲೆ ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು ದರೋಡೆ ಬಗ್ಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಹರ್ಷನೇ ದೂರು ಕೊಟ್ಟಿದ್ದ. ಆದರೆ ಹಣ ಕಳೆದುಕೊಂಡಿದ್ದ ಎಲೆಕ್ಟ್ರಿಕಲ್ ವಸ್ತುಗಳ ವ್ಯಾಪಾರಿ ಭರತ್ ಸಿಂಗ್ ಹಾಗೂ ಅವರ ಸ್ನೇಹಿತನಿಗೆ ಆತ ದಾರಿ ತಪ್ಪಿಸಿದ್ದ. ಕೊನೆಗೆ ಹಣದ ಮೂಲದ ಬಗ್ಗೆ ಕೆದಕಿದಾಗ ವಾರಸುದಾರರು ಪತ್ತೆಯಾಗಿದ್ದಾರೆ. ಚಂದ್ರಶೇಖರ್‌ ಮೂಲಕ ಭರತ್‌ ಸಿಂಗ್‌ಗೆ ಹರ್ಷ ಗಾಳ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.