ಕೋಟೆಬೆಟ್ಟದಲ್ಲಿ ಪ್ರವಾಸಿಗರ ಮೇಲೆ ತಂಡ ಹಲ್ಲೆ: ಪ್ರಕರಣ ದಾಖಲು

| Published : Jun 24 2024, 01:34 AM IST

ಕೋಟೆಬೆಟ್ಟದಲ್ಲಿ ಪ್ರವಾಸಿಗರ ಮೇಲೆ ತಂಡ ಹಲ್ಲೆ: ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಸಿ ತಾಣ ಕೋಟೆಬೆಟ್ಟಕ್ಕೆ ಆಗಮಸಿದ್ದ ಪ್ರವಾಸಿಗರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ/ಮಡಿಕೇರಿ

ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೋಟೆಬೆಟ್ಟಕ್ಕೆ ಆಗಮಿಸಿದ್ದ ಪ್ರವಾಸಿಗರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿ, ಪರಾರಿಯಾದ ಘಟನೆ ಭಾನುವಾರ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಕೋಟೆಬೆಟ್ಟಕ್ಕೆ ಆಗಮಿಸಿದ್ದ ಕುಟುಂಬದೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಇಬ್ಬರು ಯುವಕರು, ಮನ ಬಂದಂತೆ ಹೆಂಗಸರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕರು ಸ್ಥಳೀಯರೆನ್ನಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪೊಲೀಸ್ ಇಲಾಖೆ ಸ್ಪಷ್ಟನೆ:

ಕೋಟೆಬೆಟ್ಟದಲ್ಲಿ ಭಾನುವಾರ ಬೆಳಿಗ್ಗೆ ಪ್ರವಾಸಿಗರು ಮತ್ತು ಇಬ್ಬರು ವ್ಯಕ್ತಿಗಳಿಂದ ಕ್ಷುಲ್ಲಕ ಕಾರಣದಿಂದ ಗಲಾಟೆ ನಡೆದಿದ್ದು, ಈ ಸಂದರ್ಭ ಯುವತಿಯ ಚಿನ್ನದ ಸರ ಬಿದ್ದುಹೋಗಿರುವುದೇ ವಿನಃ ಅದನ್ನು ಕಿತ್ತುಕೊಂಡಿರುವುದಿಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣವಾದ ಕೋಟೆಬೆಟ್ಟಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ಪ್ರವಾಸಿಗರು ಕಾರಿನಲ್ಲಿ ತೆರಳುವ ಸಂದರ್ಭ ಮಾರ್ಗಮಧ್ಯದಲ್ಲಿ ಸಮಯ ಸುಮಾರು 10.25ರ ವೇಳಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅದೇ ಮಾರ್ಗದಲ್ಲಿ ಬೈಕಿನಲ್ಲಿ ಹಿಂದೆಯಿಂದ ಬರುತ್ತಿದ್ದರು. ಕಾರಿನವರು ರಸ್ತೆ ಬಿಡಲಿಲ್ಲವೆಂಬ ವಿಚಾರವಾಗಿ ಮಾತಿಗೆ ಮಾತು ಬೆಳೆದು ಬೈಕ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು ಕೈ ಮತ್ತು ಹೆಲ್ಮೆಟ್ ನಿಂದ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಸಂದರ್ಭ ಬಿಡಿಸಲು ಹೋದ ಕಾರಿನಲ್ಲಿದ್ದ ಯುವತಿಯರ ಜೊತೆ ವಾಗ್ವಾದ ನಡೆದಿದೆ. ಈ ಗಲಾಟೆಯಲ್ಲಿ ಒಬ್ಬಳು ಯುವತಿಯು ಧರಿಸಿದ್ದ ಚಿನ್ನದ ಸರ ಆಕೆಗೆ ತಿಳಿಯದಂತೆ ಬಿದ್ದು ಹೋಗಿದ್ದು, ನಂತರ ಹುಡುಗಿದಾಗ ಸಿಕ್ಕಿಲ್ಲ ಎಂದು ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.

ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಾಸಿಗರಿಂದ ಚಿನ್ನದ ಸರ ಕಿತ್ತುಕೊಳ್ಳುವ ಉದ್ದೇಶದಿಂದ ಗಲಾಟೆ ನಡೆಸಿರುವುದಾಗಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವುದು ಕಂಡುಬಂದಿರುತ್ತದೆ. ಈ ರೀತಿಯ ಘಟನೆಗಳು ನಡೆದಿರುವುದಿಲ್ಲ ಮತ್ತು ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಪ್ರವಾಸಿಗರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ಈಗಾಗಲೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.